Commonwealth Games 2026: ಕಾಲು ಕಳೆದುಕೊಂಡರೂ ಛಲ ಬಿಡದ ಕರ್ನಾಟಕದ ಗಟ್ಟಿಗಿತ್ತಿ ಶಿಲ್ಪಾ, ಐತಿಹಾಸಿಕ ಸಾಧನೆ

KS Shilpa: ಸ್ಕಾಟ್‌ಲೆಂಡ್‌ನ ಗ್ಲ್ಯಾಸ್ಗೋದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಪದಕದ ಬೇಟೆ ಮುಂದುವರೆಸಿದೆ. ಅದರಲ್ಲೂ ಇದೀಗ ಮೈಸೂರಿನ ಕೆ.ಎಸ್.ಶಿಲ್ಪಾ ಅವರು ಐತಿಹಾಸಿಕ ಸಾಧನೆ ಮಾಡಿ ಕರ್ನಾಟಕ ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ಕುರಿತ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.

ಕಾಮನ್‌ವೆಲ್ತ್‌ ಗೇಮ್ಸ್‌ ಕ್ರೀಡಾಕೂಟದ ಮಹಿಳೆಯರ ಶೂಟ್‌ಪುಟ್ F57 ವಿಭಾಗದಲ್ಲಿ ಮೈಸೂರು ಮೂಲದ ಕ್ರೀಡಾಪಟು ಕೆ.ಎಸ್.ಶಿಲ್ಪಾ ಅವರು ಅದ್ಭುತ ಪ್ರದರ್ಶನ ನೀಡಿದ್ದು, ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟಿದ್ದಾರೆ. ಇದೇ ವಿಭಾಗದಲ್ಲಿ ಶರ್ಮಿಳಾ ಧನ್ಕರ್ ಐತಿಹಾಸಿಕ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.

KS Shilpa Wins Historic Bronze Medal at Commonwealth Games 2026 Karnataka s Athlete Creates History

ಅತ್ಯದ್ಭುತ ಸಾಧನೆ ಮಾಡಿದ ಮೈಸೂರಿನ ಶಿಲ್ಪಾ

ಫೈನಲ್‌ನಲ್ಲಿ ಶಿಲ್ಪಾ 7.26 ಮೀಟರ್ ದೂರ ಎಸೆಯುವ ಮೂಲಕ ವೈಯಕ್ತಿಕ ಅತ್ಯುತ್ತಮ ಸಾಧನೆ ಮಾಡಿದರು. ಆದರೆ ಹಾಲಿ ಚಾಂಪಿಯನ್ ನೈಜೀರಿಯಾದ ಯುಚಾರಿಯಾ ಇಯಾಜಿ 8.19 ಮೀಟರ್ ಎಸೆದು ಮೂರನೇ ಸ್ಥಾನ ಪಡೆದಾಗ ಶಿಲ್ಪಾ ನಾಲ್ಕನೇ ಸ್ಥಾನಕ್ಕೆ ಕುಸಿದರು. ಆದರೆ, ನೈಜೀರಿಯಾ ಅಥ್ಲೀಟ್‌ನ ಎಸೆತದಲ್ಲಿ ನಿಯಮಬಾಹಿರ ಅಂಶಗಳಿದ್ದಿದ್ದನ್ನು ಗುರುತಿಸಿದ ಭಾರತೀಯ ತಂಡ ಔಪಚಾರಿಕ ದೂರು ಸಲ್ಲಿಸಿತು.

ಅಧಿಕಾರಿಗಳು ವೀಡಿಯೊ ಪರಿಶೀಲನೆ ನಡೆಸಿದಾಗ ಆ ಥ್ರೋ ಫೌಲ್ ಎಂಬುದು ದೃಢಪಟ್ಟಿತು. ಇಯಾಜಿ ಅವರ ಉಳಿದ ಯತ್ನಗಳು ಮಾನ್ಯ ಆಗಿರದಿದ್ದರಿಂದ ಅವರು ಸ್ಪರ್ಧೆಯಿಂದ ಹೊರಬಿದ್ದರು. ಈ ಹಿನ್ನೆಲೆಯಲ್ಲಿ ಭಾರತದ ಶಿಲ್ಪಾ ಅವರ 7.26 ಮೀಟರ್ ಸಾಧನೆ ಮೂರನೇ ಸ್ಥಾನಕ್ಕೆ ಬಡ್ತಿ ಪಡೆದು ಅವರಿಗೆ ಕಂಚಿನ ಪದಕ ಒಲಿಯಿತು.

ಕಷ್ಟಗಳನ್ನ ಮೆಟ್ಟಿ ನಿಂತ ಶಿಲ್ಪಾ

36 ವರ್ಷದ ಶಿಲ್ಪಾ ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲೂಕಿನ ಕಂಚುಗಾರ ಕೊಪ್ಪಲು ಗ್ರಾಮದ ರೈತ ಕುಟುಂಬದವರು. ತಮ್ಮ ನಾಲ್ಕನೇ ವಯಸ್ಸಿನಲ್ಲಿ ಐಸ್‌ಕ್ರೀಂ ಖರೀದಿಸಲು ರಸ್ತೆ ದಾಟುತ್ತಿದ್ದಾಗ ಸಂಭವಿಸಿದ ಭೀಕರ ಲಾರಿ ಅಪಘಾತದಲ್ಲಿ ತಮ್ಮ ಎಡಗಾಲನ್ನು ಕಳೆದುಕೊಂಡರು. ಆದರೂ ಧೈರ್ಯ ಕಳೆದುಕೊಳ್ಳದ ಅವರು ವಿದ್ಯಾಭ್ಯಾಸ ಮುಂದುವರಿಸಿ ಎಂ.ಎ ಹಾಗೂ ಬಿ.ಇಡಿ ಪೂರ್ಣಗೊಳಿಸಿ ಮೈಸೂರಿನಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು.

ದಿನನಿತ್ಯ ಬಸ್ ಪ್ರಯಾಣದ ವೇಳೆ ಸಿಕ್ಕ ಗೀತಾ ಎಂಬ ಗೆಳತಿಯ ಮಾರ್ಗದರ್ಶನದಿಂದ 2019ರಲ್ಲಿ ಪ್ಯಾರಾ ಕ್ರೀಡೆಗೆ ಪಾದಾರ್ಪಣೆ ಮಾಡಿದರು. ಆರಂಭದಲ್ಲಿ ಸಿಟ್ಟಿಂಗ್ ವಾಲಿಬಾಲ್‌ನಲ್ಲಿ ಕರ್ನಾಟಕ ತಂಡವನ್ನು ನಾಲ್ಕು ಬಾರಿ ಮುನ್ನಡೆಸಿದರು. ನಂತರ ತರಬೇತುದಾರ ರಾಘವೇಂದ್ರ ಅವರ ಸಲಹೆಯಂತೆ ವೈಯಕ್ತಿಕ ಕ್ರೀಡೆಗಳತ್ತ ಗಮನ ಹರಿಸಿದರು.

ಬಳಿಕ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಕೋಚ್ ಎಸ್.ಡಿ. ಈಶಾನ್ ಅವರಿಂದ ತರಬೇತಿ ಪಡೆದ ಶಿಲ್ಪಾ ಅವರು, 2023ರಲ್ಲಿ ಥಾಯ್ಲೆಂಡ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಸ್ಪರ್ಧೆಯ ಡಿಸ್ಕಸ್ ಥ್ರೋನಲ್ಲಿ ಬೆಳ್ಳಿ ಹಾಗೂ ಜಾವೆಲಿನ್ ಥ್ರೋನಲ್ಲಿ ಕಂಚು ಗೆದ್ದಿದ್ದರು. ಇದೀಗ 2026ರ ಕಾಮನ್‌ವೆಲ್ತ್ ಗೇಮ್ಸ್‌ಗೆ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಅಥ್ಲೀಟ್ ಎಂಬ ಹೆಗ್ಗಳಿಕೆಯೊಂದಿಗೆ ಕಣಕ್ಕಿಳಿದು ಮೊದಲ ಪ್ರಯತ್ನದಲ್ಲೇ ಕಂಚಿನ ಪದಕಕ್ಕೆ ಮುತ್ತಿಟ್ಟು ದಾಖಲೆ ಬರೆದಿದ್ದಾರೆ.

ಶಿಲ್ಪಾ ಸಾಧನೆಗೆ ಸಿಎಂ ಡಿಕೆಶಿ ಮೆಚ್ಚುಗೆ

ಇನ್ನೈ ಶಿಲ್ಪಾ ಅವರ ಈ ಐತಿಹಾಸಿಕ ಸಾಧನೆಯನ್ನು ಶ್ಲಾಘಿಸಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಟ್ವೀಟ್ ಮೂಲಕ ಅಭಿನಂನೆ ತಿಳಿಸಿದ್ದಾರೆ. '2026ರ ಕಾಮನ್‌ವೆಲ್ತ್ ಕ್ರೀಡಾಕೂಟದ ಮಹಿಳೆಯರ F57 ಶಾಟ್‌ಪುಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದ ಕರ್ನಾಟಕದ ಹೆಮ್ಮೆಯ ಕ್ರೀಡಾಪಟು ಶಿಲ್ಪಾ ಅವರಿಗೆ ಅಭಿನಂದನೆಗಳು. ನಿಮ್ಮ ಈ ಸಾಧನೆ ಕರ್ನಾಟಕ ಮತ್ತು ಇಡೀ ದೇಶಕ್ಕೆ ಹೆಮ್ಮೆ ತಂದಿದೆ. ನಿಮ್ಮ ದೃಢನಿಶ್ಚಯ, ಸವಾಲುಗಳನ್ನು ಎದುರಿಸುವ ಸಾಮರ್ಥ್ಯ ಹಾಗೂ ಅಚಲ ಹೋರಾಟದ ಮನೋಭಾವವು ಯುವ ಅಥ್ಲೀಟ್‌ಗಳಿಗೆ ಸ್ಪೂರ್ತಿಯಾಗಿದೆ. ನಿಮಗೆ ಹೀಗೆ ನಿರಂತರ ಯಶಸ್ಸು ಸಿಗಲಿ ಹಾಗೂ ಭಾರತಕ್ಕೆ ಇನ್ನೂ ಅನೇಕ ಪ್ರಶಸ್ತಿ-ಪದಕಗಳನ್ನು ತಂದುಕೊಡುವಂತಾಗಲಿ,' ಎಂದು ಬರೆದುಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+