IPL 2023: ಕ್ರಿಸ್ ಗೇಲ್ ಹಿಂದಿಕ್ಕಿ ಬೃಹತ್ ದಾಖಲೆ ಬರೆದ ಕಿಂಗ್ ಕೊಹ್ಲಿ!

ನಿನ್ನೆ ( ಮೇ 21 ) ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ಅಂತಿಮ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾಗಿದ್ದವು.
14 ಅಂಕಗಳನ್ನು ಹೊಂದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಹೆಚ್ಚಿನ ಸ್ಥಾನವನ್ನು ಪಡೆದುಕೊಂಡು ಪ್ಲೇಆಫ್ ಪ್ರವೇಶಿಸುವ ಅವಕಾಶವಿತ್ತು. ಆದರೆ ಗುಜರಾತ್ ಟೈಟನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಸೋಲಿಸುವ ಮೂಲಕ ಪ್ಲೇಆಫ್ ಕನಸನ್ನು ಛಿದ್ರಗೊಳಿಸಿತು.
ಮೊದಲು ಬ್ಯಾಟಿಂಗ್ ಮಾಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ಹಾಗೂ ಅಬ್ಬರದ ಶತಕದ ನೆರವಿನಿಂದ 20 ಓವರ್‌ಗಳಲ್ಲಿ ವಿಕೆಟ್ 5 ನಷ್ಟಕ್ಕೆ 197 ರನ್ ಕಲೆಹಾಕಿ ಎದುರಾಳಿ ಗುಜರಾತ್ ಟೈಟನ್ಸ ತಂಡಕ್ಕೆ ಗೆಲ್ಲಲು 198 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತುವಲ್ಲಿ ಯಶಸ್ವಿಯಾದ ಗುಜರಾತ್ ಟೈಟನ್ಸ್ ಶುಬ್‌ಮನ್ ಗಿಲ್ ಭರ್ಜರಿ ಶತಕದ ನೆರವಿನಿಂದ 19.1 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 198 ರನ್ ಕಲೆಹಾಕಿ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತು.
ಇನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಈ ಪಂದ್ಯದಲ್ಲಿ ಸೋತಿದ್ದು, ವಿರಾಟ್ ಕೊಹ್ಲಿ ಆಟ ಮಾತ್ರ ಎಲ್ಲರ ಮನಸ್ಸನ್ನು ಗೆದ್ದಿದೆ. ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ 61 ಎಸೆತಗಳನ್ನು ಎದುರಿಸಿದ ಕೊಹ್ಲಿ 13 ಬೌಂಡರಿ ಹಾಗೂ ಒಂದು ಸಿಕ್ಸರ್ ಸಹಿತ ಅಜೇಯ 101 ರನ್ ಕಲೆಹಾಕಿದರು.
ಈ ಮೂಲಕ ತಂಡದ ಇತರೆ ಆಟಗಾರರು ದೊಡ್ಡ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲರಾದರೂ ಸಹ ವಿರಾಟ್ ಕೊಹ್ಲಿ ಮಾತ್ರ ಆರಂಭದಿಂದ ಅಂತಿಮ ಹಂತದವರೆಗೂ ಹೋರಾಡಿ ತಂಡಕ್ಕೆ ಆಸರೆಯಾದರು. ಈ ಇನ್ನಿಂಗ್ಸ್ ಮೂಲಕ ವಿರಾಟ್ ಕೊಹ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಯಾರೂ ಮಾಡಿರದಂತಹ ದಾಖಲೆಯನ್ನು ಮಾಡಿದ್ದಾರೆ.
ಹೌದು, ಈ ಶತಕದ ಮೂಲಕ ವಿರಾಟ್ ಕೊಹ್ಲಿ ತಮ್ಮ 7ನೇ ಐಪಿಎಲ್ ಶತಕವನ್ನು ಪೂರೈಸಿದ್ದು, ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಅತಿಹೆಚ್ಚು ಶತಕ ಬಾರಿಸಿದ ಆಟಗಾರ ಎನಿಸಿಕೊಂಡಿದ್ದಾರೆ. ಕಳೆದ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸಿ 6 ಶತಕಗಳನ್ನು ಪೂರೈಸಿದ್ದ ವಿರಾಟ್ ಕೊಹ್ಲಿ ಕ್ರಿಸ್ ಗೇಲ್ ಜತೆ ಅತಿಹೆಚ್ಚು ಐಪಿಎಲ್ ಶತಕ ಬಾರಿಸಿದ ದಾಖಲೆಯನ್ನು ಹಂಚಿಕೊಂಡಿದ್ದರು.
ಆದರೆ ಈಗ ಎಂಟನೇ ಶತಕವನ್ನು ಬಾರಿಸುವ ಮೂಲಕ ಈ ಕ್ರಿಸ್ ಗೇಲ್ ಅವರನ್ನು ಹಿಂದಿಕ್ಕಿ ತಮ್ಮದೇ ನೂತನ ದಾಖಲೆಯನ್ನು ಬರೆದಿದ್ದಾರೆ. ಹಾಗಿದ್ದರೆ ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಅತಿಹೆಚ್ಚು ಶತಕ ಬಾರಿಸಿರುವ ಐವರು ಬ್ಯಾಟ್ಸ್‌ಮನ್‌ಗಳು ಯಾರು ಎಂಬ ಪಟ್ಟಿ ಈ ಕೆಳಕಂಡಂತಿದೆ..
1. 229 ಇನ್ನಿಂಗ್ಸ್ ಆಡಿರುವ ವಿರಾಟ್ ಕೊಹ್ಲಿ 7 ಶತಕಗಳನ್ನು ಬಾರಿಸಿ ಅಗ್ರಸ್ಥಾನದಲ್ಲಿದ್ದಾರೆ.
2. 141 ಇನ್ನಿಂಗ್ಸ್ ಆಡಿರುವ ಕ್ರಿಸ್ ಗೇಲ್ 6 ಶತಕಗಳನ್ನು ಬಾರಿಸಿ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.
3. 95 ಇನ್ನಿಂಗ್ಸ್ ಆಡಿರುವ ಜೋಸ್ ಬಟ್ಲರ್ 5 ಶತಕಗಳನ್ನು ಬಾರಿಸಿ ಮೂರನೇ ಸ್ಥಾನದಲ್ಲಿದ್ದಾರೆ.
4. 109 ಇನ್ನಿಂಗ್ಸ್ ಆಡಿರುವ ಕೆಎಲ್ ರಾಹುಲ್ 4 ಶತಕಗಳನ್ನು ಬಾರಿಸಿ ನಾಲ್ಕನೆ ಸ್ಥಾನದಲ್ಲಿದ್ದಾರೆ.
5. 176 ಇನ್ನಿಂಗ್ಸ್ ಆಡಿರುವ ಡೇವಿಡ್ ವಾರ್ನರ್ 4 ಶತಕಗಳನ್ನು ಬಾರಿಸಿ ಐದನೇ ಸ್ಥಾನದಲ್ಲಿದ್ದಾರೆ.












Click it and Unblock the Notifications