IPL 2023: ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ ವಿರಾಟ್ ಕೊಹ್ಲಿ

ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಆರಂಭಕ್ಕೆ ಕೆಲವು ದಿನಗಳ ಮುನ್ನ ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೇರಿಕೊಂಡಿದ್ದಾರೆ. ಮಾರ್ಚ್ 25ರಂದು ಶನಿವಾರ ಅವರು ಬೆಂಗಳೂರಿಗೆ ಆಗಮಿಸಿದ್ದು, ಅಭ್ಯಾಸ ಆರಂಭಿಸಲಿದ್ದಾರೆ.
ಅಹಮದಾಬಾದ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಮತ್ತು ಅಂತಿಮ ಟೆಸ್ಟ್‌ನಲ್ಲಿ 186 ರನ್ ಗಳಿಸಿದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 1205 ದಿನಗಳ ಶತಕ ದಾಖಲಿಸಿದರು. ನಂತರ ನಡೆದ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಕೂಡ ಅರ್ಧಶತಕ ಗಳಿಸಿ ಮಿಂಚಿದ್ದಾರೆ. ಐಪಿಎಲ್ ಆರಂಭಕ್ಕೆ ಮುನ್ನ ವಿರಾಟ್ ಕೊಹ್ಲಿ ಫಾರ್ಮ್‌ನಲ್ಲಿದ್ದು, ಪಂದ್ಯಾವಳಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ವಿಶ್ವಾಸದಲ್ಲಿದ್ದಾರೆ.
ಏಷ್ಯಾಕಪ್ ಪಂದ್ಯಾವಳಿಯಲ್ಲಿ ಅಫ್ಘಾನಿಸ್ತಾನದ ವಿರುದ್ಧ ಮೊದಲ ಟಿ20 ಶತಕವನ್ನು ಗಳಿಸುವ ಮೂಲಕ ಅವರು ತಮ್ಮ ಕಳಪೆ ಫಾರ್ಮ್ ಅನ್ನು ಕೊನೆಗೊಳಿಸಿದರು. ನಂತರ ಶ್ರೀಲಂಕಾ ಮತ್ತು ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯಲ್ಲಿ ಮೂರು ಶತಕ ಗಳಿಸಿದರು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕಾಗಿ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ವಿರಾಟ್ ಕೊಹ್ಲಿ, 2023ರ ಐಪಿಎಲ್‌ನಲ್ಲಿ ಉತ್ತುಂಗವನ್ನು ತಲುಪಲು ಇನ್ನೂ ಅವಕಾಶ ಇದೆ ಎಂದು ಹೇಳಿದ್ದಾರೆ. ಈ ಮೂಲಕ ಎದುರಾಳಿಗಳಿಗೆ ಎಚ್ಚರಿಕೆಯನ್ನು ನೀಡಿದ್ದಾರೆ.

ವಿಶ್ರಾಂತಿ ಪಡೆದದ್ದು ಫಾರ್ಮ್‌ಗೆ ಮರಳಲು ಸಹಾಯ ಮಾಡಿತು
"ನಿರಂತರವಾಗಿ ಕ್ರಿಕೆಟ್ ಆಡಿದ ಬಳಿಕ ನನ್ನನ್ನು ನಾನು ಮತ್ತೆ ಕಂಡುಕೊಳ್ಳಲು ವಿಶ್ರಾಂತಿಯ ಅಗತ್ಯವಿದೆ ಎನ್ನಿಸಿತ್ತು. ಕೆಟ್ಟ ಫಾರ್ಮ್‌ನಲ್ಲಿರುವಾಗ ಹಲವು ಮಾರ್ಗಗಳನ್ನು ಹುಡುಕಲು ಪ್ರಯತ್ನಿಸುತ್ತಿದ್ದೆ. ನಾನು ಮೊದಲು ಮನುಷ್ಯನಾಗಿ ನನ್ನನ್ನು ಕಂಡುಕೊಳ್ಳಬೇಕಿತ್ತು. ಕೆಲವು ದಿನ ವಿಶ್ರಾಂತಿ ಪಡೆದದ್ದು ನನಗೆ ಸಹಾಯ ಮಾಡಿತು, ಇದು ನನ್ನ ಉತ್ಸಾಹ ಮತ್ತು ಆಟದ ಮೇಲಿನ ಪ್ರೀತಿಯನ್ನು ಮರುಶೋಧಿಸಲು ನನಗೆ ಸಹಾಯ ಮಾಡಿತು. ನಾನು ವಾಪಸಾದಾಗ ಯಾವುದೇ ಒತ್ತಡ ಇರಲಿಲ್ಲ, ಎಲ್ಲವೂ ನನಗೆ ಸಿಕ್ಕ ಅವಕಾಶವಾಗಿತ್ತು" ಎಂದು ಹೇಳಿದರು.
"ನಾನು ಟಿ20, ಏಕದಿನ ಮತ್ತು ಟೆಸ್ಟ್ ಸರಣಿಯಲ್ಲಿ ಉತ್ತಮವಾಗಿ ಆಡಲು ಸಾಧ್ಯವಾಯಿತು. ನಾನು ಉತ್ತಮ ರೀತಿಯಲ್ಲಿ ಆಡಲು ಹಿಂತಿರುಗಿದ್ದೇನೆ. ಅತ್ಯುತ್ತಮವಾದುದನ್ನು ಪಡೆಯಲು ಇನ್ನೂ ಸಾಕಷ್ಟು ಅವಕಾಶ ಇದೆ. ನಾನು ಐಪಿಎಲ್‌ನಲ್ಲಿ ಉತ್ತಮ ಪ್ರದರ್ಶನವ ನೀಡುತ್ತೇನೆ, ಇದು ತಂಡಕ್ಕೆ ನೆರವಾಗಲಿದೆ" ಎಂದು ಕೊಹ್ಲಿ ಹೇಳಿದರು.

ವಿರಾಟ್ ಕೊಹ್ಲಿ ಮೇಲಿದೆ ಅಪಾರ ನಿರೀಕ್ಷೆ
ಕಳೆದ ಆವೃತ್ತಿಯಲ್ಲಿ ವಿರಾಟ್ ಕೊಹ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದರು. ಕೊಹ್ಲಿ ಕಳಪೆ ಫಾರ್ಮ್ ನಡುವೆಯೂ ಆರ್ ಸಿಬಿ ಕಳೆದ ಬಾರಿ ಪ್ಲೇಆಫ್‌ಗೆ ತಲುಪುವಲ್ಲಿ ಯಶಸ್ವಿಯಾಗಿತ್ತು. ಈ ಬಾರಿ ಕೊಹ್ಲಿ ಫಾರ್ಮ್‌ನಲ್ಲಿರುವುದು ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ.
ವಿರಾಟ್ ಕೊಹ್ಲಿ ತಮ್ಮ ಅತ್ಯುತ್ತಮ ಆಟವನ್ನು ಆಡಿದರೆ, ಆರ್ ಸಿಬಿ ಚೊಚ್ಚಲ ಕಪ್ ಗೆಲ್ಲುವ ಅವಕಾಶ ಇರುತ್ತದೆ. ಡುಪ್ಲೆಸಿಸ್, ಕೊಹ್ಲಿ, ಮ್ಯಾಕ್ಸ್‌ವೆಲ್, ಬ್ರೇಸ್‌ವೆಲ್, ರಜತ್ ಪಟಿದಾರ್ ಇರುವುದರಿಂದ ತಂಡದ ಬ್ಯಾಟಿಂಗ್ ಬಲ ಮತ್ತಷ್ಟು ಹೆಚ್ಚಾಗಿದೆ.
ಆರ್ ಸಿಬಿ 2023ರ ಐಪಿಎಲ್‌ನ ತನ್ನ ಮೊದಲನೇ ಪಂದ್ಯವನ್ನು ಏಪ್ರಿಲ್ 2ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಇದೇ ಮೊದಲ ಬಾರಿಗೆ ಆರ್ ಸಿಬಿ ತವರಿನಲ್ಲಿ ಪಂದ್ಯನ್ನಾಡಲಿದ್ದು, ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.












Click it and Unblock the Notifications