CK Nayudu Trophy: ಮೊದಲ ಬಾರಿಗೆ ಸಿಕೆ ನಾಯುಡು ಟ್ರೋಫಿ ಗೆದ್ದ ಕರ್ನಾಟಕ
ಕರ್ನಾಟಕ 23 ವರ್ಷದೊಳಗಿನ ಕ್ರಿಕೆಟ್ ತಂಡ ಇದೇ ಮೊದಲ ಬಾರಿಗೆ ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ ಗೆದ್ದು ಇತಿಹಾಸ ನಿರ್ಮಿಸಿದೆ. ಸಿಕೆ ನಾಯುಡು ಟ್ರೋಫಿ ಟೂರ್ನಿ ಫೈನಲ್ ಪಂದ್ಯದಲ್ಲಿ ಉತ್ತರ ಪ್ರದೇಶ ತಂಡದ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಪಂದ್ಯ ಡ್ರಾಗೊಂಡ ನಂತರ ಕರ್ನಾಟಕ ಚಾಂಪಿಯನ್ ಆಗಿ ಹೊರಹೊಮ್ಮಿತು.
ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿತು. ಮೊದಲ ಇನ್ನಿಂಗ್ಸ್‌ನಲ್ಲಿ ಕರ್ನಾಟಕ 358 ರನ್‌ಗಳಿಗೆ ಆಲೌಟ್ ಆಯಿತು.

805 ರನ್‌ಗಳ ಮುನ್ನಡೆ
ಯಶೋವರ್ಧನ್ ಪರಂತಪ್ 105 ರನ್ ಗಳಿಸಿ ಕರ್ನಾಟಕ ತಂಡ ಉತ್ತಮ ರನ್ ಗಳಿಸಲು ನೆರವಾದರು. ಇವರ ಜೊತೆಗೆ ಮಾಂಕೈಲ್ 68 ರನ್, ಅನೀಶ್ ಕೆವಿ 43 ರನ್, ಕೃತಿಕ್ ಕೃಷ್ಣ 66 ರನ್ ಗಳಿಸಿದರು.
ಕರ್ನಾಟಕ ತಂಡವನ್ನು ಆಲೌಟ್ ಮಾಡಿದ ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಉತ್ತರ ಪ್ರದೇಶ ಕೇವಲ 139 ರನ್‌ಗಳಿಗೆ ಆಲೌಟ್ ಆಯಿತು. ಆರಾಧ್ಯ ಯಾದವ್ 66 ರನ್ ಗಳಿಸಿದ್ದು ಬಿಟ್ಟರೆ ಉಳಿದ ಯಾರೊಬ್ಬರೂ ಕೂಡ ಉತ್ತಮ ಪ್ರದರ್ಶನ ನೀಡಲೇ ಇಲ್ಲ. ಪರಾಸ್ ಆರ್ಯ 5 ವಿಕೆಟ್ ಪಡೆದು ಉತ್ತರ ಪ್ರದೇಶಕ್ಕೆ ಆಘಾತ ನೀಡಿದರು. ಮಾಕ್ನೈಲ್ ಮತ್ತು ಮೊಹ್ಸಿನ್ ಖಾನ್ ತಲಾ 2 ವಿಕೆಟ್ ಪಡೆದರು, ಯಶೋವರ್ಧನ್ 1 ವಿಕೆಟ್ ಪಡೆದರು.
219 ರನ್‌ಗಳ ಮುನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬರೋಬ್ಬರಿ 585 ರನ್‌ಗಳನ್ನು ಕಲೆಹಾಕಿತು. ಅನೀಶ್ ಕೆವಿ 214 ರನ್ ಗಳಿಸಿದರೆ, ಪ್ರಕಾರ್ ಚತುರ್ವೇದಿ ಮತ್ತು ಕೃತಿಕ್ ಕೃಷ್ಣ ತಲಾ 86 ರನ್ ಕಲೆಹಾಕಿದರು. ಈ ಮೂಲಕ ಕರ್ನಾಟಕ 804 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತು.
ಎರಡನೇ ಇನ್ನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ಕೊನೆಯ ದಿನದ ಅಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿತು. ಮನ್ವಂತ್ ಕುಮಾರ್ 5 ವಿಕೆಟ್ ಪಡೆದುಕೊಂಡರು. ಮೊಹ್ಸಿನ್ ಖಾನ್ 1 ವಿಕೆಟ್ ಪಡೆದರು.
ಕೊನೆಯ ದಿನದಾಟ ಉತ್ತರ ಪ್ರದೇಶ ಆಲೌಟ್ ಆಗದ ಕಾರಣ ಪಂದ್ಯ ಡ್ರಾನಲ್ಲಿ ಅಂತ್ಯವಾಯಿತು. ಆದರೆ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆದ ಕರ್ನಾಟಕ ಟ್ರೋಫಿ ಗೆದ್ದು ಸಂಭ್ರಮಿಸಿತು.












Click it and Unblock the Notifications