Ind vs Eng: ಬುಮ್ರಾ ಅನುಪಸ್ಥಿತಿ ನಡುವೆ ತಂಡಕ್ಕೆ ವಾಪಸಲಾಗಲು ಸಜ್ಜಾದ ಸ್ಟಾರ್ ವೇಗಿ
ಬಾರ್ಡರ್ ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಸೋತು ಹತಾಶೆಗೊಂಡಿರುವ ಟೀಂ ಇಂಡಿಯಾ, ಇದೀಗ ಇಂಗ್ಲೆಂಡ್ ವಿರುದ್ದ ಟಿ20, ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಗೆ ಸಜ್ಜಾಗಲಿದೆ. ಸಿಡ್ನಿ ಟೆಸ್ಟ್ ವೇಳೆ ಬೆನ್ನು ನೋವಿನಿಂದ ಮೈದಾನದಿಂದ ಹೊರ ನಡೆದಿದ್ದ ಜಸ್ಪ್ರೀತ್ ಬುಮ್ರಾಗೆ ಸುದೀರ್ಘ ವಿಶ್ರಾಂತಿಯ ಅಗತ್ಯವಿದೆ ಎಂದು ಹೇಳಲಾಗಿದ್ದು, ಅವರು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿ ಮತ್ತು ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವುದು ಅನುಮಾನ ಎನ್ನಲಾಗಿದೆ.
ಭಾರತ ತಂಡದ ಪ್ರಮುಖ ಬೌಲರ್ ಬುಮ್ರಾ, ಅವರಿಲ್ಲದೆ ತಂಡದ ಬೌಲಿಂಗ್ ಪರಿಣಾಮಕಾರಿಯಾಗಿರುವುದು ಕಷ್ಟ. ಬುಮ್ರಾ ಅನುಪಸ್ಥಿತಿಯ ಭಯ ಕಾಡುತ್ತಿರುವಾಗಲೇ ಭಾರತ ತಂಡಕ್ಕೆ ಶುಭ ಸುದ್ದಿ ಸಿಕ್ಕಿದೆ. ಹಿರಿಯ ವೇಗಿ ಮೊಹಮ್ಮದ್ ಶಮಿ ಭಾರತ ತಂಡಕ್ಕೆ ವಾಪಸಲಾಗಲು ಸಜ್ಜಾಗಿದ್ದಾರೆ.

ಮೊಹಮ್ಮದ್ ಶಮಿ ಫಿಟ್ನೆಸ್
ಮೊಹಮ್ಮದ್ ಶಮಿ ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿಯಲ್ಲಿ ಆಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿತ್ತು, ಆದರೆ ಶಮಿ ಫಿಟ್ನೆಸ್ ಕಾರಣದಿಂದ ಬಿಸಿಸಿಐ ಅವರನ್ನು ಬಿಜಿಟಿ ಸರಣಿಯಲ್ಲಿ ಆಡಿಸಲಿಲ್ಲ. ಶಮಿ ದೇಶೀಯ ಕ್ರಿಕೆಟ್‌ನಲ್ಲಿ ಆಡುತ್ತಿದ್ದು ತಮ್ಮ ಫಿಟ್‌ನೆಸ್ ಸಾಬೀತು ಪಡಿಸಿದ್ದಾರೆ.
2023ರ ಏಕದಿನ ವಿಶ್ವಕಪ್ ಬಳಿಕ ಮೊಹಮ್ಮದ್ ಶಮಿ ಮೈದಾನದಿಂದ ದೂರ ಉಳಿದಿದ್ದರು. ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಬಳಿಕ ಫಿಟ್‌ನೆಸ್ ಕಡೆ ಗಮನ ಹರಿಸಿದ್ದ ಶಮಿ ಅಭ್ಯಾಸ ಆರಂಭಿಸಿದ್ದರು. ಶಮಿ ಗಾಯದ ವಿಚಾರದಲ್ಲಿ ಬಿಸಿಸಿಐ ಹೆಚ್ಚಿನ ಕಾಳಜಿ ವಹಿಸಿತ್ತು, ಸಂಪೂರ್ಣ ಫಿಟ್ ಆದ ಬಳಿಕವೇ ತಂಡದಲ್ಲಿ ಅವಕಾಶ ಕೊಡಲು ನಿರ್ಧರಿಸಿತ್ತು.
ಈಗ ನಡೆಯುತ್ತಿರುವ ವಿಜಯ್ ಹಜಾರೆ ಟ್ರೋಫಿ ಪಂದ್ಯಾವಳಿಲ್ಲಿ ಬೆಂಗಾಲ್ ತಂಡಕ್ಕೆ ಆಡುತ್ತಿರುವ ಮೊಹಮ್ಮದ್ ಶಮಿ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬಿಸಿಸಿಐ ಆಯ್ಕೆದಾರರು ಶಮಿಯನ್ನು ಗಮನಿಸುತ್ತಿದ್ದು ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ಅವಕಾಸ ನೀಡುವ ಸಾಧ್ಯತೆ ಇದೆ.
ಕ್ರಿಕ್‌ಬಜ್ ವರದಿ ಮಾಡಿರುವ ಪ್ರಕಾರ, ಫೆಬ್ರವರಿ 19ರಿಂದ ಆರಂಭವಾಗಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಶಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ದುಬೈನಲ್ಲಿ ಭಾರತದ ಪಂದ್ಯಗಳು ನಡೆಯಲಿದ್ದು, ಬುಮ್ರಾ ಆಡುವುದು ಅನಿಶ್ಚಿತವಾಗಿರುವ ಕಾರಣ ಮೊಹಮ್ಮದ್ ಶಮಿ ತಂಡಕ್ಕೆ ಅತ್ಯಗತ್ಯವಾಗಿದ್ದಾರೆ.
ಇತ್ತೀಚೆಗೆ ಮುಕ್ತಾಯವಾದ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಪಂದ್ಯಾವಳಿಯಲ್ಲಿ ಶಮಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಒಂಭತ್ತು ಇನ್ನಿಂಗ್ಸ್‌ಗಳಲ್ಲಿ 7.86 ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದ ಅವರು 11 ವಿಕೆಟ್ ಪಡೆದಿದ್ದರು. ಇದಕ್ಕೂ ಮುನ್ನ ನಡೆದ ರಣಜಿ ಟ್ರೋಫಿಯಲ್ಲಿ ಕೂಡ ಒಂದು ಪಂದ್ಯವನ್ನು ಆಡಿದ್ದರು.
ಜನವರಿ 22ರಿಂದ ಇಂಗ್ಲೆಂಡ್ ವಿರುದ್ಧ ಟಿ20 ಸರಣಿ ಆರಂಭವಾಗಲಿದೆ. ಫೆಬ್ರವರಿ 6ರಿಂದ ಮೂರು ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದೆ. ಏಕದಿನ ಸರಣಿಯಲ್ಲಿ ಮೊಹಮ್ಮದ್ ಶಮಿ ಆಡುವುದು ಖಚಿತವಾಗಲಿದೆ.












Click it and Unblock the Notifications