ಸ್ಮೃತಿ, ಜಸ್ಪ್ರಿತ್ ಬುಮ್ರಾಗೆ ಐಸಿಸಿ ಗರಿ
ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಸುದ್ದಿ ಮತ್ತೊಂದು ಬಂದಿದೆ. ಈಗಾಗಲೇ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಪಟ್ಟ ಅಲಂಕರಿಸಿ, ಫ್ಯಾನ್ಸ್‌ಗೆ ದೊಡ್ಡ ಗಿಫ್ಟ್ ನೀಡಿದೆ. ಈ ಬೆನ್ನಲ್ಲೆ ಟೀಮ್ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರಿತ್ ಬುಮ್ರಾ ಹಾಗೂ ಲೇಡಿ ಗಂಗೂಲಿ ಖ್ಯಾತಿಯ ಸ್ಮೃತಿ ಮಂಧನಾ ಅವರಿಗೆ ಐಸಿಸಿಯ ತಿಂಗಳ ಆಟಗಾರರ ಪ್ರಶಸ್ತಿಯನ್ನು ಪಡೆದಿದ್ದಾರೆ.
ಭಾರತ ಪುರುಷರ ತಂಡದ ಆಧಾರ ಸ್ಥಂಭ ಜಸ್ಪ್ರಿತ್ ಹಾಗೂ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ ಸ್ಮೃತಿ ಮಂಧನಾ ಕಳೆದ ತಿಂಗಳಿನಲ್ಲಿ ಅಮೋಘ ಪ್ರದರ್ಶನ ನೀಡಿದ್ದರು. ಇಬ್ಬರೂ ತಮ್ಮ ಭರ್ಜರಿ ಆಟದ ಮೂಲಕ ತಂಡಕ್ಕೆ ನೆರವಾಗಿದ್ದರು. ಇವರ ಆಟವನ್ನು ಗುರುತಿಸಿದ ಐಸಿಸಿ ಪ್ರಶಸ್ತಿ ನೀಡಿ ಗೌರವಿಸಿದೆ.

ವಿಶ್ವಕಪ್‌ನಲ್ಲಿ ಬುಮ್ರಾ ಕಮಾಲ್
ಐಸಿಸಿ ಜಸ್ಪ್ರೀತ್ ಬುಮ್ರಾ ಅವರನ್ನು ಜೂನ್ ತಿಂಗಳ ಆಟಗಾರನಾಗಿ ಆಯ್ಕೆ ಮಾಡಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮತ್ತು ಅಫ್ಘಾನಿಸ್ತಾನದ ಆರಂಭಿಕ ಬ್ಯಾಟ್ಸ್‌ಮನ್ ರಹಮಾನುಲ್ಲಾ ಗುರ್ಬಾಜ್ ಅವರು ಸಹ ಈ ರೇಸ್‌ನಲ್ಲಿದ್ದರು. ಜಸ್ಪ್ರೀತ್ ಬುಮ್ರಾ ಜೊತೆಗೆ ರೋಹಿತ್ ಶರ್ಮಾ ಮತ್ತು ರಹಮಾನುಲ್ಲಾ ಗುರ್ಬಾಜ್ ಈ ಪ್ರಶಸ್ತಿಗೆ ನಾಮನಿರ್ದೇಶನಗೊಂಡರು ಆದರೆ ಜಸ್ಪ್ರೀತ್ ಬುಮ್ರಾ ಗರಿಷ್ಠ ಮತಗಳನ್ನು ಪಡೆಯುವ ಮೂಲಕ ಈ ಪ್ರಶಸ್ತಿಯನ್ನು ಗೆದ್ದರು.
ಭಾರತವು 2024 ರ ಟಿ 20 ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಾಗ, ತಂಡದ ಪ್ರಮುಖ ಬೌಲರ್ ಜಸ್ಪ್ರೀತ್ ಬುಮ್ರಾ ಅದರಲ್ಲಿ ದೊಡ್ಡ ಪಾತ್ರವನ್ನು ವಹಿಸಿದ್ದಾರೆ. ಇವರು ಟೂರ್ನಿಯಲ್ಲಿ ಅಧಿಕ ವಿಕೆಟ್ ಪಡೆಯದೇ ಇದ್ದರೂ, ರನ್ ನೀಡುವ ವಿಚಾರದಲ್ಲಿ ಎಲ್ಲರಿಗಿಂತಲೂ ಮುಂದೆ ಕಾಣಿಸಿಕೊಂಡಿದ್ದಾರೆ.

ಗ್ರೂಪ್ ಹಂತದಲ್ಲಿ ಪಾಕಿಸ್ತಾನ ಹಾಗೂ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಸೋಲಿನ ಭಯ ಕಂಡಿದ್ದ ತಂಡಕ್ಕೆ ಬುಮ್ರಾ ಆಧಾರವಾದರು. ಜಸ್ಪ್ರೀತ್ ಬುಮ್ರಾ ಅವರು ಇಡೀ ಪಂದ್ಯಾವಳಿಯಲ್ಲಿ ಒಟ್ಟು 8 ಪಂದ್ಯಗಳನ್ನು ಆಡಿ, 4.17 ರ ಎಕನಾಮಿಯೊಂದಿಗೆ 15 ವಿಕೆಟ್‌ಗಳನ್ನು ಪಡೆದರು. ಈ ಪ್ರದರ್ಶನದಿಂದಾಗಿ ಜಸ್ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಆಟಗಾರ ಪ್ರಶಸ್ತಿಯನ್ನು ಪಡೆದರು.
ತವರಿನಲ್ಲಿ ಸ್ಮೃತಿ ಅಬ್ಬರ ಜೋರು!
ಭಾರತದ ಸ್ಟಾರ್ ಆರಂಭಿಕ ಆಟಗಾರ್ತಿ ಸ್ಮೃತಿ ಮಂಧನಾ ಸಹ ಐಸಿಸಿ ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ. ಇವರು ಪ್ರಶಸ್ತಿ ರೇಸ್‌ನಲ್ಲಿದ್ದ ಇಂಗ್ಲೆಂಡ್‌ನ ಮಾಯಾ ಬೌಶಿಯರ್ ಮತ್ತು ಶ್ರೀಲಂಕಾದ ವಿಶಾಮಿ ಗುಣರತ್ನೆ ಅವರನ್ನು ಹಿಂದಿಕ್ಕಿ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದು ಕೊಂಡಿದ್ದಾರೆ.

ಸ್ಮೃತಿ ಮಂಧಾನ ವಿಶ್ವದ ಅತ್ಯುತ್ತಮ ಅಗ್ರ ಶ್ರೇಯಾಂಕದ ಆಟಗಾರ್ತಿ ಎಂದು ಪರಿಗಣಿಸಲಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮೃತಿ ಶೆಫಾಲಿ ಶರ್ಮಾ ಅವರೊಂದಿಗೆ ಮೊದಲ ವಿಕೆಟ್‌ಗೆ 292 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದ್ದರು. ಅಲ್ಲದೆ ಈ ಪಂದ್ಯದಲ್ಲಿ ಸ್ಮೃತಿ 149 ರನ್ ಗಳಿಸಿದ್ದರು
ಜೂನ್‌ನಲ್ಲಿ ಭಾರತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಸ್ಮೃತಿ ಮಂಧಾನ ಅಮೊಘ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸರಣಿಯ ಮೊದಲ ಪಂದ್ಯದಲ್ಲಿ 117, ಎರಡನೇ ಪಂದ್ಯದಲ್ಲಿ 136, ಮೂರನೇ ಪಂದ್ಯದಲ್ಲಿ 90 ರನ್ ಬಾರಿಸಿದ್ದರು.












Click it and Unblock the Notifications