KL Rahul: ಕನ್ನಡಿಗ ಕೆಎಲ್ ರಾಹುಲ್ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ಎಲ್‌ಎಸ್‌ಜಿ ಮಾಲೀಕ ಸಂಜೀವ್ ಗೊಯೆಂಕಾ
2025ರ ಮೆಗಾ ಹರಾಜಿನಲ್ಲಿ ಕನ್ನಡಿಗ ಕೆಎಲ್ ರಾಹುಲ್ 14 ಕೋಟಿ ರೂಪಾಯಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾದರು. ಕಳೆದ ಮೂರು ಆವೃತ್ತಿಗಳಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕರಾಗಿದ್ದ ಅವರು 2025ರ ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಆಡಲಿದ್ದಾರೆ. 2024ರ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ನಾಯಕ ಕೆಎಲ್ ರಾಹುಲ್ ಮತ್ತು ಫ್ರಾಂಚೈಸಿ ಮಾಲಿಕ ಸಂಜೀವ್ ಗೊಯೆಂಕಾ ನಡುವಿನ ಜಗಳ ಭಾರಿ ಸದ್ದು ಮಾಡಿತ್ತು.
ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಎಲ್‌ಎಸ್‌ಜಿ ಹೀನಾಯವಾಗಿ ಸೋಲನುಭವಿಸಿದ ಬಳಿಕ ಸಂಜೀವ್ ಗೊಯೆಂಕಾ ಮೈದಾನದಲ್ಲೇ ಕೆಎಲ್ ರಾಹುಲ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆಗಲೇ ಕೆಎಲ್ ರಾಹುಲ್ ಎಲ್‌ಎಸ್‌ಜಿ ಜೊತೆ ಉಳಿಯುವುದಿಲ್ಲ ಎಂದು ಖಚಿತವಾಗಿತ್ತು.

ನಿರೀಕ್ಷೆಯಂತೆ ಕೆಎಲ್ ರಾಹುಲ್‌ರನ್ನು ಐಪಿಎಲ್ ಮೆಗಾ ಹರಾಜಿಗೆ ಮುನ್ನ ಬಿಡುಗಡೆ ಮಾಡಿತ್ತು. ತನಗೆ ಸ್ವಾತಂತ್ರ ಸಿಗುವ ಕಡೆ ಇರಬೇಕು, ನಾಯಕತ್ವ ಬೇಕೇ ಬೇಕು ಎಂದು ನಾನು ಕೇಳುವುದಿಲ್ಲ ಎಂದು ಕೆಎಲ್ ರಾಹುಲ್ ಹೇಳಿದ್ದರು. ಆರ್ ಸಿಬಿ ಕೆಎಲ್ ರಾಹುಲ್‌ರನ್ನು ಖರೀದಿ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಡೆಲ್ಲಿ ಕ್ಯಾಪಿಟಲ್ಸ್ ಕೆಎಲ್ ರಾಹುಲ್‌ರನ್ನು ಖರೀದಿಸುವಲ್ಲಿ ಯಶಸ್ವಿಯಾಗಿತ್ತು.
ಕೆಎಲ್ ರಾಹುಲ್ ಬಗ್ಗೆ ಅಚ್ಚರಿ ಹೇಳಿಕೆ
ಕೆಎಲ್ ರಾಹುಲ್‌ರನ್ನು ಬಿಡುಗಡೆ ಮಾಡಿದ ಬಳಿಕ ಎಲ್‌ಎಸ್‌ಜಿ ಫ್ರಾಂಚೈಸಿ ಮತ್ತು ಸಂಜೀವ್ ಗೊಯೆಂಕಾ ವಿರುದ್ಧ ಅಭಿಮಾನಿಗಳು ಸಿಟ್ಟಾಗಿದ್ದರು. ಕೆಎಲ್ ರಾಹುಲ್‌ಗೆ ಎಲ್‌ಎಸ್‌ಜಿ ಸರಿಯಾದ ಗೌರವ ಕೊಡಲಿಲ್ಲ ಎಂದು ಆರೋಪಿಸಿದ್ದರು. ಈ ಬಗ್ಗೆ ಸ್ವತಃ ಸಂಜೀವ್ ಗೊಯೆಂಕಾ ಮಾತನಾಡಿದ್ದು ಎಲ್ಲಾ ಗೊಂದಲಗಳಿಗೆ ತೆರೆ ಎಳೆದಿದ್ದಾರೆ.
ರಣವೀರ್ ಅಲ್ಲಾಬಾಡಿಯಾ ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಮಾತನಾಡಿದ ಅವರು, ಈ ಘಟನೆಯಲ್ಲಿ ಇಬ್ಬರದ್ದೂ ಏನೂ ತಪ್ಪಿಲ್ಲ, ಕೆಎಲ್ ರಾಹುಲ್ ಅವರಿಗೆ ಶುಭ ಹಾರೈಸುತ್ತೇನೆ ಎಂದಿದ್ದಾರೆ. "ಕೆಎಲ್ ರಾಹುಲ್ ನನಗೆ ಯಾವಾಗಲೂ ಕುಟುಂಬವಿದ್ದಂತೆ, ಅದು ಯಾವಾಗಲೂ ಇರುತ್ತದೆ. ಮೂರು ವರ್ಷಗಳ ಕಾಲ ಅವರು ಎಲ್‌ಎಸ್‌ಜಿಯನ್ನು ಮುನ್ನಡೆಸಿದ್ದಾರೆ, ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಅವರಿಗೆ ನಾನು ಯಾವಾಗಲೂ ಒಳ್ಳೆಯದನ್ನೇ ಬಯಸುತ್ತೇನೆ. ಆತ ಪ್ರತಿಭಾವಂತ ಆಟಗಾರ, ಭಾರತ ತಂಡದಲ್ಲಿ ಉತ್ತಮ ಪ್ರದರ್ಶನ ನೀಡಲಿ" ಎಂದು ಹಾರೈಸಿದರು.
"ಕೆಲವೊಮ್ಮೆ ಸಂದರ್ಭಕ್ಕೆ ತಕ್ಕಂತೆ ಭಾವನೆಗಳನ್ನು ವ್ಯಕ್ತಪಡಿಸಿರುತ್ತೇವೆ. ಆದರೆ ಅದು ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ. ಅವರು ನಮ್ಮ ತಂಡದ ನಾಯಕರಾಗಿದ್ದಾಗ ಸಂವಹನ ಬೇರೆ ರೀತಿ ಇತ್ತು. ಇನ್ನೊಂದು ತಂಡದ ಜೊತೆ ಇದ್ದಾಗ ಮಾತುಕತೆ ಬೇರೆ ಇರುತ್ತದೆ. ಅವರ ಮೇಲೆ ಪ್ರೀತಿ, ಗೌರವ ಎರಡೂ ಇದೆ" ಎಂದು ಹೇಳಿದರು.
ಕೆಎಲ್ ರಾಹುಲ್‌ರನ್ನು ಕೈಬಿಟ್ಟ ಲಕ್ನೋ ಸೂಪರ್ ಜೈಂಟ್ಸ್ ರಿಷಬ್ ಪಂತ್‌ರನ್ನು ಬರೋಬ್ಬರಿ 27 ಕೋಟಿ ರೂಪಾಯಿಗೆ ಖರೀದಿ ಮಾಡಿತು. ಈ ಮೂಲಕ ರಿಷಬ್ ಪಂತ್ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎನಿಸಿಕೊಂಡರು.












Click it and Unblock the Notifications