KL Rahul: ಭಾರತ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ನಾಯಕ?
ಟಿ20 ವಿಶ್ವಕಪ್ ಗೆದ್ದಿರುವ ಭಾರತ ತಂಡದ ಹಿರಿಯ ಆಟಗಾರರಿಗೆ ಸದ್ಯ ವಿಶ್ರಾಂತಿ ನೀಡಲಾಗಿದ್ದು, ಯುವ ಆಟಗಾರರು ಜಿಂಬಾಬ್ವೆ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿದ್ದಾರೆ. ಜುಲೈ 27ರಿಂದ ಆರಂಭವಾಗಲಿರುವ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕೂಡ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಿದ್ದು, ಯುವ ಆಟಗಾರರಿಗೆ ಮಣೆ ಹಾಕುವ ಸಾಧ್ಯತೆ ಇದೆ.
ಶ್ರೀಲಂಕಾ ವಿರುದ್ಧ 3 ಏಕದಿನ ಮತ್ತು ಟಿ20 ಪಂದ್ಯಗಳ ಸರಣಿಯನ್ನು ಭಾರತ ಆಡಲಿದೆ. ಈ ವಾರಾಂತ್ಯದಲ್ಲಿ ಭಾರತ ತಂಡವನ್ನು ಘೋಷಣೆ ಮಾಡಲಿದೆ. ಭಾರತ ಏಕದಿನ ತಂಡದಲ್ಲಿ ರೋಹಿತ್ ಮತ್ತು ವಿರಾಟ್‌ಗೆ ವಿಶ್ರಾಂತಿ ನೀಡಲಾಗುತ್ತಿದ್ದು ಕೆಎಲ್ ರಾಹುಲ್ ಅವರಿಗೆ ನಾಯಕತ್ವ ವಹಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ಟೀಮ್ ಇಂಡಿಯಾದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರು ಶ್ರೀಲಂಕಾ ಪ್ರವಾಸದಿಂದ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ. ತಂಡದ ಆಯ್ಕೆ ವಿಚಾರದಲ್ಲಿ ಕೂಡ ಅವರು ಹಲವು ಸಲಹೆಗಳನ್ನು ನೀಡಲಿದ್ದಾರೆ.
ವಿಭಿನ್ನ ನಾಯಕರ ಆಯ್ಕೆಗೆ ಆಸಕ್ತಿ
ಭಾರತ ತಂಡದ ಆಯ್ಕೆ ಸಮಿತಿಯೊಂದಿಗೆ ಗಂಭೀರ್ ಅವರ ಮೊದಲ ಸಭೆ ಈ ವಾರದ ಕೊನೆಯಲ್ಲಿ ನಡೆಯಲಿದೆ. ಎರಡು ಸ್ವರೂಪಗಳಿಗೆ ಇಬ್ಬರು ವಿಭಿನ್ನ ನಾಯಕರನ್ನು ಆಯ್ಕೆ ಮಾಡಲು ಗಂಭೀರ್ ಉತ್ಸುಕರಾಗಿದ್ದಾರೆ ಎಂದು ತಿಳಿದುಬಂದಿದೆ.
ಈ ಹಿಂದೆಯೂ ಸೀಮಿತ ಓವರ್ ಗಳ ಮಾದರಿಯಲ್ಲಿ ಭಾರತ ತಂಡವನ್ನು ಮುನ್ನಡೆಸಿದ ಕೆಎಲ್ ರಾಹುಲ್ ಹೆಸರು ಏಕದಿನ ಮಾದರಿಯಲ್ಲಿ ಮುಂಚೂಣಿಗೆ ಬಂದಿದೆ. ಟಿ20 ಸರಣಿಯಲ್ಲಿ ವಿಶ್ವಕಪ್ ವಿಜೇತ ನಾಯಕ ರೋಹಿತ್ ಶರ್ಮಾಗೆ ಉಪನಾಯಕರಾಗಿದ್ದ ಹಾರ್ದಿಕ್ ಪಾಂಡ್ಯ ಭಾರತ ತಂಡವನ್ನು ಮುನ್ನಡೆಸುವ ಸಾಧ್ಯತೆಯಿದೆ.
ರೋಹಿತ್-ಕೊಹ್ಲಿಗೆ ವಿಶ್ರಾಂತಿ
ರೋಹಿತ್, ಕೊಹ್ಲಿ ಮತ್ತು ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವಿದಾಯ ಹೇಳಿದ್ದಾರೆ. ಗಂಭೀರ್ ಕೋಚಿಂಗ್‌ನಲ್ಲಿ ಮುಂದಿನ ವಿಶ್ವಕಪ್ ವೇಳೆಗೆ ಯುವ ತಂಡವನ್ನು ರೂಪಿಸಲು ಸಿದ್ಧತೆ ಆರಂಭಿಸಲಾಗಿದೆ.
ರೋಹಿತ್ ಮತ್ತು ಕೊಹ್ಲಿ ಜೊತೆಗೆ, ಜಸ್ಪ್ರೀತ್ ಬುಮ್ರಾ ಕೂಡ ಭಾರತಕ್ಕಾಗಿ ವಿಶ್ವಕಪ್ ಗೆದ್ದ ನಂತರ ಶ್ರೀಲಂಕಾ ಪ್ರವಾಸಕ್ಕೆ ವಿಶ್ರಾಂತಿ ಪಡೆದಿದ್ದಾರೆ. ಮುಂಬರುವ ಟೆಸ್ಟ್ ಸರಣಿಗಳನ್ನು ಗಮನದಲ್ಲಿಟ್ಟುಕೊಂಡು ಬುಮ್ರಾ ಅವರಿಗೆ ವಿಶ್ರಾಂತಿ ನೀಡಲು ಬಿಸಿಸಿಐ ನಿರ್ಧರಿಸಿದೆ.
ರೋಹಿತ್ ಅನುಪಸ್ಥಿತಿಯಲ್ಲಿ ಹಾರ್ದಿಕ್ ಮತ್ತು ಕೆಎಲ್ ರಾಹುಲ್ ಅವರಿಗೆ ನಾಯಕನ ಜವಾಬ್ದಾರಿಯನ್ನು ನೀಡಲಿದ್ದಾರೆ ಎಂದು ನಿರೀಕ್ಷಿಸಲಾಗಿದೆ. ಇಬ್ಬರೂ ಈ ಹಿಂದೆ ತಂಡದ ನಾಯಕರಾಗಿದ್ದರು ಎಂದು ಬಿಸಿಸಿಐನ ಉನ್ನತ ಮೂಲಗಳು ತಿಳಿಸಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.
ಹಾರ್ದಿಕ್ ಟಿ20 ಸರಣಿಗೆ ಲಭ್ಯವಿಲ್ಲದಿದ್ದರೆ, ಸೂರ್ಯಕುಮಾರ್ ಯಾದವ್ ಅವರು ನಾಯಕರಾಗುವ ಸಾಧ್ಯತೆ ಇದೆ. ಏಕದಿನ ಸರಣಿಯಲ್ಲಿ ಕೆಎಲ್ ರಾಹುಲ್ ಅವರನ್ನು ನಾಯಕನಾಗಿ ನೋಡಬಹುದು. ಆದರೆ ಸದ್ಯಕ್ಕೆ, ಹಾರ್ದಿಕ್ ಮತ್ತು ಕೆಎಲ್ ರಾಹುಲ್ ತಂಡವನ್ನು ಮುನ್ನಡೆಸುವ ಸಾಧ್ಯತೆ ಹೆಚ್ಚಾಗಿದೆ ಎಂದು ಹೇಳಿದೆ.
ಶ್ರೀಲಂಕಾ ಪ್ರವಾಸ ಜುಲೈ 27 ರಿಂದ ಆರಂಭವಾಗಲಿದ್ದು, ಮೂರನೇ ಟಿ20 ಪಂದ್ಯ ಜುಲೈ 30 ರಂದು ನಡೆಯಲಿದೆ. 3 ಪಂದ್ಯಗಳ ಏಕದಿನ ಸರಣಿಯು ಆಗಸ್ಟ್ 2 ರಿಂದ ಪ್ರಾರಂಭವಾಗಲಿದ್ದು, ಆಗಸ್ಟ್ 7 ರಂದು ಮುಕ್ತಾಯಗೊಳ್ಳಲಿದೆ.












Click it and Unblock the Notifications