Kamindu Mendis: ಡಾನ್ ಬ್ರಾಡ್‌ಮನ್ ದಾಖಲೆ ಸರಿಗಟ್ಟಿದ ಕಮಿಂದು ಮೆಂಡಿಸ್
ಶ್ರೀಲಂಕಾ ತಂಡದಲ್ಲಿ ಹೊಸ ಸ್ಟಾರ್ ಕ್ರಿಕೆಟಿಗ ಹುಟ್ಟಿಕೊಂಡಿದ್ದಾನೆ, ಕೇವಲ 8ನೇ ಟೆಸ್ಟ್ ಪಂದ್ಯವನ್ನು ಆಡುತ್ತಿರುವ ಈತ ಕ್ರಿಕೆಟ್ ದಂತಕಥೆ ಡಾನ್ ಬ್ರಾಡ್ಮನ್ ಅವರ ದಾಖಲೆಯನ್ನು ಸರಿಗಟ್ಟುವ ಮೂಲಕ ವಿಶ್ವ ಕ್ರಿಕೆಟ್ ಜಗತ್ತಿನ ಗಮನ ಸೆಳೆಯುತ್ತಿದ್ದಾರೆ. 25 ವರ್ಷದ ಕಮಿಂದು ಮೆಂಡಿಸ್ 13 ಇನ್ನಿಂಗ್ಸ್‌ಗಳಲ್ಲಿ 1000 ಪೂರೈಸುವ ಮೂಲಕ ಈ ಮೈಲಿಗಲ್ಲು ಸಾಧಿಸಿದ್ದಾರೆ.
ಗಾಲೆಯಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಎರಡನೇ ಪಂದ್ಯದಲ್ಲಿ 178 ರನ್ ಗಳಿಸಿದ ಸಂದರ್ಭದಲ್ಲಿ ಕಮಿಂದು ಮೆಂಡಿಸ್ ಈ ಸಾಧನೆ ಮಾಡಿದರು. ಶ್ರೀಲಂಕಾ ಮೊದಲ ಇನ್ನಿಂಗ್ಸ್ 5 ವಿಕೆಟ್ ಕಳೆದುಕೊಂಡು 602 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಕಮಿಂದು ಮೆಂಡಿಸ್ ಔಟಾಗದೆ 182 ರನ್ ಗಳಿಸಿ ಮಿಂಚಿದರು.

ಟೆಸ್ಟ್ ಕ್ರಿಕೆಟ್‌ನಲ್ಲಿ ದ್ವಿಶತಕ ಗಳಿಸಲು 18 ರನ್ ಬೇಕಿದ್ದಾಗ ಡಿಕ್ಲೇರ್ ಮಾಡಿಕೊಂಡಿದ್ದರಿಂದ ಅವರು ನಿರಾಸೆ ಅನುಭವಿಸಿದರೂ, ಪಂದ್ಯ ಗೆಲ್ಲುವುದು ಮುಖ್ಯವಾದ ಕಾರಣ ಅದನ್ನು ಬದಿಗೊತ್ತಿ ನಾಯಕನ ನಿರ್ಧಾರವನ್ನು ಗೌರವಿಸಿದರು. ಎಂಟನೇ ಟೆಸ್ಟ್ ಪಂದ್ಯ ಆಡುತ್ತಿರುವ ಕಮಿಂದು ಮೆಂಡಿಸ್ 5 ಶತಕಗಳನ್ನು ಪೂರೈಸಿದರು. ಅಲ್ಲದೆ ಅರ್ಧಶತಕ ಗಳಿಸಿದ ಬಳಿಕ ವೃತ್ತಿಜೀವನ ಆರಂಭದಲ್ಲಿ ಕಡಿಮೆ ಪಂದ್ಯಗಳಲ್ಲಿ 8 ಅರ್ಧಶತಕ ಗಳಿಸಿದ ದಾಖಲೆ ಕೂಡ ಮಾಡಿದರು.
ಕಮಿಂದು ಮೆಂಡಿಸ್ ದಾಖಲೆಗಳು
13 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸುವ ಮೂಲಕ ಡಾನ್ ಬ್ರಾಡ್ಮನ್ ಅವರ ಸಾಧನೆಯನ್ನು ಸರಿಗಟ್ಟಿದರು. ಹರ್ಬರ್ಟ್ ಸಟ್‌ಕ್ಲಿಫ್ ಮತ್ತು ಎವರ್ಟನ್ ವೀಕ್ಸ್ 12 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ್ದು ವೇಗವಾಗಿ ಸಾವಿರ ರನ್ ಪೂರೈಸಿದ ದಾಖಲೆ ಹೊಂದಿದ್ದಾರೆ.
ಟೆಸ್ಟ್ ಕ್ರಿಕೆಟ್‌ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಏಷ್ಯಾದ ಮೊದಲ ಆಟಗಾರ ಎನ್ನುವ ದಾಖಲೆ ಅವರದ್ದಾಗಿದೆ. ಭಾರತದ ಮಾಜಿ ಕ್ರಿಕೆಟಿಗ ವಿನೋದ್ ಕಾಂಬ್ಳಿ 14 ಇನ್ನಿಂಗ್ಸ್‌ಗಳಲ್ಲಿ 1000 ರನ್ ಗಳಿಸಿದ್ದರು.
ಮೊದಲ 8 ಪಂದ್ಯಗಳಲ್ಲಿ 8 ಬಾರಿ 50ಕ್ಕಿಂತ ಹೆಚ್ಚು ರನ್ ಗಳಿಸುವ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಕುಮಾರ ಸಂಗಕ್ಕಾರ ಅವರು 2014ರಲ್ಲಿ ಸತತ ಒಂಬತ್ತು ಟೆಸ್ಟ್‌ಗಳಲ್ಲಿ ಐವತ್ತು ಪ್ಲಸ್ ಸ್ಕೋರ್‌ಗಳನ್ನು ಗಳಿಸಿದ್ದರು. ಆದರೆ ಆರಂಭದ ಪಂದ್ಯಗಳನ್ನು ಗಣನೆಗೆ ತೆಗೆದುಕೊಂಡಾಗ ಕಮಿಂದು ಮೆಂಡಿಸ್ ದಾಖಲೆ ವಿಶೇಷವಾಗಿದೆ.
ಕಮಿಂದು ಮೆಂಡಿಸ್ 8 ಟೆಸ್ಟ್‌ಗಳಲ್ಲಿ 1000 ರನ್ ಗಳಿಸಿದ ಸಾಧನೆ ಮಾಡಿದರು, ಡಾನ್ ಬ್ರಾಡ್ಮನ್ 7 ಟೆಸ್ಟ್ ಪಂದ್ಯಗಳಲ್ಲೇ 1000 ರನ್ ಪೂರೈಸಿದ್ದರು. 1000 ರನ್ ಗಳಿಸಿದಾಗ ಡಾನ್ ಬ್ರಾಡ್ಮನ್ ಅವರ ಸರಾಸರಿ 99.94 ಇದ್ದರೆ, ಮೆಂಡಿಸ್ ಅವರ ಸರಾಸರಿ 91.27 ಆಗಿದ್ದು ಎರಡನೇ ಅತ್ಯುತ್ತಮ ಸರಾಸರಿ ಎನಿಸಿಕೊಂಡಿದೆ.












Click it and Unblock the Notifications