IPL Auction 2024: ಐಪಿಎಲ್ ಹರಾಜಿನಲ್ಲಿ 333 ಆಟಗಾರರು: ಸಮಯ, ಪ್ರಮುಖ ಆಟಗಾರರ ವಿವರ
ಇಂಡಿಯನ್ ಪ್ರೀಮಿಯರ್ ಲೀಗ್ 2024 ರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಒಟ್ಟು 333 ಆಟಗಾರರು ಡಿಸೆಂಬರ್ 19 ರಂದು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ದುಬೈನ ಐಷಾರಾಮಿ ಹೋಟೆಲ್‌ನಲ್ಲಿ ಹರಾಜು ನಡೆಯಲಿದೆ.
30 ವಿದೇಶಿ ಆಟಗಾರರ ಸ್ಥಾನ ಖಾಲಿಯಾಗಿದ್ದು, ಒಟ್ಟು 77 ಆಟಗಾರರು ವಿವಿಧ ತಂಡಗಳನ್ನು ಸೇರಿಕೊಳ್ಳಲಿದ್ದಾರೆ. 23 ಆಟಗಾರರು ಮಾತ್ರ 2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದಾರೆ. ಐಪಿಎಲ್ 2024 ರ ಹರಾಜಿನಲ್ಲಿ ತಮ್ಮ ಹೆಸರು ನೊಂದಾಯಿಸಿಕೊಂಡಿರುವ 333 ಆಟಗಾರರ ಪೈಕಿ 214 ಭಾರತೀಯ ಕ್ರಿಕೆಟಿಗರಾಗಿದ್ದಾರೆ.

ಇಂಗ್ಲೆಂಡ್‌ನ ಹ್ಯಾರಿ ಬ್ರೂಕ್ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡದ ವಿರುದ್ಧ ಶತಕ ಬಾರಿಸಿದ ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್ ಕೂಡ 2 ಕೋಟಿ ರೂಪಾಯಿ ಮೂಲ ಬೆಲೆ ಹೊಂದಿದ್ದು, ಭಾರಿ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆ ಹೊಂದಿದ್ದಾರೆ.
ಹರಾಜಿನಲ್ಲಿರುವ ಪ್ರಮುಖ ಆಟಗಾರರು
ಸ್ಟೀವ್ ಸ್ಮಿತ್, ಮಿಚೆಲ್ ಮಾರ್ಷ್, ಪಾಟ್ ಕಮ್ಮಿನ್ಸ್, ಫಿಲಿಪ್ ಸಾಲ್ಟ್, ಗೆರಾಲ್ಡ್ ಕೊಯೆಟ್ಜೆ, ವನಿಂದು ಹಸರಂಗ, ರಚಿನ್ ರವೀಂದ್ರ, ಜೋಶ್ ಇಂಗ್ಲಿಸ್, ಫಿನ್ ಅಲೆನ್, ಮಾರ್ಕ್ ಚಾಪ್‌ಮನ್, ರೀಜಾ ಹೆಂಡ್ರಿಕ್ಸ್, ಟಿಮ್ ಸೌಥಿ, ಲ್ಯೂಕ್ ವುಡ್, ಮೈಕೆಲ್ ಬ್ರೇಸ್‌ವೆಲ್, ಡೇರಿಲ್ ಮಿಚೆಲ್, ಕರುಣ್ ನಾಯರ್, ಮನೀಶ್ ಪಾಂಡೆ, ಶಾರ್ದೂಲ್ ಠಾಕೂರ್ ಹರಾಜಿನಲ್ಲಿ ಗಮನ ಸೆಳೆಯುವ ಪ್ರಮುಖ ಆಟಗಾರರಾಗಿದ್ದಾರೆ.
ಅದರಲ್ಲೂ ಏಕದಿನ ವಿಶ್ವಕಪ್‌ನಲ್ಲಿ ಮಿಂಚಿದ ದಕ್ಷಿಣ ಆಫ್ರಿಕಾ ವೇಗಿ ಗೆರಾಲ್ಡ್ ಕೊಯೆಟ್ಜೆ, ಆಸ್ಟ್ರೇಲಿಯಾದ ಟ್ರಾವಿಸ್ ಹೆಡ್, ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ ಮತ್ತು ರಚಿನ್ ರವೀಂದ್ರ ಅವರ ಮೇಲೆ ಎಲ್ಲರ ಗಮನ ಹೆಚ್ಚಾಗಿದ್ದು, ಇವರು ಅತ್ಯಧಿಕ ಮೊತ್ತಕ್ಕೆ ಹರಾಜಾಗುವ ನಿರೀಕ್ಷೆಯಿದೆ.
ಇದರ ಜೊತೆಗೆ ಅಚ್ಚರಿ ಎನ್ನುವಂತೆ ಸ್ಥಳೀಯ ಆಟಗಾರರಿಗೆ ಕೂಡ ಅದೃಷ್ಟ ಖುಲಾಯಿಸುವ ಸಾಧ್ಯತೆ ಇದೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಮಿಂಚಿರುವ ದೇಶೀಯ ಆಟಗಾರರು ಐಪಿಎಲ್‌ನಲ್ಲಿ ಕೋಟಿ ಕೋಟಿ ಜೇಬಿಗಿಳಿಸುವ ನಿರೀಕ್ಷೆ ಹೊಂದಿದ್ದಾರೆ.
ಹರಾಜಿನಲ್ಲಿ ಇರುವ ಕರ್ನಾಟಕ ಆಟಗಾರರು
ಕರ್ನಾಟಕದ ಹಲವು ಆಟಗಾರರು ಕೂಡ ಈ ಬಾರಿ ಹರಾಜಿನಲ್ಲಿ ಹೆಸರು ನೊಂದಾಯಿಸಿದ್ದಾರೆ. ಕರುಣ್ ನಾಯರ್ ಮತ್ತು ಮನೀಶ್ ಪಾಂಡೆ ಈ ಪಟ್ಟಿಯಲ್ಲಿ ಪ್ರಮುಖರಾಗಿದ್ದಾರೆ. ಇವರನ್ನು ಹೊರತು ಪಡಿಸಿ ಶ್ರೇಯಸ್ ಗೋಪಾಲ್, ಶುಭಾಂಗ್ ಹೆಗಡೆ, ಮನ್ವಂತ್ ಕುಮಾರ್, ಎಲ್.ಆರ್. ಚೇತನ್, ಬಿ.ಆರ್. ಶರತ್, ಕೆ.ಎಲ್. ಶ್ರೀಜಿತ್, ನಿಹಾಲ್ ಉಲ್ಲಾಳ್, ಮುರುಳೀಧರ ವೆಂಕಟೇಶ್ ಹರಾಜು ಆಟಗಾರರ ಪಟ್ಟಿಯಲ್ಲಿದ್ದಾರೆ.












Click it and Unblock the Notifications