ಮೊಹಮ್ಮದ್ ಶಮಿ: ಅಂದು ಪತ್ನಿ ಜೊತೆ ಫೈಟಿಂಗ್, ಇಂದು ‘ಅರ್ಜುನ ಪ್ರಶಸ್ತಿ’ ವಿಜೇತ!
ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ, ಬೌಲಿಂಗ್ ವಿಭಾಗದಲ್ಲಿ ಮೊಹಮ್ಮದ್ ಶಮಿ ಮಾಡಿರುವ ಸಾಧನೆ ಮೀರಿಸಲು ಬಹುಶಃ ಸದ್ಯಕ್ಕೆ ಯಾವ ಆಟಗಾರನಿಗೂ ಸಾಧ್ಯವಿಲ್ಲ ಅಂತಾ ಕಾಣುತ್ತೆ. ಈ ಆಟಗಾರ ಮುಟ್ಟಿದ್ದೆಲ್ಲಾ ಚಿನ್ನ ಎನ್ನುಷ್ಟರ ಮಟ್ಟಿಗೆ ಸಾಧಿಸಿ ತೋರಿಸಿದ್ದಾರೆ. ಅದ್ರಲ್ಲೂ 2023ರ ಐಸಿಸಿ ಏಕದಿನ ವಿಶ್ವಕಪ್ ಅಖಾಡದಲ್ಲಿ, ಮೊಹಮ್ಮದ್ ಶಮಿ ಸಾಧನೆ ಅವಿಸ್ಮರಣೀಯ. ಇಷ್ಟೆಲ್ಲಾ ಸಾಧನೆ ಮಾಡಿರುವ ಆಟಗಾರನ ಪರ್ಸನಲ್ ಲೈಫ್ ಹೆಂಗಿತ್ತು ಗೊತ್ತಾ?
ಅದು 2013 ಭಾರತೀಯ ವೇಗದ ಬೌಲಿಂಗ್ ವಿಭಾಗಕ್ಕೆ ಒಬ್ಬ ಅತ್ಯುತ್ತಮ ಆಟಗಾರ ಎಂಟ್ರಿ ಕೊಟ್ಟಿದ್ದ. ಅವರ ಹೆಸರು ಬೇರೆ ಯಾವುದೋ ಅಲ್ಲ, ಮೊಹಮ್ಮದ್ ಶಮಿ ಅಂತಾ. ಹೀಗೆ ಮೊಹಮ್ಮದ್ ಶಮಿ ಭಾರತೀಯ ಕ್ರಿಕೆಟ್ ತಂಡಕ್ಕೆ ಸೇರ್ಪಡೆ ಆದ ಮೊದಲ ಪಂದ್ಯದಿಂದಲೇ ತಾವು ಎಷ್ಟು ಡಿಫರೆಂಟ್ ಅಂತಾ ತೋರಿಸಿಕೊಟ್ರು. ಅದರಲ್ಲೂ ಈ ಆಟಗಾರನೇ ಮುಂದೆ ಭಾರತೀಯ ಬೌಲಿಂಗ್ ವಿಭಾಗದ ಮುಂಚೂಣಿ ಪ್ಲೇಯರ್ ಆಗಿದ್ದರು. ಆದ್ರೆ ಕೆಲವೇ ವರ್ಷ ಮಾತ್ರ ಈ ಖುಷಿ ಉಳಿದಿಕೊಂಡಿತ್ತು. ತಮ್ಮ ಫ್ಯಾಮಿಲಿ ಪ್ರಾಬ್ಲಂ ಪರಿಣಾಮ ಮೊಹಮ್ಮದ್ ಶಮಿ ವಿಲವಿಲ ಒದ್ದಾಡಿ ನರಳಿಬಿಟ್ಟರು.

ಶಮಿ ಬಾಳಲ್ಲಿ ಭಾರಿ ಬಿರುಕು!
ಮೊಹಮ್ಮದ್ ಶಮಿ ಸಂಸಾರ ತುಂಬಾ ಚೆನ್ನಾಗಿ ಇತ್ತು ಗಂಡ & ಹೆಂಡತಿ ಇಬ್ರೂ ನೆಮ್ಮದಿಯಾಗಿ ಬದುಕುತ್ತಿದ್ದರು. ಆಗ ಮೊಹಮ್ಮದ್ ಶಮಿ ಕೂಡ ಉತ್ತಮವಾಗಿ ಆಟವಾಡಿ ಕ್ರಿಕೆಟ್ ಜಗತ್ತಿನಲ್ಲೇ ದೊಡ್ಡ ಹೆಸರು ಗಳಿಸಿದ್ದರು. ದಿಢೀರ್ ಏನಾಯ್ತೋ ಏನೋ ಮೊಹಮ್ಮದ್ ಶಮಿ ಸಂಸಾರದಲ್ಲಿ ಬಿರುಕು ಮೂಡಿತ್ತು. ಶಮಿ ಹೆಂಡತಿ ತನ್ನ ಗಂಡನ ವಿರುದ್ಧ ಸಾಲು ಸಾಲು ಗಂಭೀರ ಆರೋಪ ಹೊರಿಸಿದ್ದರು. ಹೀಗೆ ಹೊತ್ತಿಕೊಂಡ ಕಿಚ್ಚು, ಹಲವು ವರ್ಷಗಳ ಕಾಲ ಹಾಗೇ ಉಳಿದಿದೆ. ಶಮಿ ಪತ್ನಿ ಹಸಿನ್ ಜಹಾನ್ ಹೀಗೆ ಆರೋಪ ಮಾಡುತ್ತಾ, ಮಾಡುತ್ತಾ, ಮೊಹಮ್ಮದ್ ಶಮಿ ಪಿತ್ತ ನೆತ್ತಿಗೇರಿಸಿದ್ದರು.
2023ರಲ್ಲಿ ಕಮಾಲ್ ಮಾಡಿದ್ದ ಶಮಿ
ಹೀಗಿದ್ದಾಗಲೇ 2023ರ ಐಸಿಸಿ ಏಕದಿನ ವಿಶ್ವಕಪ್ ಅಖಾಡದಲ್ಲಿ ಮೊಹಮ್ಮದ್ ಶಮಿ ಹೊಸ ಇತಿಹಾಸ ನಿರ್ಮಾಣ ಮಾಡಿದರು. ಅದರಲ್ಲೂ ಭಾರತ ಕ್ರಿಕೆಟ್ ತಂಡ ಫೈನಲ್ ಪ್ರವೇಶಕ್ಕೆ ಇದೇ ಶಮಿ ಅವರ ಕೊಡುಗೆ ದೊಡ್ಡ ಮಟ್ಟದಲ್ಲೇ ಇತ್ತು. ಬಹುತೇಕ ಎಲ್ಲಾ ಪಂದ್ಯದಲ್ಲು ಮೊಹಮ್ಮದ್ ಶಮಿ ಎದುರಾಳಿ ತಂಡದ ವಿಕೆಟ್ ಉರುಳಿಸಿ ಮಿಂಚಿದ್ದರು. ಹೀಗೆ ಬದುಕಿನಲ್ಲಿ ಎಲ್ಲಾ ರೀತಿಯ ಕಷ್ಟ ಕಂಡ ಮೊಹಮ್ಮದ್ ಶಮಿ ಈಗ 'ಅರ್ಜುನ ಪ್ರಶಸ್ತಿ' ಪಡೆದಿದ್ದಾರೆ.

ಅರ್ಜುನ ಪ್ರಶಸ್ತಿ ಪಡೆದ ಶಮಿ
ಯೆಸ್, 2023ರ ಏಕದಿನ ವಿಶ್ವಕಪ್ ಅಖಾಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಮೊಹಮ್ಮದ್ ಶಮಿ ಈ ಬಾರಿ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ರಾಷ್ಟ್ರಪತಿ ಭವನದಲ್ಲಿ ನಡೆದ, ಭವ್ಯ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಅರ್ಜುನ ಪ್ರಶಸ್ತಿ ಸ್ವೀಕರಿಸಿದ್ದಾರೆ. ಈ ಮೂಲಕ ಹೊಸ ಬದುಕಿನ ಕಡೆಗೆ ಶಮಿ ಅವರು ಹೆಜ್ಜೆ ಹಾಕುತ್ತಿದ್ದಾರೆ. ಇನ್ನೇನು ಟಿ20 ವಿಶ್ವಕಪ್ ಕೂಡ ಬರುತ್ತಿದ್ದು, ಶಮಿ ಅದಕ್ಕಾಗಿ ಸಿದ್ಧವಾಗುತ್ತಿದ್ದಾರೆ.
7 ವಿಕೆಟ್ ಪಡೆದಿದ್ದರು ಶಮಿ
2023 ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಸಾಕಷ್ಟು ಗಮನವನ್ನು ಸೆಳೆದಿತ್ತು. ಇಡೀ ಪಂದ್ಯ ಭಾರತದ ಪರವಾಗಿ ಮಿಂಚಿದ ಏಕೈಕ ಬೌಲರ್, ಮೊಹಮ್ಮದ್ ಶಮಿ. ಮಿಕ್ಕೆಲ್ಲ ಬೌಲರ್‌ಗಳ ಮೇಲೆ ನ್ಯೂಜಿಲೆಂಡ್ ಪಡೆ ಅಟ್ಯಾಕ್ ಮಾಡುತ್ತಿದ್ದರೆ, ಶಮಿ ಮಾತ್ರ ನ್ಯೂಜಿಲೆಂಡ್ ಬ್ಯಾಟಿಂಗ್ ಪಡೆ ಮೇಲೆ ದಾಳಿ ಮಾಡಿದರು. ಹೀಗೆ ಶಮಿ ಬೌಲಿಂಗ್ ದಾಳಿ ಎದುರಿಗೆ, ಬೆಚ್ಚಿಬಿದ್ದ ಕಿವೀಸ್‌ಗೆ ಪಂದ್ಯದ ಕೊನೆಗೆ ಮ್ಯಾಚ್ ಕೈಬಿಟ್ಟು ಹೋಗುತ್ತೆ ಅನ್ನೋದು ಗ್ಯಾರಂಟಿ ಆಗಿತ್ತು. ಈ ಸಮಯಕ್ಕೆ ಮೊಹಮ್ಮದ್ ಶಮಿ ಭರ್ಜರಿ 7 ವಿಕೆಟ್ ಪಡೆದು ಮಿಂಚು ಹರಿಸಿ ಭಾರತ ಫೈನಲ್‌ಗೆ ತಲುಪಲು ಬೆನ್ನೆಲುಬಾಗಿ ನಿಂತುಬಿಟ್ಟರು. ಇಷ್ಟೆಲ್ಲಾ ಸಾಧನೆ ಮಾಡಿದ ಆಟಗಾರನಿಗೆ ಈಗ ಗೌರವ ನೀಡಲಾಗಿದೆ.












Click it and Unblock the Notifications