Vaibhav Suryavanshi: ಐಪಿಎಲ್‌ನಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಮೊದಲ ಅರ್ಧ ಶತಕ ತಡೆದ ರಿಷಭ್ ಪಂತ್; ಮುಂದೇನಾಯ್ತು?
Vaibhav Suryavanshi: ಐಪಿಎಲ್ 2025ರ 36ನೇ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ ಆರ್‌ಆರ್ ಸೋಲನುಭವಿಸಿದೆ. ಆದರೂ, ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕರಾಗಿ ಎಂಟ್ರ ಕೊಟ್ಟ 14 ವರ್ಷದ ವೈಭವ್ ಸೂರ್ಯವಂಶಿ ಅದ್ಭುತ ಬ್ಯಾಟಿಂಗ್ ಮೂಲಕ ಹಿರಿಯ ಆಟಗಾರರ ಮನ ಗೆದ್ದುಬಿಟ್ಟರು. ಇನ್ನು ಸ್ಟಂಪ್ ಅಲ್ಲಿ ಔಟಾದ ಬಳಿಕ ಇವರ ರಿಯಾಕ್ಷನ್ ಹೇಗಿತ್ತು ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.
ಸಾಮಾನ್ಯವಾಗಿ ಐಪಿಎಲ್‌ನಲ್ಲಿ ಅನುಭವಿ ಹಿರಿಯ ಆಟಗಾರರು ವಿಕೆಟ್ ಕಾಪಾಡಿಕೊಂಡು ಜವಾಬ್ದಾರಿಯುತ ಆಟ ಆಡಬೇಕಾಗುತ್ತದೆ. ಈ ಸಮಾಧಾನಕರ ಆಟ ತಂಡದ ಸಂಕಷ್ಟ ಸಮಯದಲ್ಲಿ ಅಗತ್ಯವಾಗಿರುತ್ತದೆ. ಆದ್ದರಿಂದ ಅವರು ನಿಧಾನಗತಿಯಲ್ಲಿ ಆಟ ಆಡುತ್ತಾರೆ. ಕೆಲವೊಮ್ಮೆ ಬೀಸಬೇಕಾದ ಸಮಯದಲ್ಲಿ ರನ್‌ಗಳ ಸುರಿಮಳೆಯನ್ನೇ ಸುರಿಸಿಬಿಡುತ್ತಾರೆ. ಒಂದು ವೇಳೆ ಇವರು ಕೈಕೊಟ್ಟಂತಹ ಸಂದರ್ಭಗಳಲ್ಲಿ ವೈಭವ್ ಸೂರ್ಯವಂಶಿ ಅಂತಹ ಕಿರಿಯ ಆಟಗಾರರು ತಂಡಕ್ಕೆ ಅಗತ್ಯವಾಗಿ ಬೇಕಾಗುತ್ತದೆ.

ಕಿರಿಯ ಆಟಗಾರರು ಜೋರಾಗಿ ಬ್ಯಾಟ್ ಬೀಸುಬ ಮೂಲಕ ಹೆಚ್ಚು ರನ್ ಕಲೆಹಾಕುವುದನ್ನು ಕಾಣುತ್ತಿದ್ದೇವೆ. ಯಾಕೆಂದ್ರೆ ತನ್ನನ್ನು ತಾನು ಗುರುತಿಸಿಕೊಳ್ಳಲು ಇದೇ ಸರಿಯಾದ ಸಮಯ ಎಂದುಕೊಂಡು ಜೋಶ್‌ನಲ್ಲಿ ಬ್ಯಾಟ್ ಬೀಸಿ ಉತ್ತಮ ರನ್‌ಗಳನ್ನು ಕಲೆಹಾಕುವ ಮೂಲಕ ಯಶಸ್ವಿಯಾಗಿರುವ ಅದೆಷ್ಟೋ ಉದಾಹರಣೆಗಳಿವೆ. ಹಾಗೆಯೇ ಪದಾರ್ಪಣೆ ಪಂದ್ಯದಲ್ಲೇ ಆರ್‌ಆರ್ ಪರ ಕಿರಿಯ ಆಟಗಾರ ವೈಭವ್ ಅಬ್ಬರದ ಬ್ಯಾಟಿಂಗ್ ಕಂಡು ಹಿರಿಯ ಆಟಗಾರರೇ ದಂಗಾಗಿಬಿಟ್ಟಿದ್ದಾರೆ. ಅಲ್ಲದೆ, ಗೂಗಲ್ ಸಿಇಓ ಸುಂದರ್ ಪಿಚೈ ಕೂಡ ಭೇಷ್ ಅಂದಿದ್ದಾರೆ.
ಜೈಪುರದ ಸವಾಯ್ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಖನೌ ತಂಡ ನಿಗದಿತ 20 ಓವರ್‌ಗಳಲ್ಲಿ 180 ರನ್ ಕಲೆಹಾಕಿ, 181 ರನ್‌ಗಳ ಗುರಿ ನೀಡಿತು. ಈ ಗುತ್ತಿ ಬೆನ್ನತ್ತಿದ ಆರ್‌ಆರ್ ತಂಡವು ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 178 ರನ್ ಕಲೆಹಾಕುವ ಮೂಲಕ ಸೊಲನುಭವಿಸಿತು.
ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ 14 ವರ್ಷದ ವೈಭವ್ ಸೂರ್ಯವಂಶಿ ಕಣಕ್ಕೆ ಇಳಿದು ಮಿಂಚಿದರು. ಈ ಮೂಲಕ ಅವರು ಐಪಿಎಲ್‌ಗೆ ಪದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲಕ್ನೋ ಸೂಪರ್ ಜೈಂಟ್ಸ್ ತಂಡದ ವಿರುದ್ಧ 20 ಎಸೆತಗಳಲ್ಲಿ 34 ರನ್ ಕಲೆಹಾಕುವ ಮೂಲಕ ಗಮನ ಸೆಳೆದರು. ಅರ್ಧ ಶತಕ ಬಾರಿಸುವ ಹುಮ್ಮಸ್ಸಿನಲ್ಲಿದ್ದ ವೈಭವ್ ಅವರನ್ನು ಎಲ್‌ಎಸ್‌ಜಿ ವಿಕೆಟ್ ಕೀಪರ್ ರಿಷಭ್ ಪಂತ್ ಸ್ಟಂಪ್ ಔಟ್ ಮಾಡಿದರು. ಆಗ ವೈಭವ್ ಬೇಸರದಿಂದ ಕಣ್ಣೀರು ಹಾಕುತ್ತಾ ಪೆವಿಲಿಯನ್ ಸೇರಿಕೊಂಡರು.
ಗಾಯದ ಕಾರಣದಿಂದ ತಂಡದಿಂದ ನಾಯಕ ಸಂಜು ಸ್ಯಾಮ್ಸನ್ ಲಕ್ನೋ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಹೊರಗುಳಿದಿದ್ದರು. ಇವರ ಆರಂಭಿಕ ಬ್ಯಾಟಿಂಗ್ ಸ್ಥಾನಕ್ಕೆ ಸಬ್ ಇಂಪ್ಯಾಕ್ಟ್ ಪ್ಲೇಯರ್ ಆಗಿ 14 ವರ್ಷದ ವೈಭವ್ ಸೂರ್ಯವಂಶಿ ಅವರನ್ನು ಆಡಿಸಲಾಗಿದ್ದು, ಇವರು ಅಬ್ಬರದ ಬ್ಯಾಟಿಂಗ್ ಮೂಲಕ ತಂಡಕ್ಕೆ ಉತ್ತಮ ರನ್‌ಗಳನ್ನು ತಂದುಕೊಟ್ಟರು. ಇವರ ಆಟಕ್ಕೆ ಇಡೀ ಕ್ರೀಡಾಂಗಣವೇ ಸೈ ಎಂದಿತು. 1.10 ಕೋಟಿ ರೂಪಾಯಿಗೆ ರಾಜಸ್ಥಾನ ತಂಡ ವೈಭವ್ ಸೂರ್ಯವಂಶಿ ಅವರನ್ನು ಕೊಂಡುಕೊಂಡಿತ್ತು.
ವೈಭವ್ ಸೂರ್ಯವಂಶಿ ತಾವು ಎದುರಿಸಿದ ಮೊದಲ ಎಸೆತವನ್ನು, ಶಾರ್ದೂಲ್ ಠಾಕೂರ್ ಅವರಿಗೆ ಸಿಕ್ಸರ್ ಭಾರಿಸುವ ಮೂಲಕ ಐಪಿಎಲ್ ಪ್ರಯಾಣ ಆರಂಭಿಸಿದರು. ಜೊತೆಗೆ ಐಪಿಎಲ್‌ನಲ್ಲಿ ಮೊದಲ ಎಸೆತದಲ್ಲಿ ಸಿಕ್ಸರ್ ಭಾರಿಸಿದ 10ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು.
ಪಾದರ್ಪಣೆ ಪಂದ್ಯದ ಮೊದಲ ಎಸೆತದಲ್ಲಿ ಸಿಕ್ಸರ್ ಸಿಡಿಸಿದವರು
* ರಾಬ್ ಕ್ಯೂನಿ - ರಾಜಸ್ಥಾನ
* ಕೆವೊನ್ ಕೂಪರ್ - ರಾಜಸ್ಥಾನ,
* ಅಂಡ್ರೆ ರಸೆಲ್ - ಕೆಕೆಆರ್
* ಕಾರ್ಲೋಸ್ ಬ್ರಾಥ್ವೈಟ್ - ಡೆಲ್ಲಿ
* ಅನಿಕೇತ್ ಚೌದರಿ - ಆರ್‌ಸಿಬಿ
* ಜಾವೋನ್ ಸೀರ್‌ಲೆಸ್ - ಕೆಕೆಆರ್
* ಸಿದ್ದೇಶ್ ಲಾಡ್ - ಮುಂಬೈ
* ಮತೀಶ ಪತಿರಾಣ - ಸಿಎಸ್‌ಕೆ
* ಸಮೀರ್ ರಿಜ್ವಿ - ಸಿಎಸ್‌ಕೆ
* ವೈಭವ್ ಸೂರ್ಯವಂಶಿ - ರಾಜಸ್ಥಾನ
ಗೂಗಲ್ ಸಿಇಒ ಹೇಳಿದ್ದೇನು?: 14 ವರ್ಷದ ವೈಭವ್ ಸೂರ್ಯವಂಶಿ ಅವರ ಅದ್ಭುತ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಗೂಗಲ್ ಸಿಇಒ ಸುಂದರ್ ಪಿಚೈ ಹೊಗಳಿದ್ದಾರೆ. ಅವರು ತಮ್ಮ ಟ್ವಿಟರ್ ಖಾತೆಯಲ್ಲಿ, "8ನೇ ತರಗತಿಯ ಹುಡುಗ ಐಪಿಎಲ್‌ನಲ್ಲಿ ಆಡುತ್ತಿರುವುದನ್ನು ನೋಡಿದೆ!!!! ಎಂತಹ ಅದ್ಭುತ ಆರಂಭ!" ಎಂದು ಬರೆದುಕೊಂಡಿದ್ದಾರೆ.












Click it and Unblock the Notifications