ಐಪಿಎಲ್ 2025 ಟೂರ್ನಿ ಅರ್ಧಕ್ಕೆ ಸ್ಥಗಿತ
IPL 2025: ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ಬಿಸಿಸಿಐ ಇಡೀ ಐಪಿಎಲ್ 2025 ಟೂರ್ನಿಯನ್ನು ರದ್ದುಗೊಳಿಸಿದೆ. ಆಟಗಾರರು, ಪ್ರಾಂಚೈಸಿ, ಅಭಿಮಾನಿಗಳ ಸುರಕ್ಷತೆ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಇಂದು (ಮೇ 9) ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿದುಬಂದಿದೆ.
ಭಾರತ-ಪಾಕಿಸ್ತಾನ ನಡುವೆ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವ ಹಿನ್ನೆಲೆ ಭಾರತಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಈ ವರ್ಷದ ಐಪಿಎಲ್‌ನಲ್ಲಿ 16 ಪಂದ್ಯಗಳು ಬಾಕಿ ಇರುವಾಗಲೇ ಇಡೀ ಟೂರ್ನಿಯನ್ನು ರದ್ದುಪಡಿಸಿದೆ. ಪಾಕಿಸ್ತಾನ ವಿರುದ್ಧ ಯುದ್ದದ ಭೀತಿ ಹೆಚ್ಚಾಗುತ್ತಲಿದೆ. ಈ ಹಿನ್ನೆಲೆ ಸರ್ಕಾರವನ್ನು ಸಂಪರ್ಕಿಸಿದ ಬಳಿಕ ಬಿಸಿಸಿಐ ಈ ನಿರ್ಧಾರ ತೆಗೆದುಕೊಂಡಿದೆ.

ಗೃಹ ಇಲಾಖೆಯ ಸೂಚನೆ ಮೇರೆಗೆ ಶುಕ್ರವಾರ ನಡೆದ ಸಭೆಯಲ್ಲಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಭಾರತ-ಪಾಕಿಸ್ತಾನ ನಡುವಿನ ಉದ್ವಿಗ್ನತೆ ಹೆಚ್ಚಾಗಿರುವ ಸಮಯದಲ್ಲಿ ಐಪಿಎಲ್ ಕ್ರಿಕೆಟ್ ಅಥವಾ ಯಾವುದೇ ಟೂರ್ನಿ ನಡೆಸುವುದು ಸೂಕ್ತವಲ್ಲ. ಆಟಗಾರರು, ಅಭಿಮಾನಿಗಳು, ಪ್ರಾಂಚೈಸಿಗಳ ಹಿತದೃಷ್ಟಿಯಿಂದ ಈ ಕ್ರಮ ಕೊಳ್ಳಲಾಗಿದೆ ಎಂದು ಬಿಸಿಸಿಐ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದ್ದಾರೆ.
ಮೇ 8ರಂದು ಪಾಕಿಸ್ತಾನ ಡ್ರೋನ್‌ಗಳನ್ನು ಬಳಸಿ ಭಾರತದ ಹಲವು ನಗರಗಳ ಮೇಲೆ ದಾಳಿ ಮಾಡಲು ಉತ್ನಿಸಿದ್ದು, ಇದನ್ನು ತಡೆಯುವಲ್ಲಿ ಭಾರತೀಯ ಸೇವೆ ಯಶಸ್ವಿಯಾಗಿತ್ತು. ಇನ್ನು ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ಪ್ರಾಂಚೈಸಿಗಳ ಮನವಿ ಮೇರೆಗೆ ಬಿಸಿಸಿಐ ಐಪಿಎಲ್ 2025 ಟೂರ್ನಿಯನ್ನು ಅರ್ಧಕ್ಕೆ ರದ್ದುಪಡಿಸಿದೆ.
ಗುರುವಾರ ತುರ್ತು ಸಭೆ ಕರೆದಿದ್ದ ಬಿಸಿಸಿಐ, ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಾವಳಿಯನ್ನು ರದ್ದುಗೊಳಿಸಿತ್ತು. ಇದೀಗ ಇಡೀ ಟೂರ್ನಿಯನ್ನೇ ರದ್ದುಪಡಿಸಿದ್ದು, ಇಂತಹ ಪರಿಸ್ಥಿತಿಯಲ್ಲಿ ಆಟಗಾರರ ಸಂಬಳಕ್ಕೆ ಕತ್ತರೆ ಬೀಳುತ್ತಾ ಎಂಬ ಪ್ರಶ್ನೆಗಳು ಕೇಳಿಬಂದಿದ್ದು, ಇದಕ್ಕೆ ಉತ್ತರ ಇಲ್ಲಿದೆ ಗಮನಿಸಿ.
2025ರ ಐಪಿಎಲ್ ಆವೃತ್ತಿಲ್ಲಿ ಒಟ್ಟು 74 ಪಂದ್ಯಗಳು ನಡೆಯಬೇಕಿತ್ತು. ಅದರಲ್ಲಿ 57 ಪಂದ್ಯಗಳು ಪೂರ್ಣಗೊಂಡಿವೆ. ಈ ಮಧ್ಯೆಯೇ 58ನೇ ಪಂದ್ಯವನ್ನು ಸಹ ಅರ್ಧಕ್ಕೆ ನಿಲ್ಲಿಸಲಾಗಿದೆ. ಈಗ ಪ್ಲೇಆಫ್ ಮತ್ತು ಫೈನಲ್ ಸೇರಿದಂತೆ ಒಟ್ಟು 16 ಪಂದ್ಯಗಳು ಬಾಕಿಯಿವೆ. ಆದರೆ, ಪಂದ್ಯಾವಳಿಯನ್ನು ಸ್ಥಗಿತಗೊಳಿಸಲಾಗಿರುವ ಹಿನ್ನೆಲೆ ಈ ಪಂದ್ಯಗಳನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ.
ಐಪಿಎಲ್ ಅರ್ಧಕ್ಕೆ ನಿಂತರೂ ಆಟಗಾರರ ವೇತನದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಆಟಗಾರರಿಗೆ ಸಿಗಬೇಕಿದ್ದ ಪೂರ್ಣ ವೇತನ ಸಿಗಲಿದೆ. ಐಪಿಎಲ್ ನಿಯಮಗಳ ಪ್ರಕಾರ, ಒಬ್ಬ ಆಟಗಾರನು ಇಡೀ ಸೀಸನ್ಗೆ ಲಭ್ಯ ಇದ್ದರೆ, ಅಂತಹವರ ವೇತನವನ್ನು ಕಡ್ಡಾಯವಾಗಿ ಪಾವತಿ ಮಾಡಲಾಗುತ್ತದೆ.
ಗಾಯದಿಂದಾಗಿ ಪಂದ್ಯಾವಳಿಯ ಮೊದಲು ಅಥವಾ ಸಮಯದಲ್ಲಿ ಟೂರ್ನಿಯಿಂದ ಹಿಂದೆ ಸರಿದ ಆಟಗಾರರ ವೇತನವನ್ನು ಮಾತ್ರ ಕಡಿತ ಮಾಡಲಾಗುತ್ತದೆ.
ಐಪಿಎಲ್ 2025ರ ಆರಂಭಕ್ಕೂ ಮೊದಲು ಇದೇ ಮೊದಲ ಬಾರಿಗೆ ಬಿಸಿಸಿಐ, ವೇತನದ ಜೊತೆಗೆ ಆಟಗಾರರಿಗೆ ಪಂದ್ಯ ಶುಲ್ಕವನ್ನು ನೀಡುವುದಾಗಿ ಘೋಷಣೆ ಮಾಡಿತ್ತು. ಅದರಂತೆಯೇ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದ ಮತ್ತು ಇಂಪ್ಯಾಕ್ಟ್ ಆಟಗಾರರಿಗೆ 7.5 ಲಕ್ಷ ರೂಪಾಯಿಗಳ ಪಂದ್ಯ ಶುಲ್ಕವನ್ನು ನೀಡಲಾಗುತ್ತಿತ್ತು.
ಈ ಹಣವನ್ನು ಆಟಗಾರರ ಸಂಬಳದ ಜೊತೆಗೆ ನೀಡಬೇಕಾಗಿತ್ತು. ಆದರೆ, ಇದೀಗ ಲೀಗ್ ಅನ್ನು ಮಧ್ಯದಲ್ಲಿ ರದ್ದುಪಡಿಸಿದ ಕಾರಣ ಪಂದ್ಯ ಶುಲ್ಕ ನಷ್ಟವಾಗಬಹುದು. ಇಲ್ಲಿಯವರೆಗೆ ಪಂದ್ಯಗಳಲ್ಲಿ ಆಡಿದ ಆಟಗಾರರಿಗೆ ಶುಲ್ಕವನ್ನು ನೀಡಲಾಗುತ್ತದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈ ಬಾರಿ ಮೇ 25ಕ್ಕೆ ಫೈನಲ್ ಪಂದ್ಯ ಇತ್ತು. ಆಟಗಾರರ ಭದ್ರತೆ ದೃಷ್ಟಿಯಿಂದ ಟೂರ್ನಿಯನ್ನೇ ರದ್ದುಪಡಿಸಲಾಗಿದೆ.












Click it and Unblock the Notifications