RCB: ಮತ್ತೆ ಆರ್‌ಸಿಬಿಗೆ ಬಂದ ಆಸ್ಟ್ರೇಲಿಯಾದ ಮಾರಕ ವೇಗಿ
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿನಲ್ಲಿ ಆಸ್ಟ್ರೇಲಿಯಾದ ವೇಗದ ಬೌಲರ್ ಜೋಶ್ ಹೇಜಲ್‌ವುಡ್ ಆರ್‌ಸಿಬಿ ಪಾಲಾಗಿದ್ದಾರೆ. 2024ರ ಹರಾಜಿನಲ್ಲಿ ಜೋಶ್ ಹೇಜಲ್‌ವುಡ್‌ರನ್ನು ಯಾವ ತಂಡವೂ ಖರೀದಿ ಮಾಡಿರಲಿಲ್ಲ. ಗಾಯದ ಕಾರಣದಿಂದ ಆರ್ ಸಿಬಿ ಕೂಡ ಮಾಜಿ ಆಟಗಾರನನ್ನು ರಿಟೈನ್ ಮಾಡಿಕೊಂಡಿರಲಿಲ್ಲ, ಈ ಬಾರಿ ಮೆಗಾ ಹರಾಜಿನಲ್ಲಿ ಮತ್ತೆ ಮಾಜಿ ಆಟಗಾರನಿಗೆ ಮಣೆ ಹಾಕಿದ್ದು ಬರೋಬ್ಬರಿ 12.50 ಕೋಟಿ ರೂಪಾಯಿಗೆ ಖರೀದಿ ಮಾಡಿದೆ.
2020 ಮತ್ತು 2021ರ ಐಪಿಎಲ್ ಆವೃತ್ತಿಯಲ್ಲಿ 2 ಕೋಟಿ ರೂಪಾಯಿಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪಾಲಾಗಿದ್ದ ಜೋಶ್ ಹೇಜಲ್‌ವುಡ್, 2022 ಮತ್ತು 2023 ರಲ್ಲಿ 7.75 ಕೋಟಿ ರೂಪಾಯಿಗೆ ಆರ್ ಸಿಬಿ ತಂಡಕ್ಕೆ ಹರಾಜಾಗಿದ್ದಾರೆ. ಈಗ ಮತ್ತೆ ತಮ್ಮ ಮಾಜಿ ತಂಡಕ್ಕೆ ವಾಪಸಾಗಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಮಾದರಿಯಲ್ಲಿ ನಂಬರ್ 2 ಬೌಲರ್ ಆಗಿರುವ ಜೋಶ್ ಹೇಜಲ್‌ವುಡ್ ಆರ್ ಸಿಬಿ ತಂಡಕ್ಕೆ ಉತ್ತಮ ಆಯ್ಕೆ ಎನ್ನಬಹುದು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬೌಲಿಂಗ್ ಮಾಡುವುದು ಯಾವಾಗಲೂ ಸವಾಲಾಗಿದ್ದು, ಹೇಜಲ್‌ವುಡ್ ಅನುಭವಿ ಬೌಲರ್ ಆಗಿದ್ದು, ತಂಡದ ಬೌಲಿಂಗ್‌ಗೆ ಬಲ ತಂದುಕೊಡುತ್ತಾರೆ ಎಂದು ನಂಬಲಾಗಿದೆ.

ಸದ್ಯ ನಡೆಯುತ್ತಿರುವ ಭಾರತದ ವಿರುದ್ಧ ಟೆಸ್ಟ್ ಸರಣಿಯಲ್ಲಿ ಆಡುತ್ತಿರುವ ಜೋಶ್ ಹೇಜಲ್‌ವುಡ್ ಮೊದಲ ಇನ್ನಿಂಗ್ಸ್‌ನಲ್ಲಿ 4 ವಿಕೆಟ್ ಪಡೆಯುವ ಮೂಲಕ ಗಮನ ಸೆಳೆದಿದ್ದರು. ಸದ್ಯ ಉತ್ತಮ ಲಯದಲ್ಲಿರುವ ಹೇಜಲ್‌ವುಡ್ ಗಾಯದ ಸಮಸ್ಯೆಗೆ ಗುರಿಯಾಗದೇ ಇದ್ದರೆ ಸಾಕು ಎಂದು ಅಭಿಮಾನಿಗಳು ಹಾರೈಸಿದ್ದಾರೆ.
ಜಿತೇಶ್ ಶರ್ಮಾ ಆರ್ ಸಿಬಿಗೆ
ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾರನ್ನು ಆರ್ ಸಿಬಿ 11 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಭಾರತೀಯ ಬ್ಯಾಟರ್ ಆಗಿರುವ ಜಿತೇಶ್ ಶರ್ಮಾ ಫಿನಿಶರ್ ಆಗಿ ಸ್ಫೋಟಕ ಇನ್ನಿಂಗ್ಸ್ ಆಡುವ ಸಾಮರ್ಥ್ಯ ಹೊಂದಿದ್ದು ತಂಡಕ್ಕೆ ಉತ್ತಮ ಆಯ್ಕೆ ಎನ್ನಬಹುದು. ಇದಕ್ಕೂ ಮುನ್ನ ಇಂಗ್ಲೆಂಡ್ ತಂಡದ ಸ್ಫೋಟಕ ಬ್ಯಾಟರ್ ಫಿಲ್ ಸಾಲ್ಟ್‌ರನ್ನು 11.50 ಕೋಟಿ ರೂಪಾಯಿಗೆ ಖರೀದಿ ಮಾಡಿದ್ದು, ಆರಂಭಿಕ ಆಟಗಾರ ಸ್ಥಾನಕ್ಕೆ ಸೂಕ್ತ ಆಯ್ಕೆ ಮಾಡಿದೆ.
ಇಂಗ್ಲೆಂಡ್ ತಂಡದ ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಕೂಡ 8.75 ಕೋಟಿ ರೂಪಾಯಿಗೆ ಆರ್ ಸಿಬಿ ಸೇರಿದ್ದಾರೆ. ಕೆಎಲ್ ರಾಹುಲ್‌ರನ್ನು ಖರೀದಿ ಮಾಡದೇ ಇರುವುದಕ್ಕೆ ಅಭಿಮಾನಿಗಳು ಸಿಟ್ಟಾಗಿದ್ದು ಭಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.












Click it and Unblock the Notifications