IPL 2027: ಆರ್‌ಸಿಬಿಯಿಂದ ಈ ಮೂವರು ಆಟಗಾರರು ಔಟ್..
RCB IPL 2027: ಐಪಿಎಲ್ 2027 ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪ್ರಮುಖ ಮೂವರು ಆಟಗಾರರನ್ನು ಕೈಬಿಡುವ ಸಾಧ್ಯತೆಯಿದೆ. ಹಾಗಾದ್ರೆ ಅವರು ಯಾರು ಹಾಗೂ ಕಾರಣ ಏನು ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ತಿಳಿಯಿರಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 2025 ಮತ್ತು 2026ರ ಆವೃತ್ತಿಗಳಲ್ಲಿ ಸತತ ಎರಡು ಬಾರಿ ಐಪಿಎಲ್ ಟ್ರೋಫಿ ಗೆದ್ದು ಬೀಗಿದ್ದು, ಇದೀಗ 2027ರ ಮಿನಿ ಹರಾಜಿಗೆ ಭಾರಿ ಸಿದ್ಧತೆ ನಡೆಸುತ್ತಿದೆ. ಎಲ್ಲಾ ಫ್ರಾಂಚೈಸಿಗಳು ತಾವು ಉಳಿಸಿಕೊಳ್ಳುವ ಮತ್ತು ಬಿಡುಗಡೆ ಮಾಡುವ ಆಟಗಾರರ ಅಂತಿಮ ಪಟ್ಟಿಯನ್ನು ಬಿಸಿಸಿಐಗೆ ಸಲ್ಲಿಸಲು ನವೆಂಬರ್ 15, 2026 ಕೊನೆಯ ದಿನವಾಗಿದೆ.

ಆರ್‌ಸಿಬಿಯಿಂದ ಹೊರಬೀಳಬಹುದಾದ ಸಂಭಾವ್ಯ ಆಟಗಾರರು
ಆದರೆ ಸತತ ಚಾಂಪಿಯನ್ ಪಟ್ಟ ಅಲಂಕರಿಸಿದ್ದರೂ, ತಂಡದ ಬೌಲಿಂಗ್ ವಿಭಾಗದಲ್ಲಿರುವ ಹೆಚ್ಚುವರಿ ಆಯ್ಕೆಗಳು ಹಾಗೂ ಸಮತೋಲನದ ದೃಷ್ಟಿಯಿಂದ ಆರ್‌ಸಿಬಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ.
ಈ ಹಿನ್ನೆಲೆಯಲ್ಲಿ ಹರಾಜಿಗೂ ಮುನ್ನ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದಿಂದ ಕೈಬಿಡಬಹುದಾದ ಮೂವರು ಸಂಭಾವ್ಯ ಆಟಗಾರರ ಪಟ್ಟಿ ಇಲ್ಲಿದೆ ನೋಡಿ.
ಈ ಮೂವರು ಆರ್‌ಸಿಬಿಯಿಂದ ಔಟ್.?
* ರಿಚರ್ಡ್ ಗ್ಲೀಸನ್ (Richard Gleeson):ಇಂಗ್ಲೆಂಡ್ ಮೂಲದ ಅನುಭವಿ ವೇಗದ ಬೌಲರ್ ರಿಚರ್ಡ್ ಗ್ಲೀಸನ್ ಅವರನ್ನು ಐಪಿಎಲ್ 2026ರ ಆವೃತ್ತಿಯಲ್ಲಿ ಶ್ರೀಲಂಕಾದ ವೇಗಿ ನುವಾನ್ ತುಷಾರ ಬದಲಿಗೆ ಬದಲಿ ಆಟಗಾರನಾಗಿ ಆರ್‌ಸಿಬಿಗೆ ಸೇರಿಸಿಕೊಳ್ಳಲಾಗಿತ್ತು. ಆದರೆ ತಂಡದಲ್ಲಿ ಈಗಾಗಲೇ ಜೋಶ್ ಹೇಜಲ್‌ವುಡ್, ಜೇಕಬ್ ಡಫಿ ಸೇರಿದಂತೆ ಪ್ರಮುಖ ವಿದೇಶಿ ವೇಗಿಗಳ ದಂಡೇ ಇರುವುದರಿಂದ ಗ್ಲೀಸನ್ ಅವರಿಗೆ ಆಡುವ ಬಳಗದಲ್ಲಿ ಹೆಚ್ಚಿನ ಅವಕಾಶಗಳು ಸಿಗುವುದು ಕಷ್ಟಕರವಾಗಿದೆ.
ವಿದೇಶಿ ಆಟಗಾರರ ಸ್ಲಾಟ್ ಖಾಲಿ ಮಾಡಿಕೊಳ್ಳುವ ಉದ್ದೇಶದಿಂದ ಹಾಗೂ ಹರಾಜಿನಲ್ಲಿ ಹೊಸ ಮತ್ತು ಯುವ ವಿದೇಶಿ ವೇಗಿಯನ್ನು ಖರೀದಿಸಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಗ್ಲೀಸನ್ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಹೆಚ್ಚಿದೆ ಅಂತಲೇ ಹೇಬಹುದು.
* ಅಭಿನಂದನ್ ಸಿಂಗ್ (Abhinandan Singh): ಬಲಗೈ ಮಧ್ಯಮ ವೇಗದ ಬೌಲರ್ ಅಭಿನಂದನ್ ಸಿಂಗ್ 2026ರ ಐಪಿಎಲ್ ಆವೃತ್ತಿಯಲ್ಲಿ 30 ಲಕ್ಷ ರೂಪಾಯಿ ಮೂಲಬೆಲೆಗೆ ಆರ್‌ಸಿಬಿ ತಂಡ ಸೇರಿಕೊಂಡಿದ್ದರು. ಆದರೆ ಸಿಕ್ಕ ಅವಕಾಶಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಅವರು ವಿಫಲರಾದರು. ಆಡಿದ ಮೂರು ಪಂದ್ಯಗಳಲ್ಲಿ ಕೇವಲ 3 ವಿಕೆಟ್ ಪಡೆದಿದ್ದ ಅವರು, 40.67ರ ಸರಾಸರಿ ಮತ್ತು 12.62ರ ದುಬಾರಿ ಎಕಾನಮಿ ದರದಲ್ಲಿ ರನ್ ಬಿಟ್ಟುಕೊಟ್ಟಿದ್ದರು.
ಈ ಕಳಪೆ ಪ್ರದರ್ಶನದಿಂದಾಗಿ ಆಡುವ 11ರ ಬಳಗದಲ್ಲಿ ಸ್ಥಾನ ಭದ್ರಪಡಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದ್ದರಿಂದ ಅಭಿನಂದನ್ ಸಿಂಗ್ ಅವರನ್ನು ಕೈಬಿಟ್ಟು, ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮಿಂಚುತ್ತಿರುವ ಹೊಸ ದೇಶೀಯ ವೇಗದ ಬೌಲರ್‌ಗಳಿಗೆ ಮಣೆ ಹಾಕಲು ಆರ್‌ಸಿಬಿ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ.
* ಸ್ವಪ್ನಿಲ್ ಸಿಂಗ್ (Swapnil Singh): 2024ರಿಂದ ಆರ್‌ಸಿಬಿ ತಂಡದ ಭಾಗವಾಗಿರುವ ಉತ್ತರ ಪ್ರದೇಶ ಮೂಲದ 35 ವರ್ಷದ ಎಡಗೈ ಸ್ಪಿನ್ನರ್ ಸ್ವಪ್ನಿಲ್ ಸಿಂಗ್ ಅವರ ಸ್ಥಾನಕ್ಕೂ ಕುತ್ತು ಎದುರಾಗಿದೆ. ಐಪಿಎಲ್ 2025ರ ಹರಾಜಿನಲ್ಲಿ ಆರ್‌ಟಿಎಂ ಕಾರ್ಡ್ ಬಳಸಿ 50 ಲಕ್ಷ ರೂಪಾಯಿಗೆ ಇವರನ್ನು ಉಳಿಸಿಕೊಳ್ಳಲಾಗಿತ್ತು ಮತ್ತು 2026ರಲ್ಲೂ ತಂಡದಲ್ಲಿದ್ದರು.
ಆದರೆ, ಸದ್ಯ ಆರ್‌ಸಿಬಿ ಸ್ಪಿನ್ ವಿಭಾಗ ಅತ್ಯಂತ ಬಲಿಷ್ಠವಾಗಿದೆ. ಅನುಭವಿ ಕೃನಾಲ್ ಪಾಂಡ್ಯ ಸ್ಪಿನ್ ವಿಭಾಗವನ್ನು ಮುನ್ನಡೆಸುತ್ತಿದ್ದರೆ, ಸುಯಶ್ ಶರ್ಮಾ, ವಿಕ್ಕಿ ಓಸ್ತ್ವಾಲ್, ಕನಿಷ್ಕ್ ಚೌಹಾಣ್ ಹಾಗೂ ಸಾತ್ವಿಕ್ ದೇಸ್ವಾಲ್ ಅವರಂತಹ ಯುವ ಸ್ಪಿನ್ನರ್‌ಗಳು ತಂಡದಲ್ಲಿದ್ದಾರೆ. ಇಷ್ಟೊಂದು ಆಯ್ಕೆಗಳಿರುವುದರಿಂದ, ಬ್ಯಾಕಪ್ ಸ್ಪಿನ್ನರ್ ಆಗಿರುವ ಸ್ವಪ್ನಿಲ್ ಸಿಂಗ್ ಅವರನ್ನು ಬಿಡುಗಡೆ ಮಾಡಿ ಆ ಹಣವನ್ನು ಬೇರೆ ವಿಭಾಗಕ್ಕೆ ಬಳಸಿಕೊಳ್ಳಲು ಫ್ರಾಂಚೈಸಿ ಮುಂದಾಗಬಹುದು.
ನವೆಂಬರ್ 15ರಂದು ಸ್ಪಷ್ಟ ಚಿತ್ರಣ ಲಭ್ಯ
ಸತತ ಎರಡು ಬಾರಿ ಚಾಂಪಿಯನ್ ಆಗಿರುವ ಆರ್‌ಸಿಬಿ ತಂಡ ಈಗಾಗಲೇ ಅತ್ಯಂತ ಸಮತೋಲಿತವಾಗಿದೆ. ಆದ್ದರಿಂದ ತಂಡದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗುವ ನಿರೀಕ್ಷೆಯಿಲ್ಲ. ಆದರೆ ಮಿನಿ ಹರಾಜಿನಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲು ಮತ್ತು ತಂಡದ ಬೆಂಚ್ ಸ್ಟ್ರೆಂತ್ ಮತ್ತಷ್ಟು ಬಲಪಡಿಸಲು ಈ ಮೂವರು ಆಟಗಾರರಿಗೆ ಕೊಕ್ ನೀಡುವ ಸಾಧ್ಯತೆಯಿದೆ. ನವೆಂಬರ್ 15ರಂದು ಆರ್‌ಸಿಬಿ ಪ್ರಕಟಿಸಲಿರುವ ಅಧಿಕೃತ ಪಟ್ಟಿಯಲ್ಲಿ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ. ಒಟ್ಟಿನಲ್ಲಿ ಇದೀಗ ಬಹುತೇಕ ಫ್ರಾಂಚೈಸಿಗಳ ಕಣ್ಣು ಕೂಡ ಆರ್‌ಸಿಬಿ ಮೇಲಿರುವುದಂತೂ ನಿಜ.


Click it and Unblock the Notifications
