RR vs SRH: ಬಟ್ಲರ್ ಶತಕ ಮಿಸ್, ಸ್ಯಾಮ್ಸನ್ ಅಬ್ಬರ; ಸನ್ ರೈಸರ್ಸ್‌ಗೆ ಕಠಿಣ ಗುರಿ ನೀಡಿದ ರಾಜಸ್ಥಾನ್

ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 51 ಹಾಗೂ 52ನೇ ಪಂದ್ಯಗಳು ಇಂದು ( ಮೇ 7 ) ಆಯೋಜನೆಗೊಂಡಿವೆ. ಮೊದಲ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಗೆಲುವು ಕಂಡಿದ್ದು, ಎರಡನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಸೆಣಸಾಡುತ್ತಿವೆ.
ಇನ್ನು ರಾಜಸ್ಥಾನ್ ರಾಯಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಈ ಪಂದ್ಯ ಜೈಪುರದ ಸವಾಯಿ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ ಟಾಸ್ ಗೆದ್ದಿರುವ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲು ಬ್ಯಾಟಿಂಗ್ ಮಾಡುವ ಆಯ್ಕೆಯನ್ನು ಮಾಡಿಕೊಂಡಿದ್ದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ಜೋಸ್ ಬಟ್ಲರ್ ಹಾಗೂ ಸಂಜು ಸ್ಯಾಮ್ಸನ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 214 ರನ್ ಕಲೆಹಾಕಿದ್ದು, ಎದುರಾಳಿ ಸನ್ ರೈಸರ್ಸ್ ತಂಡಕ್ಕೆ ಗೆಲ್ಲಲು 215 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಇನ್ನು ರಾಜಸ್ಥಾನ್ ರಾಯಲ್ಸ್ ಗಳಿಸಿರುವ ಈ ಮೊತ್ತ ಜೈಪುರದ ಸವಾಯಿ ಮಾನ್ ಸಿಂಗ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ದಾಖಲೆಯಾದ ಅತಿಹೆಚ್ಚು ಟಿ ಟ್ವೆಂಟಿ ರನ್ ಮೊತ್ತ ಎಂಬ ದಾಖಲೆಯಾಗಿದೆ.
ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕ ಆಟಗಾರರಾಗಿ ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಕಣಕ್ಕಿಳಿದರು. ಆರಂಭದಿಂದಲೇ ಇಬ್ಬರೂ ಸಹ ಬಿರುಸಿನ ಬ್ಯಾಟಿಂಗ್ ನಡೆಸಿ ರನ್ ಹೊಳೆ ಹರಿಸಿದರು. ಯಶಸ್ವಿ ಜೈಸ್ವಾಲ್ 18 ಎಸೆತಗಳಲ್ಲಿ 35 ರನ್ ಗಳಿಸಿದರೆ, ಜೋಸ್ ಬಟ್ಲರ್ 59 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 95 ರನ್ ಗಳಿಸಿದರು. ಇನ್ನು ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ನಾಯಕ ಸಂಜು ಸ್ಯಾಮ್ಸನ್ 38 ಎಸೆತಗಳಲ್ಲಿ 4 ಬೌಂಡರಿ ಹಾಗೂ 5 ಸಿಕ್ಸರ್ ಸಹಿತ ಅಜೇಯ 66 ರನ್ ಚಚ್ಚಿದರು ಹಾಗೂ ಶಿಮ್ರಾನ್ ಹೆಟ್ಮಾಯೆರ್ 5 ಎಸೆತಗಳಲ್ಲಿ ಅಜೇಯ 7 ರನ್ ಗಳಿಸಿದರು.
ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕುವಲ್ಲಿ ವಿಫಲವಾದ ಸನ್ ರೈಸರ್ಸ್ ಹೈದರಾಬದ್ ಪರ ಭುವನೇಶ್ವರ್ ಕುಮಾರ್ ಹಾಗೂ ಮಾರ್ಕೊ ಯಾನ್‌ಸೆನ್ ತಲಾ ಒಂದೊಂದು ವಿಕೆಟ್ ಪಡೆದರೂ ದೊಡ್ಡ ಮಟ್ಟದ ರನ್ ಬಿಟ್ಟುಕೊಟ್ಟು ದುಬಾರಿಯಾದರು. ಉಳಿದ ಬೌಲರ್‌ಗಳೂ ಸಹ ಸಿಕ್ಕಾಪಟ್ಟೆ ರನ್ ನೀಡಿ ದುಬಾರಿಯಾಗಿದ್ದಾರೆ.
ಆಡುವ ಬಳಗಗಳು:
ಸನ್ ರೈಸರ್ಸ್ ಹೈದರಾಬಾದ್: ಅಭಿಷೇಕ್ ಶರ್ಮಾ, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್(ನಾಯಕ), ಹೆನ್ರಿಚ್ ಕ್ಲಾಸೆನ್ ( ವಿಕೆಟ್ ಕೀಪರ್ ), ಗ್ಲೆನ್ ಫಿಲಿಪ್ಸ್, ಅಬ್ದುಲ್ ಸಮದ್, ಮಾರ್ಕೊ ಜಾನ್ಸೆನ್, ವಿವ್ರಾಂತ್ ಶರ್ಮಾ, ಮಯಾಂಕ್ ಮಾರ್ಕಂಡೆ, ಭುವನೇಶ್ವರ್ ಕುಮಾರ್, ಟಿ ನಟರಾಜನ್
ರಾಜಸ್ಥಾನ್ ರಾಯಲ್ಸ್: ಯಶಸ್ವಿ ಜೈಸ್ವಾಲ್, ಜೋಸ್ ಬಟ್ಲರ್, ಸಂಜು ಸ್ಯಾಮ್ಸನ್(ನಾಯಕ ಹಾಗೂ ವಿಕೆಟ್ ಕೀಪರ್ ) , ಜೋ ರೂಟ್, ಧ್ರುವ್ ಜುರೆಲ್, ಶಿಮ್ರೋನ್ ಹೆಟ್ಮೆಯರ್, ರವಿಚಂದ್ರನ್ ಅಶ್ವಿನ್, ಮುರುಗನ್ ಅಶ್ವಿನ್, ಸಂದೀಪ್ ಶರ್ಮಾ, ಕುಲದೀಪ್ ಯಾದವ್, ಯುಜ್ವೇಂದ್ರ ಚಹಾಲ್












Click it and Unblock the Notifications