Manish Pandey: ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡ ಮನೀಶ್ ಪಾಂಡೆ - ಆಶ್ರಿತಾ ಶೆಟ್ಟಿ
ಮಾಜಿ ಆರ್ ಸಿಬಿ ಕ್ರಿಕೆಟಿಗ ಯುಜ್ವೇಂದ್ರ ಚಹಾಲ್ ಪತ್ನಿ ಧನಶ್ರೀ ವರ್ಮಾರಿಂದ ಬೇರೆಯಾಗಿದ್ದಾರೆ, ವಿಚ್ಛೇದನ ಪಡೆಯುತ್ತಾರೆ ಎನ್ನುವ ವದಂತಿಗಳು ಸದ್ದು ಮಾಡುತ್ತಿರುವ ನಡುವೆ ಮತ್ತೊಬ್ಬ ಕ್ರಿಕೆಟಿಗ ಬಾಳಲ್ಲೂ ಬಿರುಗಾಳಿ ಎನ್ನುವ ಸೂಚನೆ ಸಿಕ್ಕಿದೆ. ಕರ್ನಾಟಕದ ಕ್ರಿಕೆಟಿಗ ಮನೀಶ್ ಪಾಂಡೆ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎನ್ನುವ ವದಂತಿಯಿದ್ದು ಇದಕ್ಕೆ ಪೂರಕವಾಗಿ ಗಂಡ-ಹೆಂಡತಿ ಇಬ್ಬರೂ ಇನ್‌ಸ್ಟಾಗ್ರಾಂನಲ್ಲಿ ಪರಸ್ಪರ ಅನ್‌ಫಾಲೋ ಮಾಡಿಕೊಂಡಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿರುವುದು ಹಲವು ವದಂತಿಗಳಿಗೆ ಕಾರಣವಾಗಿದೆ. ಇಬ್ಬರ ನಡುವೆ ಸರಿಯಾಗಿ ಹೊಂದಾಣಿಕೆ ಇಲ್ಲ ಬೇರೆಯಾಗುವ ಮುನ್ಸೂಚನೆ ಇದೆ ಎಂದು ಹೇಳಲಾಗಿದೆ. ಕಳೆದ ವರ್ಷ ಹಾರ್ದಿಕ್ ಪಾಂಡ್ಯ ಮತ್ತು ನತಾಶಾ ವಿಚ್ಛೇದನ ಪಡೆದುಕೊಂಡಿದ್ದು ಭಾರಿ ಸದ್ದು ಮಾಡಿತ್ತು, ಈ ವರ್ಷದ ಆರಂಭದಲ್ಲೇ ಇಬ್ಬರು ಕ್ರಿಕೆಟಿಗರ ಬಗ್ಗೆ ಈ ರೀತಿ ಸುದ್ದಿಯಾಗುತ್ತಿರುವುದು ಕ್ರಿಕೆಟ್ ಅಭಿಮಾನಿಗಳಿಗೆ ಬೇಸರ ತರಿಸಿದೆ.

2019ರಲ್ಲಿ ಮನೀಶ್-ಆಶ್ರಿತಾ ಮದುವೆ
ಭಾರತೀಯ ಕ್ರಿಕೆಟಿಗ ಡಿಸೆಂಬರ್ 2019 ರಲ್ಲಿ ನಟಿ ಆಶ್ರಿತಾ ಶೆಟ್ಟಿಯವರನ್ನು ಮದುವೆಯಾದರು. ಅದಾದ ಬಳಿಕ ಸಾರ್ವಜನಿಕವಾಗಿ ಒಟ್ಟಾಗಿಯೇ ಕಾಣಿಸಿಕೊಳ್ಳುತ್ತಿದ್ದರು. ಮನೀಶ್ ಪಾಂಡೆ ಐಪಿಎಲ್ ಪಂದ್ಯಗಳನ್ನು ಆಡುವ ಸಂದರ್ಭದಲ್ಲಿ ಆಶ್ರಿತಾ ಶೆಟ್ಟಿ ಮೈದಾನದಲ್ಲಿ ಹಾಜರಿದ್ದು ಬೆಂಬಲ ನೀಡುತ್ತಿದ್ದರು.
ಆದರೆ ಇತ್ತೀಚಿನ ದಿನಗಳಲ್ಲಿ ಈ ಜೋಡಿ ಒಟ್ಟಾಗಿ ಸಾರ್ವಜನಿಕ ಜೀವನದಲ್ಲಿ ಕಾಣಿಸಿಕೊಂಡಿಲ್ಲ. ಅಲ್ಲ ಇನ್‌ಸ್ಟಾಗ್ರಾಂನಲ್ಲಿ ಕೂಡ ಒಟ್ಟಾಗಿರುವ ಫೋಟೊಗಳನ್ನು ಹಂಚಿಕೊಂಡಿಲ್ಲ. ಇನ್‌ಸ್ಟಾಗ್ರಾಮ್‌ನಲ್ಲಿ ಪರಸ್ಪರ ಅನ್‌ಫಾಲೋ ಮಾಡಿರುವುದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಮನೀಶ್ ಮತ್ತು ಆಶ್ರಿತಾ ಇಬ್ಬರೂ ತಮ್ಮ ಇನ್‌ಸ್ಟಾಗ್ರಾಮ್ ಖಾತೆಗಳಿಂದ ಪರಸ್ಪರರ ಚಿತ್ರಗಳನ್ನು ತೆಗೆದುಹಾಕಿದ್ದು ವದಂತಿಗಳಿಗೆ ಮತ್ತಷ್ಟು ಬಲ ತಂದುಕೊಟ್ಟಿದೆ. ಏನೇ ವದಂತಿಗಳು ಹರಿದಾಡಿದರೂ ಮನೀಶ್ ಪಾಂಡೆಯಾಗಲಿ, ಆಶ್ರಿತಾ ಶೆಟ್ಟಿಯಾಗಲಿ ಈವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ.
ಮನೀಶ್ ಪಾಂಡೆ 68 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಐಪಿಎಲ್‌ನಲ್ಲಿ ಕೆಕೆಆರ್ ತಂಡಕ್ಕಾಗಿ ಆಡಲು ಸಜ್ಜಾಗಿದ್ದಾರೆ. 2025ರ ಮೆಗಾ ಹರಾಜಿನಲ್ಲಿ ಮನೀಶ್ ಪಾಂಡೆ ಅವರನ್ನು ಕೆಕೆಆರ್ 75 ಲಕ್ಷ ರೂಪಾಯಿ ನೀಡಿ ಖರೀದಿ ಮಾಡಿದೆ.












Click it and Unblock the Notifications