Pakistan: ಪಂದ್ಯದ ವೇಳೆ ಮೈದಾನದಲ್ಲೇ ಕುಸಿದುಬಿದ್ದು ಪಾಕಿಸ್ತಾನ ಮೂಲದ ಕ್ರಿಕೆಟಿಗ ಸಾವು
ಆಸ್ಟ್ರೇಲಿಯಾದಲ್ಲಿ ಕ್ರಿಕೆಟ್ ಆಡುವ ಸಂದರ್ಭದಲ್ಲಿ ಪಾಕಿಸ್ತಾನ ಮೂಲದ ಕ್ರಿಕೆಟಿಗನೊಬ್ಬ ಮೈದಾನದಲ್ಲೇ ಕುಸಿದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಪಾಕಿಸ್ತಾನ ಮೂಲದ ಕ್ಲಬ್ ಮಟ್ಟದ ಕ್ರಿಕೆಟಿಗ ಜುನೈಲ್ ಜಾಫರ್ ಖಾನ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. ಅಡಿಲೇಡ್‌ನ ಕಾನ್ಕಾರ್ಡಿಯಾ ಕಾಲೇಜಿನಲ್ಲಿ ನಡೆದ ಸ್ಥಳೀಯ ಪಂದ್ಯದ ವೇಳೆ ಬಿಸಿಲಿನ ಶಾಖ ಹೆಚ್ಚಾಗಿದ್ದ ಕಾರಣ ಕುಸಿದುಬಿದ್ದು ಮೃತಪಟ್ಟಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ.
ಜುನೈಲ್ ಜಾಫರ್ ಖಾನ್ ಕಳೆದ ಶನಿವಾರ ಮಾರ್ಚ್ 15 ರಂದು ಪ್ರಿನ್ಸ್ ಆಲ್ಫ್ರೆಡ್ ಓಲ್ಡ್ ಕಾಲೇಜಿಯನ್ಸ್ ವಿರುದ್ಧದ ಪಂದ್ಯದಲ್ಲಿ ಓಲ್ಡ್ ಕಾನ್ಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್‌ಗಾಗಿ ಆಡುತ್ತಿದ್ದರು ಎಂದು ಆಸ್ಟ್ರೇಲಿಯಾ ಸುದ್ದಿಮಾಧ್ಯಮ ವರದಿ ಮಾಡಿದೆ.

40 ಓವರ್‌ಗಳ ಕಾಲ ಫೀಲ್ಡಿಂಗ್ ಮಾಡಿ ಏಳು ರನ್ ಗಳಿಸಿದ ನಂತರ, ಖಾನ್ ಸಂಜೆ 4 ಗಂಟೆ ಸುಮಾರಿಗೆ ಆಸ್ಟ್ರೇಲಿಯಾದ ಸೆಂಟ್ರಲ್ ಡೇಲೈಟ್ ಸಮಯ (ACDT) ಕುಸಿದು ಬಿದ್ದಿದ್ದಾರೆ. ದಕ್ಷಿಣ ಆಸ್ಟ್ರೇಲಿಯಾದಲ್ಲಿ ಬಿಸಿಲು ತೀವ್ರವಾಗಿದೆ. ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಆ ದಿನ ಇಲ್ಲಿನ ತಾಪಮಾನ 40 ಡಿಗ್ರಿ ಸೆಲ್ಷಿಯಸ್‌ಗಿಂದ ಹೆಚ್ಚಾಗಿತ್ತು.
ಅಡಿಲೇಡ್ ಟರ್ಫ್ ಕ್ರಿಕೆಟ್ ಅಸೋಸಿಯೇಷನ್ ನಿಯಮದ ಪ್ರಕಾರ ತಾಪಮಾನ 42 ° C ಗಿಂತ ಹೆಚ್ಚಾದರೆ ಪಂದ್ಯಗಳನ್ನು ರದ್ದುಗೊಳಿಸಲಾಗುತ್ತದೆ. ಘಟನೆ ಬಗ್ಗೆ ಖಾನ್ ಪ್ರತಿನಿಧಿಸುತ್ತಿದ್ದ ಕ್ಲಬ್ ಪ್ರತಿಕ್ರಿಯೆ ನೀಡಿದ್ದು, "ಓಲ್ಡ್ ಕಾನ್ಕಾರ್ಡಿಯನ್ಸ್ ಕ್ರಿಕೆಟ್ ಕ್ಲಬ್‌ನ ಅಮೂಲ್ಯ ಸದಸ್ಯರ ನಿಧನದಿಂದ ತೀವ್ರ ದುಃಖವಾಗಿದೆ. ಜುನೈಲ್ ಖಾನ್ ಕಾನ್ಕಾರ್ಡಿಯಾ ಕಾಲೇಜು ಓವಲ್‌ನಲ್ಲಿ ಆಡುವಾಗ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ" ಎಂದು ಹೇಳಿಕೆಯಲ್ಲಿ ತಿಳಿಸಿದೆ.
ಸ್ಥಳದಲ್ಲಿದ್ದ ಅರೆವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದರೂ ಖಾನ್‌ರನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇಂತಹ ಕಷ್ಟದ ಸಮಯದಲ್ಲಿ ನಮ್ಮ ಆಲೋಚನೆಗಳು ಕುಟುಂಬದ ಜೊತೆಗಿದ್ದು, ಘಟನೆಗೆ ವಿಷಾದ ವ್ಯಕ್ತಪಡಿಸುತ್ತೇವೆ ಎಂದು ಕ್ಲಬ್ ಹೇಳಿದೆ.
ಜುನೈಲ್ ಖಾನ್ 2013ರಲ್ಲಿ ಪಾಕಿಸ್ತಾನದಿಂದ ಅಡಿಲೇಡ್‌ಗೆ ಐಟಿ ವಲಯದಲ್ಲಿ ಕೆಲಸ ಮಾಡಲು ತೆರಳಿದ್ದು, ಅಂದಿನಿಂದ ಆಸ್ಟ್ರೇಲಿಯಾದಲ್ಲೇ ವಾಸಿಸುತ್ತಿದ್ದರು ಎಂದು ವರದಿಯಾಗಿದೆ.












Click it and Unblock the Notifications