IPL 2025: ಮಾರ್ಚ್ 22ರಿಂದ ಐಪಿಎಲ್ ಆರಂಭ! ಮೊದಲ ಪಂದ್ಯದಲ್ಲೇ ಆರ್‌ಸಿಬಿ vs ಕೆಕೆಆರ್ ಮುಖಾಮುಖಿ
ಬಹುನಿರೀಕ್ಷಿತ ಐಪಿಎಲ್ 2025ರ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿ ಕೆಲವೇ ದಿನಗಳಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಮಾರ್ಚ್ 22ರಿಂದಲೇ ಐಪಿಎಲ್ ಆರಂಭವಾಗುವುದು ಖಚಿತವಾಗಿದ್ದು, ಮೊದಲ ಪಂದ್ಯ ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆಯಲಿದೆ. ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಯನ್ನು ಎದುರಿಸಲಿದೆ.
ಸಾಮಾನ್ಯವಾಗಿ ಐಪಿಎಲ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯವು ಹಾಲಿ ಚಾಂಪಿಯನ್ ತಂಡದ ತವರಿನ ಅಂಗಳದಲ್ಲಿ ನಡೆಯುತ್ತಿದೆ. 2024ರ ಐಪಿಎಲ್‌ನಲ್ಲಿ ಚಾಂಪಿಯನ್ ಆಗಿರುವ ಕೆಕೆಆರ್ ತಂಡಕ್ಕೆ ಕೋಲ್ಕತಾದ ಈಡನ್ ಗಾರ್ಡನ್ಸ್ ತವರಿನ ಅಂಗಳವಾಗಿದ್ದು ಐತಿಹಾಸಿಕ ಕ್ರೀಡಾಂಗಣದಲ್ಲಿ ಐಪಿಎಲ್ 2025ರ ಉದ್ಘಾಟನಾ ಪಂದ್ಯ ನಡೆಯಲಿದೆ.

ಗುರುವಾರ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ನಾಯಕನ ಹೆಸರು ಘೋಷಣೆ ಮಾಡಿದೆ. ಈ ಬಾರಿ ಐಪಿಎಲ್‌ನಲ್ಲಿ ರಜತ್ ಪಟಿದಾರ್ ಆರ್ ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ. ಕಳೆದ ಬಾರಿ ಚಾಂಪಿಯನ್ ಆಗಿದ್ದರೂ ಕೆಕೆಆರ್ ಮೆಗಾ ಹರಾಜಿಗೆ ಮುನ್ನ ತಂಡದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೈಬಿಟ್ಟಿತ್ತು, ಇದೀಗ ಕೆಕೆಆರ್ ಕೂಡ ಹೊಸ ನಾಯಕನ ಹೆಸರನ್ನು ಘೋಷಣೆ ಮಾಡಬೇಕಿದೆ.
ತಂಡದಲ್ಲಿ ಭಾರಿ ಬದಲಾವಣೆ
2025ರ ಐಪಿಎಲ್‌ಗೆ ಮುನ್ನ ಮೆಗಾ ಹರಾಜು ಪ್ರಕ್ರಿಯೆ ನಡೆದಿದ್ದು ಎಲ್ಲಾ ತಂಡಗಳಲ್ಲು ಸಾಕಷ್ಟು ಬದಲಾವಣೆ ಮಾಡಲಾಗಿದೆ. ಆರ್ ಸಿಬಿ ಕೊಹ್ಲಿ, ಯಶ್ ದಯಾಳ್, ರಜತ್ ಪಟಿದಾರ್ ಅವರನ್ನು ಮಾತ್ರ ಉಳಿಸಿಕೊಂಡು ಉಳಿದ ಎಲ್ಲಾ ಆಟಗಾರರನ್ನು ಬಿಡುಗಡೆ ಮಾಡಿದ್ದು ಹೊಸ ತಂಡವನ್ನು ಕಟ್ಟಿದೆ.
ಕೆಕೆಆರ್ ಆರು ಆಟಗಾರರನ್ನು ಉಳಿಸಿಕೊಂಡು ಉಳಿದ ಆಟಗಾರರನ್ನು ಬಿಡುಗಡೆ ಮಾಡಿತ್ತು, ಬಳಿಕ ವೆಂಕಟೇಶ್ ಅಯ್ಯರ್ ಅವರನ್ನು ಬರೋಬ್ಬರಿ 23.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಎರಡೂ ತಂಡಗಳು ಇದೀಗ ಹೊಸ ವಿಶ್ವಾಸದಿಂದಲೇ ಕಣಕ್ಕಿಳಿಯಲು ಸಜ್ಜಾಗಿವೆ.
ಎರಡು ತಿಂಗಳು ಐಪಿಎಲ್ ಹಬ್ಬ ನಡೆಯಲಿದ್ದು ಒಟ್ಟು 74 ಪಂದ್ಯಗಳು ನಡೆಯಲಿದ್ದು ಹತ್ತು ತಂಡಗಳು ಪ್ರಶಸ್ತಿಗಾಗಿ ಸೆಣೆಸಲಿವೆ. ಐಪಿಎಲ್ ಫೈನಲ್ ಮೇ 25 ರಂದು ಕೋಲ್ಕತ್ತಾದಲ್ಲಿ ನಡೆಯಲಿದೆ ಎಂದು ವರದಿ ತಿಳಿಸಿದೆ. ಬಿಸಿಸಿಐ ಅಧಿಕೃತ ವೇಳಾಪಟ್ಟಿ ಪ್ರಕಟಣೆಯನ್ನು ಮುಂದಿನ ವಾರ ಬಿಡುಗಡೆ ಮಾಡಲಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ 18 ನೇ ಸೀಸನ್ ಬೆಂಗಳೂರು, ಅಹಮದಾಬಾದ್, ಮುಂಬೈ, ಚೆನ್ನೈ ಮತ್ತು ದೆಹಲಿ, ಕೋಲ್ಕತಾ ಸೇರಿದಂತೆ ಹತ್ತು ಪ್ರಮುಖ ಸ್ಥಳಗಳನ್ನು ಹೊಮದಿದ್ದು, ಈ ವರ್ಷ ಕೂಡ ಗುವಾಹಟಿ ಮತ್ತು ಧರ್ಮಶಾಲಾದಲ್ಲಿ ಪಂದ್ಯಗಳನ್ನು ನಡೆಸಲಾಗುತ್ತದೆ.












Click it and Unblock the Notifications