Virat Kohli: ವಿರಾಟ್ ಕೊಹ್ಲಿ ಅಭಿಮಾನಿಗಳನ್ನು ಕೆಣಕಿದ ಇಂಗ್ಲೆಂಡ್ ಮೈಕೆಲ್ ವಾನ್
ಇಂಗ್ಲೆಂಡ್‌ನ ಕ್ರಿಕೆಟಿಗ ಜೋ ರೂಟ್ ಅತ್ಯುತ್ತಮ ಟೆಸ್ಟ್ ಆಟಗಾರ ಎನ್ನುವುದರಲ್ಲಿ ಯಾವುದೇ ಅನುಮಾನ ಇಲ್ಲ, ಅವರೀಗ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಶ್ರೀಲಂಕಾ ವಿರುದ್ಧದ ಸರಣಿಯ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ್ದಾರೆ. ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಅಲೆಸ್ಟರ್ ಕುಕ್ ಅವರ 33 ಟೆಸ್ಟ್ ಶತಕಗಳ ದಾಖಲೆಯನ್ನು ಜೋ ರೂಟ್ ಮುರಿಯುವ ಮೂಲಕ ಹೊಸ ದಾಖಲೆ ಬರೆದರು. ಆದರೆ ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮೈಕೆಲ್ ವಾನ್‌ಗೆ ಮಾತ್ರ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕೆಣಕುವ ಖಯಾಲಿ ಇದ್ದು, ಈಗ ಕೊಹ್ಲಿ ರೂಟ್ ನಡುವೆ ಹೋಲಿಕೆ ಮಾಡಿದ್ದು ಅಭಿಮಾನಿಗಳು ಬಗೆ ಬಗೆಯಾಗಿ ಕಮೆಂಟ್ ಮಾಡಿದ್ದಾರೆ.
ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ವಾನ್ ಜೋ ರೂಟ್ ಅವರ ಟೆಸ್ಟ್ ಅಂಕಿಅಂಶಗಳನ್ನು ವಿರಾಟ್ ಕೊಹ್ಲಿಯ ಅಂಕಿಅಂಶಗಳೊಂದಿಗೆ ಹೋಲಿಸುವ ಮೂಲಕ ಭಾರತೀಯ ಕ್ರಿಕೆಟ್ ಅಭಿಮಾನಿಗಳನ್ನು ಕೆಣಕಿದ್ದಾರೆ. ವಾನ್ ಕೊಟ್ಟಿರುವ ಅಂಕಿ ಅಂಶಗಳನ್ನು ಗಮನಿಸಿದರೆ ರೂಟ್ ಕೊಹ್ಲಿಗಿಂತ ಹೆಚ್ಚಿನ ಪಂದ್ಯಗಳನ್ನು ಆಡಿದ್ದು, ಕೊಹ್ಲಿಗಿಂತ ಹೆಚ್ಚು ರನ್, ಶತಕ ಗಳಿಸಿದ್ದಾರೆ.

"ಮಾರ್ನಿಂಗ್ ಇಂಡಿಯಾ," ಎಂಬುದು ವಾನ್ ಅವರ ಪೋಸ್ಟ್‌ನ ಶೀರ್ಷಿಕೆಯಾಗಿತ್ತು. ಅದರಲ್ಲಿ ಜೋ ರೂಟ್ ಮತ್ತು ವಿರಾಟ್ ಕೊಹ್ಲಿ ಅವರ ಟೆಸ್ಟ್ ಪಂದ್ಯಗಳು, ಒಟ್ಟು ರನ್‌ಗಳು, ಶತಕ, ಅರ್ಧಶತಕ, ಬಾರಿಸಿದ ಬೌಂಡರಿಗಳನ್ನು ಹೋಲಿಕೆ ಮಾಡಿರುವ ಕೈ ಬರಹವನ್ನು ಹಂಚಿಕೊಂಡಿದ್ದಾರೆ.
ಅಭಿಮಾನಿಗಳು ಹೇಳಿದ್ದೇನು?
ಶುಭೋದಯ ಬ್ರಿಟನ್ ಆಗಿರಬೇಕು, ಭಾರತದಲ್ಲಿ ವಿರಾಟ್ ಕೊಹ್ಲಿಯನ್ನು ಬಹಳ ದಿನದಿಂದ ನೋಡಿಲ್ಲ ಎಂದು ಅಭಿಮಾನಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯೆ ನೀಡಿದ್ದು ವಿರಾಟ್ ಕೊಹ್ಲಿ ಅವರ 80ನೇ ಅಂತಾರಾಷ್ಟ್ರೀಯ ಶತಕದ ದಾಖಲೆಯನ್ನು ಮುರಿಯಲು ಜೋ ರೂಟ್‌ಗೆ ಎರಡು ಜನ್ಮಗಳು ಬೇಕಾಗುತ್ತದೆ ಎಂದಿದ್ದಾರೆ.
ಮತ್ತೊಬ್ಬ ಅಭಿಮಾನಿ ಪ್ರತಿಕ್ರಿಯೆ ನೀಡಿ, "ಜೋ ರೂಟ್ ಕೇವಲ ತವರಿನ ಅಂಗಳದಲ್ಲಿ ಮಾತ್ರ ಶತಕ ಬಾರಿಸಿದ್ದಾರೆ. ಆತ ಇಂಗ್ಲೆಂಡ್‌ನಲ್ಲಿ ಮಾತ್ರ ಉತ್ತಮವಾಗಿ ಆಡುವ ಆಟಗಾರ, ಜೋ ರೂಟ್ ಮತ್ತೊಬ್ಬ ಬಾಬರ್ ಆಜಮ್" ಎಂದು ಹೇಳಿದ್ದಾರೆ.
"ಟೆಸ್ಟ್ ಕ್ರಿಕೆಟ್‌ನಲ್ಲಿ ಜೋ ರೂಟ್ ಉತ್ತಮ ಆಟಗಾರ, ಅದನ್ನು ಒಪ್ಪಿಕೊಳ್ಳುವುದರಲ್ಲಿ ಯಾವುದೇ ಅವಮಾನವಿಲ್ಲ. ವಿರಾಟ್ 3-ಫಾರ್ಮ್ಯಾಟ್ ಆಟಗಾರ, ಈಗ 2 ಫಾರ್ಮಾಟ್‌ನಲ್ಲಿ ಆಡುತ್ತಾರೆ. ಆದರೆ ಜೋ ಹೆಚ್ಚಾಗಿ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರ ಆಡುತ್ತಾರೆ" ಎಂದು ಮತ್ತೊಬ್ಬರು ಬರೆದಿದ್ದಾರೆ.
ಜೋ ರೂಟ್ ಸಾಧನೆ
ಜೋ ರೂಟ್ ಇದೀಗ ಇಂಗ್ಲೆಂಡ್ ನಾಯಕ ಕುಕ್ ಅವರ 33 ಟೆಸ್ಟ್ ಶತಕಗಳ ದಾಖಲೆಯೊಂದಿಗೆ ಸಮಬಲ ಸಾಧಿಸಿದರು, ಅಲಿಸ್ಟರ್ ಕುಕ್ 161 ಟೆಸ್ಟ್ ಪಂದ್ಯಗಳಲ್ಲಿ 33 ಶತಕ ಗಳಿಸಿದರೆ, ಜೋ ರೂಟ್ 145 ಪಂದ್ಯಗಳಲ್ಲಿ 33 ಶತಕ ಗಳಿಸಿದ್ದಾರೆ. 1989-2013ರವರೆಗೆ 200 ಟೆಸ್ಟ್‌ಗಳಲ್ಲಿ 51 ಶತಕಗಳನ್ನು ಗಳಿಸಿರುವ ಸಚಿನ್ ತೆಂಡೂಲ್ಕರ್ ಅತಿ ಹೆಚ್ಚು ಶತಕ ಸಿಡಿಸಿದವರ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದಾರೆ. ಜೋ ರೂಟ್ 33ನೇ ಶತಕ ಗಳಿಸಿದ ಬಳಿಕ ಈ ಪಟ್ಟಿಯಲ್ಲಿ ಜಂಟಿ 10ನೇ ಸ್ಥಾನದಲ್ಲಿದ್ದಾರೆ.












Click it and Unblock the Notifications