Rohit Sharma: ಐಪಿಎಲ್ ಪಂದ್ಯದಿಂದ ಹಾರ್ದಿಕ್ ಬ್ಯಾನ್! ರೋಹಿತ್ ಶರ್ಮಾ ಮುಂಬೈ ಇಂಡಿಯನ್ಸ್ ನಾಯಕ?
ಐಪಿಎಲ್ 2025ರ ಆವೃತ್ತಿಯ ವೇಳಾಪಟ್ಟಿ ಬಿಡುಗಡೆಯಾಗಿದೆ. ಮಾರ್ಚ್ 22ರಂದು ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್ ವಿರುದ್ಧ ಆರ್ ಸಿಬಿ ಸೆಣೆಸಲಿದೆ. ಮಾರ್ಚ್ 23ರಂದು ಭಾನುವಾರ ಎಲ್ ಕ್ಲಾಸಿಕೋ ಎನಿಸಿಕೊಂಡಿರುವ ಮುಂಬೈ ಇಂಡಿಯನ್ಸ್ ಮತ್ತು ಸಿಎಸ್‌ಕೆ ತಂಡಗಳು ಮುಖಾಮುಖಿಯಾಗಲಿವೆ.
ಇಂಡಿಯನ್ ಪ್ರೀಮಿಯರ್ ಲೀಗ್‌ನ ಎಲ್ ಕ್ಲಾಸಿಕೊ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿದ್ದು ಅಭಿಮಾನಿಗಳನ್ನು ಕಾತರದಿಂದ ಕಾಯುವಂತೆ ಮಾಡಿದೆ. ಈ ಬಾರಿ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಒಂದೇ ಗುಂಪಿನಲ್ಲಿ ಇರುವ ಕಾರಣ ಲೀಗ್ ಹಂತದಲ್ಲಿ ಎರಡು ಬಾರಿ ಮುಖಾಮುಖಿಯಾಗಲಿವೆ. ಕಳೆದ ಆವೃತ್ತಿಯಲ್ಲಿ ಒಮ್ಮೆ ಮಾತ್ರ ಮುಖಾಮುಖಿಯಾಗಿದ್ದವು. ಎರಡನೇ ಪಂದ್ಯ ಏಪ್ರಿಲ್ 20 ರಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೊದಲ ಪಂದ್ಯದಿಂದ ಹಾರ್ದಿಕ್ ಬ್ಯಾನ್
ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಆಡುವುದಿಲ್ಲ. 2025ರ ಐಪಿಎಲ್‌ನ ಮೊದಲ ಪಂದ್ಯಕ್ಕೆ ಅವರನ್ನು ಬ್ಯಾನ್ ಮಾಡಲಾಗಿದ್ದು ಮುಂಬೈಗೆ ದೊಡ್ಡ ಶಾಕ್ ಸಿಕ್ಕಿದೆ. 2024ರ ಐಪಿಎಲ್‌ನಲ್ಲಿ ಪಾಂಡ್ಯ ಮಾಡಿದ ತಪ್ಪಿಗೆ ಈ ಆವೃತ್ತಿಯಲ್ಲಿ ಅವರು ಒಂದು ಪಂದ್ಯದಿಂದ ಹೊರಗುಳಿಯಲಿದ್ದಾರೆ.
2024 ರ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಕೊನೆಯ ಲೀಗ್ ಪಂದ್ಯದ ಬಳಿಕ ಹಾರ್ದಿಕ್ ಪಾಂಡ್ಯಗೆ ಒಂದು ಪಂದ್ಯದಿಂದ ನಿಷೇಧ ಹೇರಲಾಗಿದೆ. ಮುಂಬೈ ಪ್ಲೇ ಆಫ್ ಪ್ರವೇಶಿಸಲು ವಿಫಲವಾಗಿದ್ದರಿಂದ ಅವರ ಶಿಕ್ಷೆಯು ಐಪಿಎಲ್ 2025ರ ಆವೃತ್ತಿಗೆ ವಿಸ್ತರಣೆಯಾಗಿದೆ.
ಐಪಿಎಲ್ 2024 ರಲ್ಲಿ, ಹಾರ್ದಿಕ್‌ಗೆ ಮೂರು ಓವರ್-ರೇಟ್ ಅಪರಾಧಗಳಿಗಾಗಿ ನಿಷೇಧ ಶಿಕ್ಷೆ ವಿಧಿಸಲಾಯಿತು. ಲೀಗ್ ನಿಯಮಗಳ ಪ್ರಕಾರ, ಒಂದು ಋತುವಿನೊಳಗೆ ಮೂರು ಬಾರಿ ಅಗತ್ಯವಾದ ಓವರ್-ರೇಟ್ ಅನ್ನು ಕಾಯ್ದುಕೊಳ್ಳಲು ಸಾಧ್ಯವಾಗದಿದ್ದರೆ ತಂಡದ ನಾಯಕನನ್ನು ಒಂದು ಪಂದ್ಯದಿಂದ ಅಮಾನತುಗೊಳಿಸಲಾಗುತ್ತದೆ.
ಹಾರ್ದಿಕ್ ಪಾಂಡ್ಯ ಹೊರಗುಳಿಯುವ ಕಾರಣ ಸಿಎಸ್‌ಕೆ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಯಾರು ಮುನ್ನಡೆಸುತ್ತಾರೆ ಎನ್ನುವ ಪ್ರಶ್ನೆ ಎದುರಾಗಿದೆ. ಮಾಜಿ ನಾಯಕ ರೋಹಿತ್ ಶರ್ಮಾ, ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಮುನ್ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಇಬ್ಬರನ್ನೂ ಹೊರತುಪಡಿಸಿ ಭಾರತ ಟಿ20 ತಂಡದ ನಾಯಕನಾಗಿರುವ ಸೂರ್ಯಕುಮಾರ್ ಯಾದವ್ ಕೂಡ ಮೊದಲ ಪಂದ್ಯದಲ್ಲಿ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications