IPL Auction 2025: ಮೆಗಾ ಹರಾಜಿಗೆ ತೆರೆ; ಪಂತ್ ದುಬಾರಿ, ಅಚ್ಚರಿ ಮೂಡಿಸಿದ ಸೂರ್ಯವಂಶಿ
ಇಂಡಿಯನ್ ಪ್ರೀಮಿಯರ್ ಲೀಗ್ 2025ರ ಮೆಗಾ ಹರಾಜಿಗೆ ತೆರೆ ಬಿದ್ದಿದೆ. ಎರಡು ದಿನಗಳ ಕಾಲ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಮೆಗಾ ಹರಾಜು ಪ್ರಕ್ರಿಯೆ ನಡೆಯಿತು, ಎಲ್ಲಾ 10 ಫ್ರಾಂಚೈಸಿಗಳು ಪ್ರಮುಖ ಆಟಗಾರರಿಗಾಗಿ ತೀವ್ರ ಪೈಪೋಟಿ ನಡೆಸಿದವು. ಎರಡು ದಿನಗಳ ಹರಾಜಿನಲ್ಲಿ 182 ಆಟಗಾರರು ವಿವಿಧ ತಂಡಗಲ ಪಾಲಾಗಿದ್ದಾರೆ. 10 ಫ್ರಾಂಚೈಸಿಗಳು ಎರಡು ದಿನಗಳ ಹರಾಜಿನಲ್ಲಿ ಬರೋಬ್ಬರಿ 639 ಕೋಟಿ ರೂಪಾಯಿ ಖರ್ಚು ಮಾಡಿದವು.
ರಿಷಬ್ ಪಂತ್ ಮತ್ತು ಶ್ರೇಯಸ್ ಅಯ್ಯರ್ ಈ ಬಾರಿ ಮೆಗಾ ಹರಾಜಿನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ರಿಷಬ್ ಪಂತ್ 27 ಕೋಟಿ ರೂಪಾಯಿಗೆ ಲಕ್ನೋ ಸೂಪರ್ ಜೈಂಟ್ಸ್‌ಗೆ ಹರಾಜಾಗುವ ಮೂಲಕ ಐಪಿಎಲ್ ಇತಿಹಾಸದಲ್ಲೇ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಶ್ರೇಯಸ್ ಅಯ್ಯರ್ ಕೂಡ 26.75 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದು ಎರಡನೇ ದುಬಾರಿ ಆಟಗಾರ ಎನಿಸಿಕೊಂಡರು.

ಆರ್ ಸಿಬಿ ತಂಡದ ನಾಯಕ ಫಾಫ್ ಡುಪ್ಲೆಸಿಸ್ ಬರೀ 2 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ಪಾಲಾದರು. ಕನ್ನಡಿಗ ಕೆಎಲ್ ರಾಹುಲ್ 14 ಕೋಟಿ ರೂಪಾಯಿಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಹರಾಜಾದರು. 13 ವರ್ಷದ ಬಿಹಾರದ ಕ್ರಿಕೆಟಿಗ ವೈಭವ್ ಸೂರ್ಯವಂಶಿ 1.1 ಕೋಟಿ ರೂಪಾಯಿಗೆ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಹರಾಜಾಗುವ ಮೂಲಕ ಐಪಿಎಲ್‌ನಲ್ಲಿ ಹರಾಜಾದ ಅತ್ಯಂತ ಕಿರಿಯ ಆಟಗಾರ ಎನ್ನುವ ದಾಖಲೆ ಬರೆದರು.
ಅರ್ಷದೀಪ್ ಸಿಂಗ್ 18 ಕೋಟಿ ರೂಪಾಯಿಗೆ ಪಂಜಾಬ್ ಕಿಂಗ್ಸ್‌ಗೆ ಹೋಗುವ ಮೂಲಕ ಐಪಿಎಲ್ 2025ರ ಮೆಗಾ ಹರಾಜು ಆರಂಭವಾಯಿತು, ಮೋಹಿತ್ ರಾಠೀ ಕೊನೆಯಲ್ಲಿ ಆರ್ ಸಿಬಿ ತಂಡಕ್ಕೆ 30 ಲಕ್ಷ ರೂಪಾಯಿಗೆ ಹರಾಜಾಗುವ ಮೂಲಕ ಎರಡು ದಿನಗಳ ಹರಾಜು ಪ್ರಕ್ರಿಯೆಗೆ ತೆರೆ ಎಳೆಯಲಾಯಿತು.
ಭಾರತೀಯ ಆಟಗಾರರಿಗೆ ಬಂಪರ್
2024ರ ಐಪಿಎಲ್ ಹರಾಜಿನಲ್ಲಿ ವಿದೇಶಿ ಬೌಲರ್ ಗಳಿಗೆ ಭಾರಿ ಬೇಡಿಕೆ ಇದ್ದ ಕಾರಣ ಕೋಟಿ ಕೋಡಿ ಪಡೆದಿದ್ದರು. ಆದರೆ ಈ ಮೆಗಾ ಹರಾಜಿನಲ್ಲಿ ಬಹುತೇಕ ಭಾರತೀಯ ಬ್ಯಾಟರ್, ಬೌಲರ್ ಗಳಿಗಾಗಿ ಫ್ರಾಂಚೈಸಿಗಳು ಕೋಟಿ ಕೋಟಿ ಹಣ ನೀಡಿದವು. ಆಲ್‌ರೌಂಡರ್ ವೆಂಕಟೇಶ್ ಅಯ್ಯರ್ 23.75 ಕೋಟಿ ರೂಪಾಯಿಗೆ ಕೆಕೆಆರ್ ತಂಡಕ್ಕೆ ಹರಾಜಾಗುವ ಮೂಲಕ ಅಚ್ಚರಿ ಮೂಡಿಸಿದರು. ವೆಂಕಟೇಶ್ ಅಯ್ಯರ್ ಇಷ್ಟು ದೊಡ್ಡ ಮೊತ್ತಕ್ಕೆ ಹರಾಜಾಗುತ್ತಾರೆ ಎಂದು ಯಾರೂ ಕೂಡ ಊಹಿಸಿರಲಿಲ್ಲ.
ಬೌಲರ್ ಗಳಿಗೆ ಬೇಡಿಕೆ
ಯುಜ್ವೇಂದ್ರ ಚಹಾಲ್, ಜೋಫ್ರಾ ಆರ್ಚರ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಭುವನೇಶ್ವರ್ ಕುಮಾರ್, ಜೋಶ್ ಹೇಜಲ್‌ವುಡ್, ಮಿಚೆಲ್ ಸ್ಟಾರ್ಕ್, ತುಷಾರ್ ದೇಶಪಾಂಡೆ, ಪ್ರಸಿದ್ಧ್ ಕೃಷ್ಣ, ನೂರ್ ಅಹ್ಮದ್, ಆವೇಶ್ ಖಾನ್, ಮುಖೇಶ್ ಕುಮಾರ್, ರವಿಚಂದ್ರನ್ ಅಶ್ವಿನ್, ದೀಪಕ್ ಚಾಹರ್, ಆಕಾಶ್ ದೀಪ್, ಹರ್ಷಲ್ ಪಟೇಲ್, ಕಗಿಸೊ ರಬಾಡ, ಟ್ರೆಂಟ್ ಬೌಲ್ಟ್ ಈ ಬಾರಿ ಹರಾಜಿನಲ್ಲಿ ಕೋಟಿ ಕೋಟಿ ಹಣ ಪಡೆದರು. ಆಲ್‌ರೌಂಡರ್ ಗಳಿಗೂ ಕೂಡ ಭಾರಿ ಡಿಮ್ಯಾಂಡ್ ಉಂಟಾಗಿತ್ತು ಲಿಯಾಮ್ ಲಿವಿಂಗ್‌ಸ್ಟೋನ್, ಮಾರ್ಕೊ ಯಾನ್ಸನ್, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ವಿಲ್ ಜ್ಯಾಕ್ಸ್ ಕೋಟಿ ಕೋಡಿ ಪಡೆದರು.












Click it and Unblock the Notifications