ಟಿ20 ಕ್ರಿಕೆಟ್: 12 ರನ್‌ಗೆ ಆಲೌಟ್: ಆ ತಂಡ ಯಾವುದು? ಇಲ್ಲಿದೆ ಮಾಹಿತಿ
ಭಾರತದಲ್ಲಿ ಸದ್ಯ ಐಪಿಎಲ್ ಪಂದ್ಯಗಳು ನಡೆಯುತ್ತಿವೆ. ಕ್ರಿಕೆಟ್ ಅಭಿಮಾನಿಗಳ ಚಿತ್ತ ಈಗ ಫುಲ್ ಈ ಪಂದ್ಯಗಳತ್ತ ನೆಟ್ಟಿದೆ. ಆದರೆ ಟಿ20 ಕ್ರಿಕೆಟ್‌ನಲ್ಲಿ ಒಂದು ತಂಡ 12 ರನ್‌ಗಳಿಗೆ ಆಲೌಟ್ ಆಗಿದೆ. ಆ ತಂಡ ಯಾವುದು ಎಂಬ ಬಗ್ಗೆ ವರದಿ ಇಲ್ಲಿದೆ.
ಏಷ್ಯನ್ ಗೇಮ್ಸ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಮಂಗೋಲಿಯಾ, ಈಗ ತನ್ನ ಹೆಸರಿಗೆ ಕೆಟ್ಟ ದಾಖಲೆಯನ್ನು ಅಂಟಿಸಿಕೊಂಡಿದೆ. ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಏಳು ತಿಂಗಳ ನಂತರ, ಈ ತಂಡವು ಜಪಾನ್ ವಿರುದ್ಧ ಬುಧವಾರ ಕೇವಲ 12 ರನ್‌ಗಳಿಗೆ ಆಲೌಟ್ ಆಯಿತು. ಇದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಎರಡನೇ ಅತಿ ಕನಿಷ್ಠ ಸ್ಕೋರ್ ಆಗಿದೆ.

12 ರನ್‌ಗೆ ಆಲೌಟ್
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಜಪನಾ 20 ಓವರ್‌ಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 217 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಮಂಗೋಲಿಯಾ 8.2 ಓವರ್‌ಗಳಲ್ಲೊ 12 ರನ್‌ಗಳಿಗೆ ಆಲೌಟ್ ಆಯಿತು. ಈ ಪಂದ್ಯದಲ್ಲಿ ಜಪಾನ್ 205 ರನ್‌ಗಳ ಭರ್ಜರಿ ಜಯ ಸಾಧಿಸಿದೆ.
ಜಪಾನ್ ವಿರುದ್ಧದ ಪಂದ್ಯದಲ್ಲಿ, ಮಂಗೋಲಿಯಾ ಕೇವಲ 12 ರನ್‌ಗಳಿಗೆ ಔಟಾಯಿತು. ಜಪಾನ್ ಈ ಪಂದ್ಯವನ್ನು 205 ರನ್‌ಗಳ ಅಂತರದಿಂದ ಗೆದ್ದುಕೊಂಡಿದೆ. T20 ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕನಿಷ್ಠ ಸ್ಕೋರ್ ಮಾಡಿದ ದಾಖಲೆಯು ಇಸ್ಲೆ ಆಫ್ ಮ್ಯಾನ್ (Isle of Man) ಹೆಸರಿನಲ್ಲಿದೆ. ಈ ತಂಡವು 26 ಫೆಬ್ರವರಿ 2023 ರಂದು ಸ್ಪೇನ್ ವಿರುದ್ಧ 10 ರನ್‌ಗಳಿಗೆ ಆಲೌಟ್ ಆಗಿತ್ತು. ಇದಾದ ಬಳಿಕ ಇದೇ ಎರಡನೇ ಕನಿಷ್ಠ ಸ್ಕೋರ್ ಆಗಿದೆ.
ಜಪಾನ್ ಪರ 17 ವರ್ಷದ ಎಡಗೈ ವೇಗದ ಬೌಲರ್ ಕಝುಮಾ ಕಟೊ ಸ್ಟಾಫರ್ಡ್ 3.2 ಓವರ್‌ಗಳಲ್ಲಿ 7 ರನ್ ನೀಡಿ 5 ವಿಕೆಟ್ ಪಡೆದಿದ್ದಾರೆ. ಅಬ್ದುಲ್ ಸಮದ್ ಮತ್ತು ಮಕೊಟೊ ತನಿಯಾಮ ತಲಾ 2 ವಿಕೆಟ್ ಪಡೆದರು. ಮಂಗೋಲಿಯಾ ತಂಡದ ಏಳು ಬ್ಯಾಟರ್‌ಗಳು ಸೊನ್ನೆ ಸುತ್ತಿದರು. ಮಂಗೋಲಿಯಾ ತಂಡದ ಪರ ತರ್ ಸುಮಯ್ 4 ರನ್ ಗಳಿಸಿದ್ದೇ ದೊಡ್ಡ ಸಾಧನೆ ಆಗಿದೆ.
ಹೇಗಿದೆ ಮಂಗೋಲಿಯಾ ಪ್ರದರ್ಶನ?
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದುವರೆಗಿನ ಮಂಗೋಲಿಯಾ ಪ್ರಯಾಣ ಕಳಪೆ ಆಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಂಗೋಲಿಯಾ ಮೊದಲ ಪಂದ್ಯವನ್ನು ಸೆಪ್ಟೆಂಬರ್ 27, 2023 ರಂದು ಆಡಿತು. ಆ ಪಂದ್ಯದಲ್ಲಿ ಮೊದಲು ಆಡಿದ ನೇಪಾಳ 20 ಓವರ್‌ಗಳಲ್ಲಿ 314 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ಮಂಗೋಲಿಯಾ ಆಟಗಾರರು ಕೇವಲ 41 ರನ್ ಗಳಿಸಿ ಆಲೌಟ್ ಆಗಿದ್ದರು. ತನ್ನ ಎರಡನೇ ಪಂದ್ಯದಲ್ಲೂ ಮಾಲ್ಡೀವ್ಸ್ ವಿರುದ್ಧ 9 ವಿಕೆಟ್‌ಗಳಿಂದ ಹೀನಾಯ ಸೋಲನುಭವಿಸಬೇಕಾಯಿತು.
ನಾಲ್ಕನೇ ದೊಡ್ಡ ಗೆಲುವು
ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್‌ಗಳ ವಿಷಯದಲ್ಲಿ ನಾಲ್ಕನೇ ಅತಿ ದೊಡ್ಡ ಗೆಲುವನ್ನು ಜಪಾನ್ ಸಾಧಿಸಿದೆ. ಏಷ್ಯನ್ ಗೇಮ್ಸ್‌ನಲ್ಲಿ ಮಂಗೋಲಿಯಾವನ್ನು 273 ರನ್‌ಗಳಿಂದ ಸೋಲಿಸಿದ ದಾಖಲೆ ನೇಪಾಳ ಹೆಸರಿನಲ್ಲಿದೆ. ಜಪಾನ್ ವಿರುದ್ಧದ ಈ ಪಂದ್ಯದಲ್ಲಿ ಮಂಗೋಲಿಯನ್ ತಂಡವು ಹೀನಾಯ ಸೋಲು ಕಂಡಿತ್ತು.












Click it and Unblock the Notifications