RR vs SRH: ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 51 ಹಾಗೂ 52ನೇ ಪಂದ್ಯಗಳು ಇಂದು ( ಮೇ 7 ) ಆಯೋಜನೆಗೊಂಡಿವೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡಲಿವೆ.
ಇನ್ನು ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಈ ಪಂದ್ಯ ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದ್ದು, ಇದು ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿರುವ ತಂಡ ಹಾಗೂ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿರುವ ತಂಡದ ನಡುವಿನ ಸೆಣಸಾಟವಾಗಿದೆ.
ಟೂರ್ನಿಯಲ್ಲಿ ಇಲ್ಲಿಯವರೆಗೂ ಒಟ್ಟು 10 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ರಾಜಸ್ಥಾನ್ ರಾಯಲ್ಸ್ 5 ಪಂದ್ಯಗಳಲ್ಲಿ ಗೆದ್ದು 5 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಂಡು ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದರೆ, 9 ಪಂದ್ಯಗಳನ್ನಾಡಿ ಕೇವಲ 3 ಪಂದ್ಯಗಳಲ್ಲಿ ಜಯ ಗಳಿಸಿ, ಉಳಿದ 6 ಪಂದ್ಯಗಳಲ್ಲಿ ಸೋತಿರುವ ಸನ್ ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಕೇವಲ 6 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಕೊನೆಯ ಸ್ಥಾನದಲ್ಲಿದೆ.
ಹೀಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು ಪ್ಲೇಆಫ್ ರೇಸ್‌ನಲ್ಲಿರುವ ರಾಜಸ್ಥಾನ್ ರಾಯಲ್ಸ್ ಈ ಪಂದ್ಯವನ್ನು ಗೆದ್ದು ತನ್ನ ಪ್ಲೇಆಫ್ ಹಾದಿಯನ್ನು ಮತ್ತಷ್ಟು ಸುಲಭ ಮಾಡಿಕೊಳ್ಳುವ ತವಕದಲ್ಲಿದೆ. ಅತ್ತ ಟೂರ್ನಿಯಲ್ಲಿ ಹೀನಾಯವಾಗಿ ಸೋತು ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಗುಳಿದಿರುವ ಸನ್ ರೈಸರ್ಸ್ ಹೈದರಾಬಾದ್ ಈ ಪಂದ್ಯದಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ ಆಸೆಯನ್ನು ಉಳಿಸಿಕೊಳ್ಳಲಿದ್ದು, ಗೆಲ್ಲಲೇಬೇಕಾದ ಅನಿವಾರ್ಯತೆ ಹೆಚ್ಚಿದೆ.
ಹೀಗೆ ಎರಡೂ ತಂಡಗಳಿಗೂ ಈ ಪಂದ್ಯ ಮುಖ್ಯದ್ದಾಗಿದ್ದು, ಟೂರ್ನಿಯಲ್ಲಿ ಇತ್ತಂಡಗಳು ಪರಸ್ಪರ ಮುಖಾಮುಖಿಯಾಗಲಿರುವ ಎರಡನೇ ಪಂದ್ಯ ಇದಾಗಿದೆ. ಹೌದು, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ ನಾಲ್ಕನೇ ಪಂದ್ಯದಲ್ಲಿ ಮೊದಲಿಗೆ ಇತ್ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯವೂ ಸೇರಿದಂತೆ ಒಟ್ಟು 17 ಪಂದ್ಯಗಳಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ಪರಸ್ಪರ ಸೆಣಸಾಡಿವೆ.
ಈ ಪೈಕಿ ರಾಜಸ್ಥಾನ್ ರಾಯಲ್ಸ್ 9 ಪಂದ್ಯಗಳಲ್ಲಿ ಗೆದ್ದಿದ್ದರೆ, ಸನ್ ರೈಸರ್ಸ್ ಹೈದರಾಬಾದ್ 8 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇತ್ತಂಡಗಳ ಮುಖಾಮುಖಿಯಲ್ಲಿ ರಾಜಸ್ಥಾನ್ ರಾಯಲ್ಸ್ ಒಂದು ಪಂದ್ಯದ ಅಂತರದ ಮುನ್ನಡೆ ಕಾಯ್ದುಕೊಂಡಿದೆ.
ಇನ್ನು ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಎರಡೂ ತಂಡಗಳು ಮುಖಾಮುಖಿಯಾದಾಗ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 203 ರನ್ ಕಲೆಹಾಕಿ ಎದುರಾಳಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲಲು 204 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನತ್ತುವಲ್ಲಿ ವಿಫಲಗೊಂಡಿದ್ದ ಸನ್ ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 131 ರನ್ ಕಲೆಹಾಕಿತ್ತು. ಈ ಮೂಲಕ ರಾಜಸ್ಥಾನ್ ರಾಯಲ್ಸ್ 72 ರನ್‌ಗಳ ದೊಡ್ಡ ಗೆಲುವನ್ನು ಕಂಡಿತ್ತು.
ತನ್ನದೇ ತವರು ನೆಲದ ಕ್ರೀಡಾಂಗಣದಲ್ಲಿ ಸೋತಿದ್ದ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಅದರ ಸೇಡನ್ನು ತೀರಿಸಿಕೊಳ್ಳಲು ಸಿಕ್ಕಿರುವ ಅವಕಾಶ ಇದಾಗಿದ್ದು, ಅಲ್ಲದೇ ಪ್ಲೇಆಫ್ ಆಸೆ ಜೀವಂತವಾಗಿರಿಸಿಕೊಳ್ಳಲು ಇರುವ ಅವಕಾಶವೂ ಸಹ ಆಗಿದ್ದು, ಈ ಪಂದ್ಯದಲ್ಲಿ ಗೆಲ್ಲುವತ್ತ ಚಿತ್ತ ನೆಟ್ಟಿದೆ.












Click it and Unblock the Notifications