MS Dhoni health updates: ಎಂಎಸ್ ಧೋನಿ ಹೆಲ್ತ್ ಅಪ್‌ಡೇಟ್ ನೀಡಿದ ಪತ್ನಿ ಸಾಕ್ಷಿ- ಏನಾಗಿದೆ ಕ್ಯಾಪ್ಟನ್ ಕೂಲ್‌ಗೆ?
ಚೆನ್ನೈ, ಜುಲೈ 29: ಖ್ಯಾತ ಕ್ರಿಕೆಟಿಗ ಎಂಎಸ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ನಿರ್ಮಿಸಿರುವ ಬಹು ನಿರೀಕ್ಷಿತ ತಮಿಳು ಚಿತ್ರ, 'LGM: ಲೆಟ್ಸ್ ಗೆಟ್ ಮ್ಯಾರೀಡ್' ಜುಲೈ 28 ರಂದು ತೆರೆಗೆ ಬಂದಿದೆ. ಇದು ಅಭಿಮಾನಿಗಳಲ್ಲಿ ತೀವ್ರ ಉತ್ಸಾಹವನ್ನು ಕೆರಳಿಸಿದೆ. ಆದರೆ, ಈ ಚಿತ್ರದ ಸ್ಕ್ರೀನಿಂಗ್ ಸಮಯದಲ್ಲಿ ದೋನಿ ಅವರು ಗೈರಾಗಿದ್ದಾರೆ. ಇದು ಅಭಿಮಾನಿಗಳಲ್ಲಿ ಆತಂಕವನ್ನು ಉಂಟುಮಾಡಿದೆ.
ಚೈನ್ನೈನಲ್ಲಿ ನಡೆದ ಚಿತ್ರದ ಸ್ಕ್ರೀನಿಂಗ್ ಸಮಯದಲ್ಲಿ ಎಂಎಸ್ ಧೋನಿ ಪತ್ನಿ ಸಾಕ್ಷಿ ಅವರು ಹಾಜರಿದ್ದರು. ಈ ವೇಳೆ, ಧೋನಿ ಅಭಿಮಾನಿಗಳು ತಮ್ಮ ನೆಚ್ಚಿನ ಕ್ರಿಕೆಟಿಗನ ಯೋಗಕ್ಷೇಮವನ್ನು ವಿಚಾರಿಸಿದರು. ಐಪಿಎಲ್ 2023 ರ ನಂತರ ಮೊಣಕಾಲಿನ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಧೋನಿ ಅವರ ಚೇತರಿಕೆ ಬಗ್ಗೆ ಸಾಕ್ಷಿ ಅವರು ಮಾಹಿತಿ ನೀಡಿದರು.

ಚಿತ್ರ ನಿರ್ಮಾಪಕಿಯಾಗಿರುವ ಸಾಕ್ಷಿ ಅವರು ಚಿತ್ರ ತಂಡದೊಂದಿಗೆ ಕಾಣಿಸಿಕೊಂಡರು. ಇದೇ ವೇಳೆ, ಎಂಎಸ್ ಧೋನಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ ಫ್ಯಾನ್ಸ್‌ಗೆ ಸಾಕ್ಷಿ ಅವರು ಧೈರ್ಯ ತುಂಬುವ ಥಂಬ್ಸ್ ಅಪ್‌ನಿಂದ ಪ್ರತಿಕ್ರಿಯಿಸಿದರು.
ಎಂಎಸ್ ಧೋನಿ ಪ್ರಸ್ತುತ ಚಿಕಿತ್ಸೆಗೆ ಒಳಗಾಗಿದ್ದಾರೆ ಮತ್ತು ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಸಾಕ್ಷಿ ತಿಳಿಸಿದರು.
ಇದೇ ವೇಳೆ, ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ಸಾಕ್ಷಿ ಧೋನಿ ಅವರಿಗೆ ಕುತೂಹಲಕರ ಪ್ರಶ್ನೆಯೊಂದನ್ನು ಕೇಳಲಾಯಿತು.
'ನಾವು ಧೋನಿ ಅವರನ್ನು ಹೀರೋ ಆಗಿ ನಿರೀಕ್ಷಿಸಬಹುದೇ?' ಎಂಬ ಪ್ರಶ್ನೆಯನ್ನು ಪತ್ರಕರ್ತರು ಕೇಳಿದರು.
'ನಾನು ಆ ದಿನಕ್ಕಾಗಿ ಎದುರು ನೋಡುತ್ತಿದ್ದೇನೆ. ಅವರು ಸಿನಿಮಾಗೆ ಬಂದರೆ ನನಗೆ ಬಹಳ ಸಂತೋಷವಿದೆ' ಎಂದು ಸಾಕ್ಷಿ ಉತ್ತರಿಸಿದರು.

'ಧೋನಿ ಅವರು ಸಾಕಷ್ಟು ಜಾಹೀರಾತುಗಳನ್ನು ಮಾಡಿದ್ದಾರೆ. ಅವರು ಕ್ಯಾಮೆರಾಗೆ ನಾಚಿಕೆಪಡುವುದಿಲ್ಲ. ಕ್ಯಾಮರದ ಮುಂದೆ ಹೇಗೆ ನಟಿಸಬೇಕೆಂದು ತಿಳಿದಿದ್ದಾರೆ. 2006 ರಿಂದಲೇ ಕ್ಯಾಮರಾ ಮುಂದೆ ಕಾಣಿಸಿಕೊಳ್ಳುತ್ತಿದ್ದಾರೆ' ಎಂದು ಸಾಕ್ಷಿ ಹೇಳಿದರು.
ಅವರಿಗೆ ನಿಜವಾಗಿಯೂ ಉತ್ತಮ ಸ್ಕ್ರಿಪ್ಟ್ ಬಂದರೆ, ಸಿನಿಮಾ ಮಾಡಬಹುದು. ಒಂದು ವೇಳೆ, ನಾನು ಅವರಿಗಾಗಿ ಸಿನಿಮಾವನ್ನು ಆಯ್ಕೆಯ ಮಾಡುವುದಾದರೆ, ಆಕ್ಷನ್ ಸಿನಿಮಾವನ್ನು ಆಯ್ಕೆ ಮಾಡುತ್ತೇನೆ. ಏಕೆಂದರೆ ಅವರು ಯಾವಾಗಲೂ ಆಕ್ಷನ್‌ನಲ್ಲಿ ಇರುತ್ತಾರೆ ಎಂದು ತಿಳಿಸಿದರು.
ಎಂಎಸ್ ಧೋನಿ ಮೊದಲ ದಿನದ ಪ್ರದರ್ಶನಕ್ಕೆ ಹಾಜರಾಗದಿದ್ದರೂ, ಅವರು ಈ ತಿಂಗಳ ಆರಂಭದಲ್ಲಿ ಚೆನ್ನೈನಲ್ಲಿ ಕಾಣಿಸಿಕೊಂಡಿದ್ದರು. ಎಲ್‌ಜಿಎಂ ಪ್ರೀ-ರಿಲೀಸ್ ಈವೆಂಟ್ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಅವರು ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ್ದರು. ಸಿನಿಮಾದ ಬಗ್ಗೆ ಅವರಿಗಿರುವ ಆಸಕ್ತಿಯನ್ನು ಬಹಿರಂಗಪಡಿಸಿದ್ದರು.












Click it and Unblock the Notifications