Jasprit Bumrah: ಮುಂಬೈ ಇಂಡಿಯನ್ಸ್‌ಗೆ ದೊಡ್ಡ ಆಘಾತ ನೀಡಿದ ಬುಮ್ರಾ!
ಐಪಿಎಲ್ 2024ರ ಆವೃತ್ತಿಯಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಮುಂಬೈ ಇಂಡಿಯನ್ಸ್ 2025ರ ಆವೃತ್ತಿಯಲ್ಲಿ ಕೂಡ ಕಳಪೆ ಪ್ರದರ್ಶನವನ್ನು ಮುಂದುವರೆಸಿದೆ. ಆಡಿರುವ ಮೊದಲ ಎರಡು ಪಂದ್ಯಗಳನ್ನು ಸೋತಿದ್ದು ಮೂರನೇ ಪಂದ್ಯದಲ್ಲಿ ಸೋಮವಾರ ಕೆಕೆಆರ್ ತಂಡವನ್ನು ಎದುರಿಸಲಿದೆ.
ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಇಲ್ಲದೇ ಇರುವುದು ಈಗಾಗಲೇ ಪ್ರದರ್ಶನದ ಮೇಲೆ ಪರಿಣಾಮ ಬೀರಿದೆ. ತಂಡದ ಬೌಲಿಂಗ್ ಬ್ಯಾಟಿಂಗ್ ವಿಭಾಗ ನಿರೀಕ್ಷಿತ ಪ್ರದರ್ಶನ ನೀಡದೇ ಇರುವುದು ತಂಡದ ಚಿಂತೆಯನ್ನು ಹೆಚ್ಚಿಸಿದೆ. ಇದೀಗ ಜಸ್ಪ್ರೀತ್ ಬುಮ್ರಾ ಫಿಟ್‌ನೆಸ್ ವಿಚಾರ ತಂಡದ ಚಿಂತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಬಾರ್ಡರ್ ಗವಾಸ್ಕರ್ ಟ್ರೋಫಿ ಸರಣಿ ವೇಳೆ ಗಾಯಗೊಂಡಿದ್ದ ಬುಮ್ರಾ, ಇನ್ನೂ ಚೇತರಿಸಿಕೊಂಡಿಲ್ಲ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ, ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಆಡಿರಲಿಲ್ಲ. ಸದ್ಯ ಬೆಂಗಳೂರಿನಲ್ಲಿರುವ ಬಿಸಿಸಿಐನ ಸೆಂಟರ್ ಆಫ್ ಎಕ್ಸಲೆನ್ಸ್‌ನಲ್ಲಿ ಬೌಲಿಂಗ್ ಮಾಡುತ್ತಿರುವ ವಿಡಿಯೋ ತುಣುಕು ವೈರಲ್ ಆಗಿದೆ.
ಇನ್ನೂ ಎರಡು ವಾರ ಆಡೋದು ಅನುಮಾನ?
ಜಸ್ಪ್ರೀತ್ ಬುಮ್ರಾರನ್ನು ತೀವ್ರ ಎಚ್ಚರಿಕೆಯಿಂದ ಗಮನಿಸುತ್ತಿರುವ ಬಿಸಿಸಿಐ ಅವರ ಚೇತರಿಕೆ ಬಗ್ಗೆ ಗಮನ ಹರಿಸಿದೆ. ಬಿಸಿಸಿಐ ವೈದ್ಯಕೀಯ ತಂಡ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಕ್ರೀಡಾ ವಿಜ್ಞಾನ ವಿಭಾಗ ಮೇಲ್ವಿಚಾರಣೆ ಮಾಡುತ್ತಿದೆ.
ಇನ್‌ಸೈಡ್ ಸ್ಪೋರ್ಟ್ಸ್ ವರದಿ ಮಾಡಿರುವ ಪ್ರಕಾರ "ಬುಮ್ರಾ ಉತ್ತಮವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರು ಯಾವಾಗ ಮೈದಾನಕ್ಕೆ ಮರಳುತ್ತಾರೆ ಎನ್ನುವುದಕ್ಕೆ ಸಮಯ ನಿಗದಿ ಮಾಡಲು ಸಾಧ್ಯವಿಲ್ಲ. ನಿಧಾನವಾಗಿ ಅಭ್ಯಾಸದ ಅವಧಿಯನ್ನು ಹೆಚ್ಚಿಸುತ್ತಿದ್ದಾರೆ. ಫಿಟ್‌ನೆಸ್ ಸರ್ಟಿಫಿಕೇಟ್ ಸಿಕ್ಕ ಬಳಿಕವಷ್ಟೇ ಅವರು ವಾಪಸಾತಿ ಮಾಡಲು ಅವಕಾಶವಿದ್ದು ಇನ್ನೂ ಎರಡು ವಾರ ಬೇಕಾಗಬಹುದು" ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದರು.
ಜೂನ್‌ನಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬುಮ್ರಾ ಆಡುವ ಬಗ್ಗೆ ಬಿಸಿಸಿಐ ಆಗಲಿ ಎನ್‌ಸಿಎ ನಲ್ಲಿರುವವರಾಗಲಿ ಯಾರಿಗೂ ವಿಶ್ವಾಸ ಹೊಂದಿಲ್ಲ. ಅವರ ವಾಪಸಾತಿ ಬಗ್ಗೆ ಬಿಸಿಸಿಐ ಆತುರ ಮಾಡುತ್ತಿಲ್ಲ. ವೈದ್ಯರು 100% ಫಿಟ್ ಆಗಿದ್ದಾರೆ ಎಂದು ಹೇಳಿದಾಗ ಮಾತ್ರ ಅವರಿಗೆ ಆಡಲು ಅವಕಾಶ ನೀಡುತ್ತದೆ. ಐಪಿಎಲ್ 2025 ರ ದ್ವಿತೀಯಾರ್ಧದಲ್ಲಿ ಮರಳುವ ಸಾಧ್ಯತೆ ಇದೆ. ಅಂದರೆ ಇನ್ನೂ ಎರಡು ವಾರ ಬೇಕಾಗಬಹುದು ಎನ್ನಲಾಗಿದೆ.
ನ್ಯೂಜಿಲೆಂಡ್‌ನ ಮಾಜಿ ವೇಗದ ಬೌಲರ್ ಶೇನ್ ಬಾಂಡ್ ಕೂಡ ತಮ್ಮ ವೃತ್ತಿಜೀವನದಲ್ಲಿ ಇದೇ ರೀತಿಯ ಸಮಸ್ಯೆಗಳನ್ನು ಎದುರಿಸಿದ್ದಾರೆ. ಇಂಗ್ಲೆಂಡ್‌ನಲ್ಲಿ ವೇಗಿಗಳನ್ನು ಅತಿಯಾಗಿ ಬಳಸಬೇಡಿ ಎಂದು ಬಿಸಿಸಿಐಗೆ ಎಚ್ಚರಿಕೆ ನೀಡಿದ್ದಾರೆ. ಭಾರತ ಇಂಗ್ಲೆಂಡ್‌ನಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯನ್ನು ಆಡಲಿದೆ.












Click it and Unblock the Notifications