RCB: ಆರ್‌ಸಿಬಿ ಸೇರಿದ ಜಿತೇಶ್ ಶರ್ಮಾ ಹೇಳಿದ್ದೇನು?
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಹರಾಜಿನಲ್ಲಿ ಆರ್‌ಸಿಬಿ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾರನ್ನು ಬರೋಬ್ಬರಿ 11 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿದೆ. ದಿನೇಶ್ ಕಾರ್ತಿಕ್ ನಿವೃತ್ತಿ ಘೋಷಣೆ ಮಾಡಿದ ಬಳಿಕ ಆರ್ ಸಿಬಿ ತಂಡದ ಫಿನಿಷರ್ ಸ್ಥಾನವನ್ನು ಜಿತೇಶ್ ಶರ್ಮಾ ನಿಭಾಯಿಸಲಿದ್ದಾರೆ ಎಂದು ನಂಬಲಾಗಿದೆ. ಆರ್ ಸಿಬಿ ಸೇರಿದ ಬಗ್ಗೆ ಜಿತೇಶ್ ಶರ್ಮಾ ಪ್ರತಿಕ್ರಿಯೆ ನೀಡಿದ್ದು ಇದು ದೇವರ ಆಶೀರ್ವಾದ ಎಂದಿದ್ದಾರೆ.
ಆರ್‌ಸಿಬಿ ಅಭಿಮಾನಿಗಳನ್ನು ಹಾಡಿ ಹೊಗಳಿರುವ ಜಿತೇಶ್ ಶರ್ಮಾ, ಆರ್‌ಸಿಬಿಯಲ್ಲಿ ವಿರಾಟ್ ಕೊಹ್ಲಿ ಜೊತೆಗೆ ಆಡಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಟೈಮ್ಸ್ ಆಫ್ ಇಂಡಿಯಾಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಮಾತನಾಡಿರುವ ಅವರು, ಆರ್ ಸಿಬಿ ನನ್ನನ್ನು ಖರೀದಿ ಮಾಡಿದಕ್ಕೆ ದೇವರಿಗೆ ಧನ್ಯವಾದ ತಿಳಿಸಿದರು. ಹರಾಜಿನ ಬಗ್ಗೆ ನನಗೆ ಯಾವುದೇ ನಿರೀಕ್ಷೆಗಳು ಇರಲಿಲ್ಲ, ಉತ್ತಮ ತಂಡ ಖರೀದಿಸುತ್ತದೆ ಎನ್ನುವ ವಿಶ್ವಾಸವಿತ್ತು, ಆರ್‌ಸಿಬಿ ನನ್ನನ್ನು ಖರೀದಿ ಮಾಡಿದ್ದು ಖುಷಿ ಹೆಚ್ಚಿಸಿದೆ ಎಂದು ಹೇಳಿದ್ದಾರೆ.

"ಹರಾಜಿನಿಂದ ಯಾವುದೇ ನಿರೀಕ್ಷೆಗಳನ್ನು ಇಟ್ಟುಕೊಂಡಿರಲಿಲ್ಲ, ಮುಕ್ತವಾಗಿ ಆಡುವ ಮತ್ತು ತಮ್ಮ ಸಾಮರ್ಥ್ಯವನ್ನು ವ್ಯಕ್ತಪಡಿಸಲು ಅವಕಾಶ ನೀಡುವ ತಂಡಕ್ಕಾಗಿ ಆಡಬೇಕು ಎನ್ನುವ ಆಸೆ ಇತ್ತು, ಆರ್‌ಸಿಬಿ ನನ್ನನ್ನು ಖರೀದಿ ಮಾಡಿದ್ದಕ್ಕೆ ನಾನು ಕೃತಜ್ಞನಾಗಿದ್ದೇನೆ. ದೇವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು, ಆರ್ ಸಿಬಿ ನನಗೆ ಪರಿಪೂರ್ಣ ತಂಡವಾಗುತ್ತದೆ ಎನ್ನುವ ವಿಶ್ವಾಸವಿದೆ" ಎಂದರು.
ವಿರಾಟ್ ಕೊಹ್ಲಿ ಜೊತೆ ಆಡಲು ನಾನು ಕಾಯುತ್ತಿದ್ದೇನೆ. ಅವರಿಂದ ಕಲಿಯುವುದು ಬಹಳಷ್ಟಿದೆ. ಅವರ ಫಿಟ್‌ನೆಸ್ ನನಗೆ ಯಾವಾಗಲೂ ಸ್ಪೂರ್ತಿಯಾಗಿದೆ. ಅವರ ಜೊತೆ ಆಡಲು ನನಗೆ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದ ಎಂದು ಹೇಳಿದ್ದಾರೆ.
ಆರ್‌ಸಿಬಿ ತಂಡದ ಫಿನಿಶರ್
ಜಿತೇಶ್ ಶರ್ಮಾ ಆರ್ ಸಿಬಿ ತಂಡದ ಹೊಸ ಫಿನಿಶರ್ ಆಗುವ ಅವಕಾಶವಿದೆ. ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ ನಿವೃತ್ತಿಯಾದ ಬಳಿಕ ಜಿತೇಶ್ ಶರ್ಮಾ ಅವರ ಸ್ಥಾನವನ್ನು ನಿಭಾಯಿಸುವ ಜವಾಬ್ದಾರಿ ಹೊಂದಿದ್ದಾರೆ. ಜಿತೇಶ್ ಶರ್ಮಾ ಪಂಜಾಬ್ ಕಿಂಗ್ಸ್ ತಂಡದ ಉಪನಾಯಕನಾಗಿ ಜವಾಬ್ದಾರಿ ನಿಭಾಯಿಸಿದ್ದಾರೆ.
ಜಿತೇಶ್ ಶರ್ಮಾರನ್ನು ವಾಪಸ್ ತಂಡಕ್ಕೆ ಪಡೆಯಲು ರೈಟ್ ಟು ಮ್ಯಾಚ್ ಕಾರ್ಡ್ ಅನ್ನು ಪಂಜಾಬ್ ಬಳಸಿದರೂ ಆರ್ ಸಿಬಿ ಅವರ ಬೆಲೆಯನ್ನು ಬರೋಬ್ಬರಿ 11 ಕೋಟಿ ರೂಪಾಯಿಗೆ ಹೆಚ್ಚಿಸಿದ್ದರಿಂದ ಅವರನ್ನು ಕೈಬಿಡಬೇಕಾಯಿತು. ಸದ್ಯ ನಡೆಯುತ್ತಿರುವ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಜಿತೇಶ್ ಶರ್ಮಾ ಉತ್ತಮ ಫಾರ್ಮ್‌ನಲ್ಲಿದ್ದು ಆರ್ ಸಿಬಿ ಅಭಿಮಾನಿಗಳ ಸಂತಸ ಹೆಚ್ಚಾಗಿದೆ. ಐಪಿಎಲ್‌ನಲ್ಲಿ ಕೂಡ ಜಿತೇಶ್ ಶರ್ಮಾ ಇದೇ ರೀತಿ ಬ್ಯಾಟಿಂಗ್ ಮಾಡಿದರೆ ಸಾಕು ಎಂದು ಅಭಿಮಾನಿಗಳು ಹಾರೈಸಿದ್ದಾರೆ.












Click it and Unblock the Notifications