CSK vs RR: ಯಶಸ್ವಿ ಜೈಸ್ವಾಲ್ ಅಬ್ಬರ; ಸಿಎಸ್‌ಕೆಗೆ ಕಠಿಣ ಗುರಿ ನೀಡಿದ ರಾಜಸ್ಥಾನ್

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 37ನೇ ಪಂದ್ಯ ಇಂದು ( ಏಪ್ರಿಲ್ 27 ) ಜೈಪುರದ ಸಾವೈ ಮಾನ್‌ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೇಬಲ್ ಟಾಪರ್ಸ್ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡಿದ್ದು, ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಯಶಸ್ವಿ ಜೈಸ್ವಾಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ ರನ್ ಕಲೆಹಾಕಿದ್ದು, ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 203 ರನ್‌ಗಳ ಗುರಿಯನ್ನು ನೀಡಿದೆ.
ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದರು. ಜೋಸ್ ಬಟ್ಲರ್ 21 ಎಸೆತಗಳಲ್ಲಿ 27 ರನ್ ಗಳಿಸಿದರೆ, ಯಶಸ್ವಿ ಜೈಸ್ವಾಲ್ 43 ಎಸೆತಗಳಲ್ಲಿ 77 ರನ್ ಬಾರಿಸಿ ಅಬ್ಬರಿಸಿದರು. ಯಶಸ್ವಿ ಜೈಸ್ವಾಲ್ ಅವರ ಈ ಸ್ಪೋಟಕ ಆಟದಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ಸಹ ಸೇರಿದ್ದವು. ಇನ್ನುಳಿದಂತೆ ತಂಡದ ನಾಯಕ ಸಂಜು ಸ್ಯಾಮ್ಸನ್ 17 ಎಸೆತಕ್ಕೆ 17 ರನ್, ಶಿಮ್ರಾನ್ ಹೆಟ್ಮಾಯೆರ್ 10 ಎಸೆತಗಳಲ್ಲಿ 8 ರನ್ ಗಳಿಸಿ ರನ್ ವೇಗ ಕುಸಿಯುವಂತೆ ಮಾಡಿದರು.
ಅಂತಿಮ ಹಂತದಲ್ಲಿ 15 ಎಸೆತಗಳಲ್ಲಿ 34 ರನ್ ಚಚ್ಚಿದ ಧ್ರುವ್ ಜುರೆಲ್ ತಂಡ ಪೈಪೋಟಿಯುತ ಮೊತ್ತ ಕಲೆಹಾಕುವ ಹಾಗೆ ಮಾಡಿದರು. ದೇವದತ್ ಪಡಿಕ್ಕಲ್ 13 ಎಸೆತಗಳಲ್ಲಿ ಅಜೇಯ 27 ರನ್ ಹಾಗೂ ರವಿಚಂದ್ರನ್ ಅಶ್ವಿನ್ 1 ಎಸೆತದಲ್ಲಿ ಅಜೇಯ 1 ರನ್ ಗಳಿಸಿದರು.
ಚೆನ್ನೈ ಸೂಪರ್ ಕಿಂಗ್ಸ್ ಪರ ತುಷಾರ್ ದೇಶಪಾಂಡೆ ಎರಡು ವಿಕೆಟ್, ಮಹೀಶ್ ತೀಕ್ಷಣ ಹಾಗೂ ರವೀಂದ್ರ ಜಡೇಜಾ ತಲಾ ಒಂದೊಂದು ವಿಕೆಟ್ ಪಡೆದರು.
ಆಡುವ ಬಳಗಗಳು:
ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯ ರಹಾನೆ, ಮೊಯಿನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ(ನಾಯಕ ಹಾಗು ವಿಕೆಟ್ ಕೀಪರ್), ಮಥೀಶ ಪತಿರಾನ, ತುಷಾರ್ ದೇಶಪಾಂಡೆ, ಮಹೇಶ್ ತೀಕ್ಷಣ, ಆಕಾಶ್ ಸಿಂಗ್
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ದೇವದತ್ ಪಡಿಕ್ಕಲ್, ಸಂಜು ಸ್ಯಾಮ್ಸನ್ (ನಾಯಕ ಹಾಗೂ ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ಧ್ರುವ ಜುರೆಲ್, ರವಿಚಂದ್ರನ್ ಅಶ್ವಿನ್, ಜೇಸನ್ ಹೋಲ್ಡರ್, ಆಡಮ್ ಝಂಪಾ, ಸಂದೀಪ್ ಶರ್ಮಾ, ಯುಜ್ವೇಂದ್ರ ಚಾಹಲ್
ಇನ್ನು ಈ ಪಂದ್ಯ ಇತ್ತಂಡಗಳ ನಡುವೆ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆಯುತ್ತಿರುವ ಎರಡನೇ ಪಂದ್ಯವಾಗಿದ್ದು, ಮೊದಲ ಬಾರಿಯ ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಜಯ ಸಾಧಿಸಿತ್ತು.
ಹೀಗೆ ಚೆನ್ನೈನ ಎಂ ಚಿದಂಬರಂ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸೋತಿದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸೇಡು ತೀರಿಸಿಕೊಳ್ಳಲು ಇಂದಿನ ಪಂದ್ಯ ವೇದಿಕೆಯಾಗಿದೆ. ಇನ್ನು ಈ ಪಂದ್ಯದಲ್ಲಿ ಗೆಲ್ಲಲಿರುವ ತಂಡ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ತನ್ನದಾಸಿಕೊಳ್ಳಲಿದ್ದು, ಎರಡೂ ತಂಡಗಳ ನಡುವೆ ಕಠಿಣ ಪೈಪೋಟಿ ಏರ್ಪಟ್ಟಿದೆ.












Click it and Unblock the Notifications