LSG vs RCB: ಏಕದಿನ ಪಂದ್ಯದ ಹಾಗೆ ರನ್ ಗಳಿಸಿದ ಆರ್‌ಸಿಬಿ; ಲಕ್ನೋಗೆ ಸುಲಭ ಗುರಿ

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 43ನೇ ಪಂದ್ಯ ಇಂದು ( ಮೇ 1 ) ಲಕ್ನೋದ ಅಟಲ್ ಬಿಹಾರಿ ವಾಜಪೇಯಿ ಏಕನ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರುಗುತ್ತಿದೆ.
ಈ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದು, ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾಫ್ ಡು ಪ್ಲೆಸಿಸ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆ ಮಾಡಿಕೊಂಡಿದ್ದಾರೆ.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 126 ರನ್ ಕಲೆಹಾಕಿ ಎದುರಾಳಿ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಗೆಲ್ಲಲು 127 ರನ್‌ಗಳ ಗುರಿಯನ್ನು ನೀಡಿದೆ.
ಇದಕ್ಕೂ ಮುನ್ನ ನಡೆದಿದ್ದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಬೃಹತ್ ರನ್ ಕಲೆಹಾಕಿಯೂ ತವರು ನೆಲದಲ್ಲಿ ಸೋತಿದ್ದ ಸೇಡನ್ನು ತೀರಿಸಿಕೊಳ್ಳುವ ಯೋಜನೆಯೊಂದಿಗೆ ಕಣಕ್ಕಿಳಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಆರಂಭದಿಂದಲೇ ರನ್ ಗಳಿಸಲು ಪರದಾಡಿತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆರಂಭಿಕರಾಗಿ ಕಣಕ್ಕಿಳಿದ ವಿರಾಟ್ ಕೊಹ್ಲಿ ಹಾಗೂ ನಾಯಕ ಫಾಫ್ ಡು ಪ್ಲೆಸಿಸ್ ಆಡಿದ ಇನ್ನಿಂಗ್ಸ್ ಥೇಟ್ ಏಕದಿನ ಪಂದ್ಯದ ರೀತಿಯೇ ಇತ್ತು. ಕೇವಲ ಈ ಇಬ್ಬರ ಬ್ಯಾಟಿಂಗ್ ಮಾತ್ರವಲ್ಲದೇ ಇಡೀ ತಂಡದ ಬ್ಯಾಟಿಂಗ್ ವೇಗ ಇದೇ ಮಾದರಿಯಲ್ಲಿತ್ತು.
ವಿರಾಟ್ ಕೊಹ್ಲಿ 30 ಎಸೆತಗಳಲ್ಲಿ 31 ರನ್ ಗಳಿಸಿದರೆ, ಫಾಫ್ ಡು ಪ್ಲೆಸಿಸ್ 40 ಎಸೆತಗಳಲ್ಲಿ 44 ರನ್ ಗಳಿಸಿದರು. ಇನ್ನುಳಿದಂತೆ ಅನುಜ್ ರಾವತ್ 9, ಗ್ಲೆನ್ ಮ್ಯಾಕ್ಸ್‌ವೆಲ್ 4, ಸುಯಶ್ ಪ್ರಭುದೇಸಾಯಿ 6, ದಿನೇಶ್ ಕಾರ್ತಿಕ್ 16, ಮಹಿಪಾಲ್ ಲೊಮ್ರೊರ್ 3, ಕರ್ನ್ ಶರ್ಮಾ 2, ಮೊಹಮ್ಮದ್ ಸಿರಾಜ್ ಡಕ್ ಔಟ್, ವನಿಂದು ಹಸರಂಗ ಅಜೇಯ 8 ರನ್ ಹಾಗೂ ಜೋಶ್ ಹೇಜಲ್‌ವುಡ್ ಅಜೇಯ 1 ರನ್ ಗಳಿಸಿದರು.
ಇನ್ನು ಪಂದ್ಯಕ್ಕೆ ಕೆಲ ಕಾಲ ಮಳೆಯ ಅಡ್ಡಿಯೂ ಸಹ ಉಂಟಾಗಿದ್ದು, ಆ ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಭಿಮಾನಿಗಳು ಮಳೆಯಿಂದ ಪಂದ್ಯ ರದ್ದಾದರೂ ಆಗಲಿ ಎಂದು ಕೇಳಿಕೊಳ್ಳುವಷ್ಟು ನೀರಸ ಆಟವನ್ನು ರಾಯಲ್ ಚಾಲೆಂಜರ್ಸ್ ಆಡಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಗಾಯಕ್ಕೊಳಗಾಗಿ ಪಂದ್ಯದಿಂದ ಹೊರಗುಳಿದ ಕಾರಣ ಕೃನಾಲ್ ಪಾಂಡ್ಯ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ. ಲಕ್ನೋ ಪರ ನವೀನ್ ಉಲ್ ಹಕ್ 3, ರವಿ ಬಿಷ್ಣೋಯಿ 2 ಹಾಗೂ ಅಮಿತ್ ಮಿಶ್ರಾ 2 ವಿಕೆಟ್ ಪಡೆದರು.
ಪಂದ್ಯದಲ್ಲಿ ಕಣಕ್ಕಿಳಿದಿರುವ ಆಡುವ ಬಳಗಗಳು ಹೀಗಿವೆ:
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡುವ ಬಳಗ: ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ಅನುಜ್ ರಾವತ್, ಗ್ಲೆನ್ ಮ್ಯಾಕ್ಸ್‌ವೆಲ್, ಮಹಿಪಾಲ್ ಲೊಮ್ರೋರ್, ದಿನೇಶ್ ಕಾರ್ತಿಕ್(ವಿಕೆಟ್ ಕೀಪರ್), ಸುಯಶ್ ಪ್ರಭುದೇಸಾಯಿ, ವನಿಂದು ಹಸರಂಗ, ಕರ್ಣ್ ಶರ್ಮಾ, ಮೊಹಮ್ಮದ್ ಸಿರಾಜ್, ಜೋಶ್ ಹ್ಯಾಜಲ್‌ವುಡ್
ಲಕ್ನೋ ಸೂಪರ್ ಜೈಂಟ್ಸ್ ಆಡುವ ಬಳಗ: ಕೆಎಲ್ ರಾಹುಲ್(ನಾಯಕ), ಕೈಲ್ ಮೇಯರ್ಸ್, ದೀಪಕ್ ಹೂಡಾ, ಮಾರ್ಕಸ್ ಸ್ಟೊಯಿನಿಸ್, ಕೃನಾಲ್ ಪಾಂಡ್ಯ, ನಿಕೋಲಸ್ ಪೂರನ್(ವಿಕೆಟ್ ಕೀಪರ್), ಕೃಷ್ಣಪ್ಪ ಗೌತಮ್, ರವಿ ಬಿಷ್ಣೋಯ್, ನವೀನ್-ಉಲ್-ಹಕ್, ಅಮಿತ್ ಮಿಶ್ರಾ, ಯಶ್ ಠಾಕೂರ್












Click it and Unblock the Notifications