Rohit Sharma: ರೋಹಿತ್ ಶರ್ಮಾಗೆ ₹50 ಕೋಟಿ ಆಫರ್: ಎಲ್‌ಎಸ್‌ಜಿ ತಂಡದ ಮಾಲಿಕ ಹೇಳಿದ್ದೇನು?
ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮಾ, ಈ ಬಾರಿ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆಯಲಿದ್ದು ಐಪಿಎಲ್ ಮೆಗಾ ಹರಾಜಿನಲ್ಲಿ ನೋಂದಾಯಿಸಿಕೊಳ್ಳುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನು ರೋಹಿತ್ ಶರ್ಮಾ ಮೆಗಾ ಹರಾಜಿಗೆ ಬಂದರೆ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ಭಾರಿ ಪೈಪೋಟಿ ನಡೆಯುತ್ತದೆ ಎಂದು ನಿರೀಕ್ಷೆ ಮಾಡಲಾಗಿದೆ. ಹಲವು ಫ್ರಾಂಚೈಸಿಗಳು ಈಗಾಗಲೇ ರೋಹಿತ್ ಶರ್ಮಾ ಅವರಿಗೆ ದೊಡ್ಡ ಆಫರ್ ನೀಡಿವೆ ಎಂದು ವರದಿಯಾಗಿದೆ. ಲಕ್ನೋ ಸೂಪರ್ ಜೈಂಟ್ಸ್ ಕೂಡ ರೋಹಿತ್ ಶರ್ಮಾಗೆ ₹50 ಕೋಟಿ ಆಫರ್ ಕೊಟ್ಟಿದೆ ಎನ್ನುವ ಸುದ್ದಿ ಇದ್ದು ಇದಕ್ಕೆ ಮಾಲೀಕ ಸಂಜೀವ್ ಗೊಯೆಂಕಾ ಪ್ರತಿಕ್ರಿಯೆ ನೀಡಿದ್ದಾರೆ.
ರೋಹಿತ್ ಶರ್ಮಾ ಅವರಿಗಾಗಿ ಎಲ್‌ಎಸ್‌ಜಿ ಫ್ರಾಂಚೈಸಿ ಪ್ರತ್ಯೇಕವಾಗಿ 50 ಕೋಟಿ ರೂಪಾಯಿ ಇಟ್ಟುಕೊಂಡಿದೆ ಎನ್ನುವ ವದಂತಿ ನಿಜವೇ ಎಂದು ಸ್ಪೋರ್ಟ್ಸ್ ಟಾಕ್ ನಲ್ಲಿ ಆಂಕರ್ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಂಜೀವ್ ಗೊಯೆಂಕಾ, ಇದೆಲ್ಲಾ ಊಹಾಪೋಹಗಳು ಎಂದು ಹೇಳಿದ್ದಾರೆ.

ಒಬ್ಬ ಆಟಗಾರನಿಗೆ ಅಷ್ಟು ಕೊಟ್ಟರೆ!
"ರೋಹಿತ್ ಶರ್ಮಾ ಹರಾಜಿಗೆ ಬರುತ್ತಾರೋ ಇಲ್ಲವೋ ಎನ್ನುವ ವಿಚಾರ ನಿಮಗೆ ಅಥವಾ ಇನ್ಯಾರಿಗಾದರೂ ಗೊತ್ತಿದೆಯಾ? ಕಾರಣವೇ ಇಲ್ಲದೆ ಊಹಾಪೋಹಗಳನ್ನು ಹಬ್ಬಿಸಲಾಗುತ್ತಿದೆ. ಅವರು ಹರಾಜಿಗೆ ಬಂದರೂ, ತಂಡದ ಒಟ್ಟು ಹಣದ ಮಿತಿ 50% ರಷ್ಟನ್ನು ಒಬ್ಬ ಆಟಗಾರನಿಗೆ ಕೊಟ್ಟರೆ, ಉಳಿದ 22 ಆಟಗಾರರನ್ನು ಹೇಗೆ ನಿರ್ವಹಣೆ ಮಾಡುವುದು? ಎಂದು ಪ್ರಶ್ನೆ ಮಾಡಿದ್ದಾರೆ.
ರೋಹಿತ್ ಶರ್ಮಾ ಅವರು ನಿಮ್ಮ ಖರೀದಿ ಮಾಡುವ ಆಟಗಾರರ ಲಿಸ್ಟ್‌ನಲ್ಲಿ ಇದ್ದಾರ ಎನ್ನುವ ಪ್ರಶ್ನೆಗೆ ಉತ್ತರ ಕೊಟ್ಟ ಸಂಜೀವ್ ಗೊಯೆಂಕಾ, ಪ್ರತಿಯೊಬ್ಬರಿಗೂ ವಿಶ್‌ಲಿಸ್ಟ್ ಇದೆ. ಎಲ್ಲಾ ತಂಡಗಳು ಅತ್ಯುತ್ತಮ ಆಟಗಾರ, ನಾಯಕ ಇರಬೇಕು ಎಂದು ಬಯಸುತ್ತಾರೆ. ಆದರೆ ಎಲ್ಲಾ ತಂಡಗಳಿಗೂ ಒಬ್ಬನೇ ಆಟಗಾರ ಸಿಗುವುದಿಲ್ಲ ಎಂದು ಹೇಳಿದರು.
ಈ ಮೂಲಕ ರೋಹಿತ್ ಶರ್ಮಾ ಹರಾಜಿಗೆ ಬಂದರೆ ತಾವು ಕೂಡ ಬಿಡ್ ಮಾಡುತ್ತೇವೆ ಎಂದು ಪರೋಕ್ಷವಾಗಿ ಹೇಳಿದ್ದಾರೆ. ಕೆಎಲ್ ರಾಹುಲ್ ಅವರನ್ನು ರಿಟೈನ್ ಮಾಡಿಕೊಳ್ಳುವುದು ಬಹುತೇಕ ಅನುಮಾನವಾಗಿದ್ದು, ತಂಡದಲ್ಲಿ ಬದಲಾವಣೆ ಮಾಡಲು ಫ್ರಾಂಚೈಸಿ ನಿರ್ಧರಿಸಿದೆ ಎನ್ನಲಾಗಿದೆ.
ರೋಹಿತ್ ಶರ್ಮಾರನ್ನು ಖರೀದಿ ಮಾಡಲು ಸಾಧ್ಯವಾಗದೇ ಇದ್ದರೆ, ನಿಕೋಲಸ್ ಪೂರನ್‌ರನ್ನು ನಾಯಕರನ್ನಾಗಿ ಮಾಡುವ ಯೋಚನೆ ಕೂಡ ಫ್ರಾಂಚೈಸಿಗೆ ಇದೆ. ಕೆಎಲ್ ರಾಹುಲ್‌ರನ್ನು ತಂಡದಲ್ಲಿ ಉಳಿಸಿಕೊಂಡರು, ಅವರಿಗೆ ನಾಯಕತ್ವ ನೀಡದೇ ಇರಲು ನಿರ್ಧರಿಸಲಾಗಿದೆ.
ರೋಹಿತ್ ಶರ್ಮಾರನ್ನು ಮುಂಬೈ ಇಂಡಿಯನ್ಸ್ ಬಿಡುಗಡೆ ಮಾಡಿದರೆ, ಮೆಗಾ ಹರಾಜಿನಲ್ಲಿ ಅವರು ದಾಖಲೆಯ ಬೆಲೆಗೆ ಬೇರೆ ತಂಡದ ಪಾಲಾಗುವುದಂತೂ ನಿಶ್ಚಿತ. ಗುಜರಾತ್ ಟೈಟಾನ್ಸ್, ಡೆಲ್ಲಿ ಕ್ಯಾಪಿಟಲ್ಸ್, ಆರ್ ಸಿಬಿ ಕೂಡ ಭಾರತ ತಂಡದ ನಾಯಕನ ಮೇಲೆ ಕಣ್ಣಿಟ್ಟಿವೆ.












Click it and Unblock the Notifications