KL Rahul: ಕೊಟ್ಟ ಮಾತು ಉಳಿಸಿಕೊಂಡ ಕನ್ನಡಿಗ ಕೆಎಲ್ ರಾಹುಲ್; ಬಾಗಲಕೋಟೆ ವಿದ್ಯಾರ್ಥಿ ಓದಿಗೆ ಸಹಾಯ
ಕನ್ನಡಿಗ ಕೆಎಲ್ ರಾಹುಲ್ ತಮ್ಮ ಕ್ಲಾಸ್ ಬ್ಯಾಟಿಂಗ್‌ನಿಂದಲೇ ಹೆಸರಾದವರು. ಸಮಾಜ ಸೇವೆ ಮಾಡುವುದರಲ್ಲಿ ಕೂಡ ಕೆಎಲ್ ರಾಹುಲ್ ಹಿಂದೆ ಬಿದ್ದಿಲ್ಲ, ಇದೀಗ ಕೊಟ್ಟ ಮಾತಿನಂತೆ ಬಾಗಲಕೋಟೆ ವಿದ್ಯಾರ್ಥಿಯೊಬ್ಬನ ಶಿಕ್ಷಣಕ್ಕೆ ನೆರವಾಗಿದ್ದು, ಅಭಿಮಾನಿಗಳ ಮನ ಗೆದ್ದಿದ್ದಾರೆ. ಎರಡನೇ ವರ್ಷದ ಬಿ.ಕಾಂ ಓದುತ್ತಿರುವ ವಿದ್ಯಾರ್ಥಿಯೇ ಈ ವಿಚಾರವನ್ನು ಹಂಚಿಕೊಂಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರ ನಿವಾಸಿ ಅಮೃತ್ ಮಾವಿನಕಟ್ಟಿ ಅವರ ವಿದ್ಯಾಭ್ಯಾಸ ಮುಂದುವರಿಸಲು ಕೆಎಲ್ ರಾಹುಲ್ ಮುಂದಾಗಿದ್ದು, ಎರಡನೇ ವರ್ಷದ ಕಾಲೇಜು ಶುಲ್ಕವನ್ನು ಪಾವತಿಸಿದ್ದಾರೆ. ಮೊದಲನೇ ವರ್ಷದ ಕಾಲೇಜು ಶುಲ್ಕವನ್ನು ಕೂಡ ಕೆಎಲ್ ರಾಹುಲ್ ಭರಿಸಿದ್ದರು, ಶಿಕ್ಷಣ ಮುಗಿಯುವವರೆಗೂ ಶುಲ್ಕವನ್ನು ಭರಿಸುವ ಭರವಸೆ ನೀಡಿದ್ದರು, ಈಗ ಅದರಂತೆ ಎರಡನೇ ವರ್ಷದ ಶುಲ್ಕ 75,000 ರೂಪಾಯಿಗಳನ್ನು ಭರಿಸಿದ್ದಾರೆ.

ದಿಸೌತ್ ಫಸ್ಟ್.ಕಾಂ ವರದಿ ಮಾಡಿರುವ ಪ್ರಕಾರ, ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ಬಿಕಾಂ ಓದುತ್ತಿರುವ ರಾಹುಲ್ ಮಾವಿನಕಟ್ಟಿಗೆ ಹಣಕಾಸಿನ ನೆರವು ಕೊಟ್ಟಿದ್ದಾರೆ. ಹುಬ್ಬಳಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿರುವ ವಿದ್ಯಾರ್ಥಿ ಅಮೃತ್ ಮಾವಿನಕಟ್ಟಿ, ಮೊದಲನೇ ವರ್ಷ ಕಾಲೇಜಿಗೆ ಸೇರಲು ಕೆಎಲ್ ರಾಹುಲ್ ಸಹಾಯ ಮಾಡಿದ್ದರು, ಈಗ ಎರಡನೇ ವರ್ಷದ ವಿದ್ಯಾಭ್ಯಾಸಕ್ಕೆ ಕೂಡ ಸಹಾಯ ಮಾಡುವುದಾಗಿ ಹೇಳಿದ್ದರು.
ಮೊದಲ ವರ್ಷದಲ್ಲಿ ಉತ್ತಮ ಅಂಕ ಗಳಿಸಿದ್ದೇನೆ, ಈಗ ಕೆಎಲ್ ರಾಹುಲ್ ಕೂಡ ತಾವು ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಎರಡನೇ ವರ್ಷದ ಅಧ್ಯಯನಕ್ಕಾಗಿ 75000 ರೂಪಾಯಿ ಪಾವತಿಸಿದ್ದಾರೆ ಎಂದು ಹೇಳಿದ್ದಾರೆ.
ಅಧ್ಯಯನ ಮಾಡಲು ಆರ್ಥಿಕವಾಗಿ ಸಹಾಯ ಮಾಡಿದ ಕೆಎಲ್ ರಾಹುಲ್, ಮಂಜುನಾಥ್ ಹೆಬಸೂರ್ ಮತ್ತು ಬಾಗಲಕೋಟೆಯ ನಿತಿನ್ ಅವರಿಗೆ ಧನ್ಯವಾದ ಹೇಳುತ್ತೇನೆ. ಉತ್ತಮವಾಗಿ ಓದುವ ಮೂಲಕ, ಉತ್ತಮ ಸಾಧನೆ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
KL Rahul with financial help to continue the degree course for a Student. ❤️
— Johns. (@CricCrazyJohns) October 7, 2024
- Rahul is winning the heart of all. pic.twitter.com/HBeh8LjAU9
ಕೆಎಲ್ ರಾಹುಲ್ ಕೆಲಸಕ್ಕೆ ವ್ಯಾಪಕ ಮೆಚ್ಚುಗೆ
ಕನ್ನಡಿಗ ಕೆಎಲ್ ರಾಹುಲ್ ಅವರ ಈ ಸಾಮಾಜಿಕ ಕಳಕಳಿಯನ್ನ ಕಂಡು ಅಭಿಮಾನಿಗಳು ಮನಸಾರೆ ಮೆಚ್ಚಿಕೊಂಡಿದ್ದಾರೆ. ಕೆಎಲ್ ರಾಹುಲ್ ಜೆಂಟಲ್‌ಮ್ಯಾನ್ ಎಂದು ಕರೆದಿದ್ದಾರೆ. ಕೆಎಲ್ ರಾಹುಲ್ ಇಂತಹ ಹಲವು ಸಮಾಜಸೇವೆಗಳನ್ನು ಮಾಡಿದ್ದಾರೆ ಎಂದು ಅಭಿಮಾನಿಗಳು ಹೇಳಿದ್ದಾರೆ.
ಭಾರತ ತಂಡಕ್ಕೆ ವಾಪಸ್
ಮಂಡಿರಜ್ಜು ಗಾಯದಿಂದ ಬಳಲುತ್ತಿದ್ದ ಕೆಎಲ್ ರಾಹುಲ್ ಸದ್ಯ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ಭಾರತ ತಂಡಕ್ಕೆ ಮರಳಿದ್ದಾರೆ. ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಗಳಿಸುವ ಮೂಲಕ ಮಿಂಚಿದ್ದಾರೆ. ಮುಂಬರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಆಡಲು ತಯಾರಿ ನಡೆಸುತ್ತಿದ್ದಾರೆ.












Click it and Unblock the Notifications