KKR: ಸಿಎಸ್‌ಕೆ ತಂಡಕ್ಕೆ ಶಾಕ್; ಗೌತಮ್ ಗಂಭೀರ್ ಜಾಗಕ್ಕೆ ಡ್ವೇನ್ ಬ್ರಾವೊ ನೇಮಕ
2025ರ ಐಪಿಎಲ್ ಮೆಗಾ ಹರಾಜಿಗೆ ಮುನ್ನ ಸಿಎಸ್‌ಕೆ ತಂಡಕ್ಕೆ ಮೊದಲ ಆಘಾತ ಎದುರಾಗಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ತಂಡದ ಮೆಂಟರ್ ಆಗಿ ಗೌತಮ್ ಗಂಭೀರ್ ಬದಲಾಗಿ ಡ್ವೇನ್ ಬ್ರಾವೋ ಅವರನ್ನು ನೇಮಕ ಮಾಡಲಾಗಿದೆ. ಎಲ್ಲಾ ಮಾದರಿಯ ಕ್ರಿಕೆಟ್‌ಗೆ ನಿವೃತ್ತಿ ಘೋಷಣೆ ಮಾಡಿದ ಕೆಲವೇ ಗಂಟೆಗಳ ಬಳಿಕ ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕವಾಗಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ (ಸಿಪಿಎಲ್) 2024ರ ಆವೃತ್ತಿಯಲ್ಲಿ ಆಡುತ್ತಿದ್ದ ಅವರು, ಗಾಯಗೊಂಡು ಟೂರ್ನಿಯಿಂದಲೇ ಹೊರಬಿದ್ದ ಬಳಿಕ, ನಿವೃತ್ತಿ ಘೋಷಿಸಿದರು. ಟಿ20 ಮಾದರಿಯಲ್ಲಿ ದಂತಕತೆಯಾಗಿರುವ ಡ್ವಾನ್ ಬ್ರಾವೋ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ಫ್ರಾಂಚೈಸಿ ಕ್ರಿಕೆಟ್‌ನಲ್ಲಿ ಕೂಡ ಚಾಂಪಿಯನ್ ತಂಡಗಳ ಭಾಗವಾಗಿದ್ದರು.

ಮೆಂಟರ್ ಆಗಿ ಬ್ರಾವೋ ನೇಮಕ ಮಾಡಿಕೊಂಡ ಬಗ್ಗೆ ಪ್ರತಿಕ್ರಿಯೆ ನೀಡಿದ ಕೆಕೆಆರ್ ತಂಡದ ಸಿಇಒ ವೆಂಕಿ ಮೈಸೂರು, "ಬ್ರಾವೋ ಮೆಂಟರ್ ಆಗಿ ನಮ್ಮ ಜೊತೆ ಸೇರಿರುವುದು ರೋಮಂಚನಕಾರಿ ಬೆಳವಣಿಗೆ. ಅವರ ಅಪಾರ ಅನುಭವ, ಜ್ಞಾನವು ಫ್ರಾಂಚೈಸಿಗೆ ಮತ್ತು ಆಟಗಾರರಿಗೆ ಅಪಾರ ಪ್ರಯೋಜನ ನೀಡುತ್ತದೆ. ಸಿಪಿಎಲ್, ಎಂಎಲ್‌ಸಿ ಮತ್ತು ಐಎಲ್‌ಟಿ 20 ಸೇರಿದಂತೆ ವಿಶ್ವದ ಪ್ರಮುಖ ಲೀಗ್‌ಗಳಲ್ಲಿ ಆಡಿರುವ ಅವರು, ನಮ್ಮ ತಂಡದ ಭಾಗವಾಗಿರುವುದು ಸಂತಸ ತಂದಿದೆ" ಎಂದು ಹೇಳಿದರು.
ಸಿಎಸ್‌ಕೆ ಅಭಿಮಾನಿಗಳಿಗೆ ಶಾಕ್
ಡ್ವೇನ್ ಬ್ರಾವೋ ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕವಾಗಿರುವುದು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ತಂಡದ ಅಭಿಮಾನಿಗಳಿಗೆ ಆಘಾತ ತಂದಿದೆ. ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ತಂಡದ ಯಶಸ್ಸಿನಲ್ಲಿ ಬ್ರಾವೋ ಪಾತ್ರ ಮುಖ್ಯವಾದುದು, 2021ರಲ್ಲಿ ಐಪಿಎಲ್‌ನಿಂದ ದೂರವಾದರು ಸಿಎಸ್‌ಕೆ ತಂಡದ ಮೆಂಟರ್ ಆಗಿ ಕೆಲಸ ಮಾಡಿದ್ದರು, ಇನ್ನು ಮುಂದೆ ಕೆಕೆಆರ್ ತಂಡದ ಮೆಂಟರ್ ಆಗಿ ಕೆಲಸ ಮಾಡಲಿದ್ದಾರೆ.
ಕೆಕೆಆರ್ ತಂಡದ ಮೆಂಟರ್ ಆಗಿ ನೇಮಕವಾದ ಬಳಿಕ ಪ್ರತಿಕ್ರಿಯೆ ನೀಡಿದ ಅವರು, ಕೆರಿಬಿಯನ್ ಪ್ರೀಮಿಯರ್ ಲೀಗ್ (CPL) ನಲ್ಲಿ 10 ವರ್ಷಗಳಿಂದ ಟ್ರಿನ್‌ಬಾಗೊ ನೈಟ್ ರೈಡರ್ಸ್‌ನ ಭಾಗವಾಗಿದ್ದೇನೆ. ವಿವಿಧ ಲೀಗಳಲ್ಲಿ ನೈಟ್ ರೈಡರ್ಸ್ ಪರವಾಗಿ ಮತ್ತು ವಿರುದ್ಧವಾಗಿ ಆಡಿದ್ದೇನೆ, ತಂಡದ ಮ್ಯಾನೇಜ್‌ಮೆಂಟ್ ಬಗ್ಗೆ ನನಗೆ ಅಪಾರ ಗೌರವವಿದೆ ಎಂದು ಹೇಳಿದರು.
ಡ್ವಾನ್ ಬ್ರಾವೋ 2021ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಣೆ ಮಾಡಿದ್ದರು. ಐಪಿಎಲ್‌ನಿಂದ ಕೂಡ ದೂರ ಉಳಿದಿದ್ದರು. ಈಗ ನಡೆಯುತ್ತಿರುವ ಕೆರಿಬಿಯನ್ ಪ್ರೀಮಿಯರ್ ಲೀಗ್ ನನ್ನ ಕೊನೆಯ ಆವೃತ್ತಿ ಎಂದು ಆರಂಭದಲ್ಲೇ ಘೋಷಣೆ ಮಾಡಿದ್ದರು. ಆದರೆ ಗಾಯದ ಸಮಸ್ಯೆಯಿಂದ ಪಂದ್ಯಾವಳಿ ಮುಗಿಯುವ ಮುನ್ನವೇ ನಿವೃತ್ತಿ ಘೋಷಣೆ ಮಾಡಿದ್ದಾರೆ.
18 ವರ್ಷಗಳ ಕಾಲ ಕ್ರಿಕೆಟ್ ಆಡಿರುವ ಅವರು, ಟಿ20 ಕ್ರಿಕೆಟ್‌ನಲ್ಲಿ ಹಲವು ದಾಖಲೆಗಳನ್ನು ಮಾಡಿದ್ದಾರೆ. ವೆಸ್ಟ್ ಇಂಡೀಸ್ ತಂಡ ಎರಡು ಬಾರಿ ಟಿ20 ವಿಶ್ವಕಪ್ ಗೆಲ್ಲುವಲ್ಲಿ ಅವರ ಪಾತ್ರ ಪ್ರಮುಖವಾಗಿದೆ. ಐಪಿಎಲ್, ಪಿಎಸ್‌ಎಲ್, ಬಿಗ್ ಬ್ಯಾಷ್ ಲೀಗ್‌ಗಳಲ್ಲಿ ಎರಡು ಅವರು ಆಡಿರುವ ತಂಡ ಚಾಂಪಿಯನ್ ಆಗಿದೆ. 582 ಟಿ20 ಪಂದ್ಯಗಳನ್ನಾಡಿರುವ ಅವರು, 631 ವಿಕೆಟ್ ಪಡೆದಿದ್ದಾರೆ.












Click it and Unblock the Notifications