MS Dhoni ಜೊತೆಗೆ ಸಿಎಸ್‌ಕೆ ತಂಡದಲ್ಲಿ ಆಡುವ ಬಯಕೆ ವ್ಯಕ್ತಪಡಿಸಿದ ಭಾರತೀಯ ಕ್ರಿಕೆಟ್‌ನ ದಿಗ್ಗಜ
ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ಕ್ರಿಕೆಟ್ ಮೈದಾನದಲ್ಲಿ ಮೂಡಿಸಿರುವ ಛಾಪು ಎಂಥಾದ್ದೂ ಅನ್ನೋದು ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಗೂ ಅರಿವಿದೆ. ಭಾರತದ ಯಾವುದೇ ಭಾಗದಲ್ಲಿಯೂ ಧೋನಿಗೆ ಇರುವಷ್ಟು ಅಭಿಮಾನಿ ಬಳಗ ಉಳಿದ ಯಾವ ಕ್ರಿಕೆಟಿಗನಿಗೂ ಇಲ್ಲ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಧೋನಿ ಮೈದಾನಕ್ಕೆ ಇಳಿಯುತ್ತಿದ್ದಂತೆ ಪ್ರೇಕ್ಷಕರಿಂದ ಬರುವ ಕರತಾಡನವೇ ಅದಕ್ಕೆ ಸಾಕ್ಷಿ. ಧೋನಿ ಬಗ್ಗೆ ಈ ಅಭಿಮಾನ ಹಾಗೂ ಮೋಹ ಕೇವಲ ಕ್ರಿಕೆಟ್ ಅಭಿಮಾನಿಗಳು ಹಾಗೂ ಯುವ ಕ್ರಿಕೆಟಿಗರಿಗೆ ಮಾತ್ರವಲ್ಲ ದಿಗ್ಗಜ ಕ್ರಿಕೆಟಿಗರೂ ಇದೆ. ಇದಕ್ಕೆ ಸಾಕ್ಷಿ ಸುನಿಲ್ ಗವಾಸ್ಕರ್ ಅವರ ಈ ಹೇಳಿಕೆ.
ಭಾರತೀಯ ಕ್ರಿಕೆಟ್ ಕಂಡ ದಿಗ್ಗಜ ಆಟಗಾರರಲ್ಲಿ ಒಬ್ಬರೆನಿಸಿರುವ ಸುನಿಲ್ ಗವಾಸ್ಕರ್ ಭಾರತ ಮೊದಲ ಬಾರಿಗೆ 1983ರಲ್ಲಿ ವಿಶ್ವಕಪ್ ಗೆದ್ದ ತಂಡದ ಸದಸ್ಯ. ಪ್ರಸ್ತುತ ಕಾಮೆಂಟೇಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಅವರು ಕ್ರಿಕೆಟ್ ವಿಚಾರವಾಗಿ ತಮ್ಮ ಕಟು ವಿಶ್ಲೇಷಣೆಗಳಿಗೆ ಹೆಸರುವಾಸಿ. ಆದರೆ ಸುನಿಲ್ ಗವಾಸ್ಕರ್ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿ ವಿಚಾರವಾಗಿ ಆಡಿರುವ ಮಾತುಗಳು ಕ್ರಿಕೆಟ್ ಅಭಿಮಾನಿಗಳಿಗೆ ರೋಮಾಂಚನ ಮೂಡಿಸಿದೆ.

ಅಂದಹಾಗೆ ಸುನಿಲ್ ಗವಾಸ್ಕರ್ ಟಿ20 ಕ್ರಿಕೆಟ್ ಜನ್ಮತಾಳುವುದಕ್ಕಿಂತ ಬಹಳ ಬಹಳ ಹಿಂದೆಯೇ ಕ್ರಿಕೆಟ್‌ನಿಂದ ನಿವೃತ್ತಿಯಾಗಿದ್ದವರು. ಆದರೆ ಕ್ರಿಕೆಟ್ ವಿಶ್ಲೇಷಕರಾಗಿ ಹಾಗೂ ಕಾಮೆಂಟೇಟರ್ ಆಗಿ ಚುಟುಕು ಮಾದರಿಯೊಂದಿಗೆ ಸಂಬಂಧವನ್ನು ಹೊಂದಿಕೊಂಡು ಬಂದಿದ್ದಾರೆ. ಇದೀಗ 16ನೇ ಆವೃತ್ತಿಯ ಐಪಿಎಲ್ ಟೂರ್ನಿ ನಡೆಯುತ್ತಿರುವ ಸಂದರ್ಭದಲ್ಲಿ ಸುನಿಲ್ ಗವಾಸ್ಕರ್ ಎಂಎಸ್ ಧೋನಿ ಜೊತೆಗೆ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಆಡುವುದನ್ನು ಇಷ್ಟ ಪಡುತ್ತೇನೆ ಎಂದಿದ್ದು ಈ ಮೂಲಕ ಧೋನಿ ಮೇಲಿರುವ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಬೆಟ್ಟಿಂಗ್‌ನಲ್ಲಿ ಗೆಲ್ಲಬೇಕೆಂದು ಸಿರಾಜ್ ಬಳಿ ತಂಡದೊಳಗಿನ ಮಾಹಿತಿ ಕೇಳಿದ ಭೂಪ; ಸಿರಾಜ್ ಮಾಡಿದ್ದೇನು?
ಸಿಎಸ್‌ಕೆ ಪರ ಆಡಲು ಬಯಸುವುದಾಗಿ ಹೇಳಿದ ಗವಾಸ್ಕರ್
ಐಪಿಎಲ್‌ನಲ್ಲಿ ಯಾವ ತಂಡದ ಪರವಾಗಿ ಆಡಲು ಬಯಸುತ್ತೀರಿ ಎಂದು ಸುನಿಲ್ ಗವಾಸ್ಕರ್ ಅವರನ್ನು ಕೇಳಿದಾಗ ಅವರ ಮೊದಲ ಆಯ್ಕೆ ಚೆನ್ನೈ ಸೂಪರ್ ಕಿಂಗ್ಸ್ ಆಗಿರಲಿಲ್ಲ. ಖಂಡಿತವಾಗಿ ಮುಂಬೈ ಇಂಡಿಯನ್ಸ್ ಎಂದು ಸುನಿಲ್ ಗವಾಸ್ಕರ್ ಹೇಳಿದರು. ಆದರೆ ಅದು ಅಲ್ಲದಿದ್ದರೆ ಚೆನ್ನೈ ಸೂಪರ್ ಕಿಂಗ್ಸ್ ನನ್ನ ಆಯ್ಕೆ ಎಂದಿರುವ ಗವಾಸ್ಕರ್ ಅದಕ್ಕೆ ಎರಡು ಕಾರಣಗಳನ್ನು ನೀಡಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ ಮಾಲೀಕರು ಕ್ರಿಕೆಟ್ ಮೇಲೆ ಅಪಾರವಾದ ಬದ್ಧತೆಯನ್ನು ಹೊಂದಿದ್ದು ಕ್ರಿಕೆಟ್‌ಗಾಗಿ ಅವರು ಸಾಕಷ್ಟು ಕೊಡುಗೆ ನೀಡಿದ್ದಾರೆ ಎಂದಿದ್ದಾರೆ.
ಧೋನಿಯೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಳ್ಳುವ ಬಯಕೆ
ಇನ್ನು ಮುಂದುವರಿದ ಅವರು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆಯ್ಕೆ ಮಾಡಲು ಮತ್ತೊಂದು ಕಾರಣವೇನೆಂದು ವಿವರಿಸಿದ್ದಾರೆ. "ಎರಡನೇ ದೊಡ್ಡ ಕಾರಣವೆಂದರೆ ಅದು ಎಂಎಸ್ ಧೋನಿ ಜೊತೆಗೆ ಡ್ರೆಸ್ಸಿಂಗ್ ರೂಮ್‌ನಲ್ಲಿ ಜೊತೆಯಾಗಿ ಕೂಡಬೇಕು. ಅವರು ಹೇಗೆ ತಂಡವನ್ನು ಮುನ್ನಡೆಸುತ್ತಾರೆ ಎಂಬುದನ್ನು ನೋಡಬೇಕು. ಅವರು ಮೈದಾನದಲ್ಲಿದ್ದಂತೆಯೇ ಡ್ರೆಸ್ಸಿಂಗ್ ರೂಮ್‌ನಲ್ಲಿಯೂ ತಾಳ್ಮೆಯಿಂದ ಆಟಗಾರರ ಜೊತೆಗೆ ಇರುತ್ತಾರಾ? ಅವರು ತಂಡದಲ್ಲಿ ಯಾರಾದರೂ ಕ್ಯಾಚ್ ಕೈಬಿಟ್ಟಾಗ ಬ್ಯಾಕಪ್ ಫೀಲ್ಡಿಂಗ್ ಮಾಡದಿದ್ದಾಗ ತಾಳ್ಮೆ ಕಳೆದುಕೊಳ್ಳುತ್ತಾರೆಯೇ ಎಂಬುದನ್ನು ನಾನು ನೊಡಬೇಕು" ಎಂದಿದ್ದಾರೆ ಸುನಿಲ್ ಗವಾಸ್ಕರ್.
ಇನ್ನು ಐಪಿಎಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈವರಗೆ ನಾಲ್ಕು ಬಾರಿ ಚಾಂಪಿಯನ್ ಎನಿಸಿಕೊಂಡಿದ್ದರೆಮುಂಬೈ ಇಂಡಿಯನ್ಸ್ ಐದು ಬಾರಿ ಚಾಂಪೊಯನ್ಸ್ ಎನಿಸಿಕೊಂಡಿದೆ. ಅದರಲ್ಲೂ ಕಳೆದ ಐದು ವರ್ಷಗಳ ಐಪಿಎಲ್ ಆವೃತ್ತಿಯಲ್ಲಿ ನಾಲ್ಕು ಬಾರಿ ಈ ಎರಡು ತಂಡಗಳೇ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಬಾರಿಯ ಐಪಿಎಲ್‌ನಲ್ಲಿಯೂ ಈ ಎರಡು ತಂಡಗಳು ಉತ್ತಮ ಪ್ರದರ್ಶನ ನಿಡುತ್ತಿದ್ದು ಗಮನಸೆಳೆದಿದೆ.












Click it and Unblock the Notifications