IPL Auction: ಐಪಿಎಲ್ ಹರಾಜು ಸಮಯ, ತಂಡಗಳ ಪರ್ಸ್, ನೇರಪ್ರಸಾರ ಮಾಹಿತಿ
ಇಂಡಿಯನ್ ಪ್ರೀಮಿಯರ್ ಲೀಗ್ ( ಐಪಿಎಲ್) 2025ರ ಮೆಗಾ ಹರಾಜಿಗೆ ಇನ್ನೊಂದು ದಿನ ಮಾತ್ರ ಬಾಕಿ ಇದೆ. ಈಗಾಗಲೇ ಎಲ್ಲಾ ಪ್ರಾಂಚೈಸಿಗಳು ಜೆಡ್ಡಾದಲ್ಲಿದ್ದು ಕೊನೆಯ ಹಂತದ ಲೆಕ್ಕಾಚಾರ ಮಾಡುತ್ತಿವೆ. ನವೆಂಬರ್ 24, 25ರಂದು ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಎಲ್ಲಾ ತಂಡಗಳು ಈಗಾಗಲೇ ಬೇಕಾದ ಆಟಗಾರರನ್ನು ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿದ್ದು ಬಲಿಷ್ಠ ತಂಡವನ್ನು ಕಟ್ಟಲು ಕೊನೆಯ ಕ್ಷಣದ ಕಸರತ್ತು ಮಾಡುತ್ತಿವೆ.
ಐಪಿಎಲ್ ಹರಾಜಿನಲ್ಲಿ ಭಾಗವಹಿಸಲು 1500ಕ್ಕೂ ಹೆಚ್ಚು ಆಟಗಾರರು ಅರ್ಜಿ ಹಾಕಿದ್ದರು. ಎಲ್ಲಾ ತಂಡಗಳಿಗೆ ಪಟ್ಟಿಯನ್ನು ಕಳಿಸಿದ ಬಳಿಕ ಐಪಿಎಲ್ ಆಡಳಿತ ಮಂಡಳಿ 574 ಆಟಗಾರರನ್ನು ಶಾರ್ಟ್‌ಲಿಸ್ಟ್ ಮಾಡಿದೆ. ಇದರಲ್ಲಿ 48 ಭಾರತ ತಂಡಕ್ಕಾಗಿ ಆಡಿರುವ ಆಟಗಾರರು, 318 ಅನ್‌ಕ್ಯಾಪ್ಡ್ ಆಟಗಾರರು ಇದ್ದರೆ. 193 ವಿದೇಶಿ ಆಟಗಾರರು (ರಾಷ್ಟ್ರೀಯ ತಂಡಕ್ಕಾಗಿ ಆಡಿರುವವರು) ಮತ್ತು 12 ಅನ್‌ಕ್ಯಾಪ್ಡ್ ವಿದೇಶಿ ಆಟಗಾರರು ಇದ್ದರೆ, ಅಸೋಸಿಯೇಟ್ ದೇಶಗಳ 3 ಆಟಗಾರರು ಇದ್ದಾರೆ.

ಇದರಲ್ಲಿ ಗರಿಷ್ಠ 204 ಆಟಗಾರರು ಮಾತ್ರ ವಿವಿಧ ತಂಡಗಳನ್ನು ಸೇರಲಿದ್ದಾರೆ. ಇದರಲ್ಲಿ ಗರಿಷ್ಠ 70 ವಿದೇಶಿ ಆಟಗಾರರು ಇರಬಹುದು. 81 ಆಟಗಾರರು 2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದಾರೆ. ಎಷ್ಟು ಗಂಟೆಗೆ ಮೆಗಾ ಹರಾಜು ಆರಂಭವಾಗುತ್ತದೆ, ನೇರ ಪ್ರಸಾರ ಹೇಗೆ ಎನ್ನುವ ವಿವರ ಇಲ್ಲಿದೆ.
ಎಷ್ಟು ಗಂಟೆಗೆ ಹರಾಜು ಆರಂಭ?
ಭಾರತೀಯ ಕಾಲಮಾನ ಭಾನುವಾರ (ನವೆಂಬರ್ 24) ಮಧ್ಯಾಹ್ನ 3 ಗಂಟೆಗೆ ಐಪಿಎಲ್ ಮೆಗಾ ಹರಾಜು ಪ್ರಕ್ರಿಯೆ ಆರಂಭವಾಗುತ್ತದೆ. ಭಾನುವಾರ ಮತ್ತು ಸೋಮವಾರ ಎರಡು ದಿನ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಪರ್ತ್‌ನಲ್ಲಿ ಭಾರತ ಆಸ್ಟ್ರೇಲಿಯಾ ನಡುವೆ ಟೆಸ್ಟ್ ಪಂದ್ಯ ನಡೆಯುತ್ತಿದ್ದು, ಮೂರನೇ ದಿನದಾಟ ಮುಗಿದ ಬಳಿಕ ಹರಾಜು ಆರಂಭಿಸಲಾಗುತ್ತದೆ. ಇದರಿಂದ ಭಾರತ ಕ್ರಿಕೆಟ್ ಅಭಿಮಾನಿಗಳು ಟೆಸ್ಟ್ ಮತ್ತು ಹರಾಜು ಎರಡನ್ನೂ ನೋಡಲು ಅವಕಾಶ ಸಿಗಲಿದೆ.
ಮಲ್ಲಿಕಾ ಸಾಗರ್ ಹರಾಜುಗಾರ್ತಿ
ಕಳೆದ ಬಾರಿ ಐಪಿಎಲ್‌ನಲ್ಲಿ ಹರಾಜುಗಾರ್ತಿಯಾಗಿ ಹೊಸ ಇತಿಹಾಸ ಬರೆದ ಮಲ್ಲಿಕಾ ಸಾಗರ್ ಅವರೇ ಈ ಬಾರಿ ಮೆಗಾ ಹರಾಜು ಪ್ರಕ್ರಿಯೆ ನಡೆಸಿಕೊಡಲಿದ್ದಾರೆ. ಇಷ್ಟು ವರ್ಷ ಹರಾಜು ಪ್ರಕ್ರಿಯೆ ನಡೆಸಿ ಕೊಟ್ಟಿದ್ದ ಹಗ್ ಎಡ್ಮೀಡ್ಸ್ ಅವರನ್ನು ಕಳೆದ ವರ್ಷ ಬದಲಾಯಿಸಲಾಗಿತ್ತು.
ನೇರಪ್ರಸಾರ ಎಲ್ಲಿ ನೋಡಬಹುದು?
ಜೆಡ್ಡಾದಲ್ಲಿರುವ ಅಬಾಡಿ ಅಲ್ ಜೋಹರ್ ಅರೆನಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ. ಮೆಗಾ ಹರಾಜು ಪ್ರಕ್ರಿಯೆ ಕೂಡ ನೇರ ಪ್ರಸಾರ ಮಾಡಲು ಎಲ್ಲಾ ಸಿದ್ಧತೆ ಮಾಡಿಕೊಳ್ಳಲಾಗಿದೆ. ಟಿವಿಯಲ್ಲಿ ನೋಡುವವರು ಸ್ಟಾರ್ ಸ್ಪೋರ್ಟ್ಸ್ ಚಾನೆಲ್‌ಗಳಲ್ಲಿ ನೇರಪ್ರಸಾರ ವೀಕ್ಷಿಸಬಹುದು. ಜಿಯೋ ಸಿನಿಮಾ ಅಪ್ಲಿಕೇಶನ್ ಮತ್ತು ವೆಬ್‌ಸೈಟ್‌ನಲ್ಲಿ ಕೂಡ ನೇರಪ್ರಸಾರ ವೀಕ್ಷಿಸಬಹುದಾಗಿದೆ.












Click it and Unblock the Notifications