IPL 2023: ಆರ್‌ಸಿಬಿ ವಿರುದ್ಧ ಪಂದ್ಯಕ್ಕೆ ಮುನ್ನ ಫಿಟ್ ಆಗ್ತಾರ ಧವನ್, ಲಿವಿಂಗ್‌ಸ್ಟೋನ್?
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲುವು ಸಾಧಿಸಿದ ಬಳಿಕ ಪಂಜಾಬ್ ಕಿಂಗ್ಸ್ ಐಪಿಎಲ್ 2023ರ ಆವೃತ್ತಿಯ 27ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸೆಣೆಸಲಿದೆ. ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಮುನ್ನ ಪಂಜಾಬ್ ಕಿಂಗ್ಸ್ ನಾಯಕ ಶಿಖರ್ ಧವನ್ ಮತ್ತು ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಫಿಟ್‌ನೆಸ್ ಪರೀಕ್ಷೆಗ ಒಳಗಾಗಲಿದ್ದು, ತಂಡದ ಆತಂಕಕ್ಕೆ ಕಾರಣವಾಗಿದೆ.
ಏಪ್ರಿಲ್ 20 ರಂದು ಗುರುವಾರ ಪಂಜಾಬ್ ಕಿಂಗ್ಸ್ ಮೊಹಾಲಿಯಲ್ಲಿ ಆರ್ ಸಿಬಿ ವಿರುದ್ಧ ಸೆಣೆಸಲು ಸಜ್ಜಾಗಿದೆ. ನಾಯಕ ಶಿಖರ್ ಧವನ್ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಗಾಯದ ಸಮಸ್ಯೆಯಿಂದ ಹೊರಗುಳಿದಿದ್ದರು. ಅವರ ಅನುಪಸ್ಥಿತಿಯಲ್ಲಿ ಸ್ಯಾಮ್ ಕರನ್ ನಾಯಕತ್ವ ವಹಿಸಿಕೊಂಡಿದ್ದರು. ಧವನ್ ಇಲ್ಲದೇ ಇದ್ದರೂ ಪಂಜಾಬ್ ಕಿಂಗ್ಸ್ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಗಿತ್ತು.

ಶಿಖರ್ ಧವನ್ ಮತ್ತು ಲಿಯಾಮ್ ಲಿವಿಂಗ್‌ಸ್ಟೋನ್ ಫಿಟ್‌ನೆಸ್ ಸಮಸ್ಯೆ ತಂಡಕ್ಕೆ ಸಮಸ್ಯೆಯಾಗಿದೆ. ಶಿಖರ್ ಧವನ್ ಭುಜದ ಸಮಸ್ಯೆಯಿಂದಾಗಿ ಕಳೆದ ಪಂದ್ಯದಲ್ಲಿ ಆಡಲಿಲ್ಲ, ಲಿವಿಂಗ್‌ಸ್ಟೋನ್ ಈ ಬಾರಿ ಐಪಿಎಲ್‌ನಲ್ಲಿ ಇನ್ನೂ ಒಂದು ಪಂದ್ಯವನ್ನು ಆಡಿಲ್ಲ, ಆರ್ ಸಿಬಿ ವಿರುದ್ಧದ ಪಂದ್ಯಕ್ಕೆ 24 ಗಂಟೆಗಳ ಮುನ್ನ ಇವರಿಬ್ಬರೂ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಅವರು ಆರ್ ಸಿಬಿ ವಿರುದ್ಧ ಕಣಕ್ಕಿಳಿಯಲಿದ್ದಾರೆ.
ಈಗಲೇ ಏನೂ ಹೇಳಲು ಸಾಧ್ಯವಿಲ್ಲ
ಇವರಿಬ್ಬರ ಗಾಯದ ಬಗ್ಗೆ ಮಾತನಾಡಿರುವ ಪಂಜಾಬ್ ಕಿಂಗ್ಸ್ ತಂಡದ ಅಧಿಕಾರಿಯೊಬ್ಬರು, "ಈಗಲೇ ಯಾವುದನ್ನು ಹೇಳಲೂ ಸಾಧ್ಯವಿಲ್ಲ, ಮುಂದಿನ ಪಂದ್ಯಕ್ಕೆ ಇನ್ನೂ ಸಾಕಷ್ಟು ಸಮಯವಿದೆ. ಪಂದ್ಯಕ್ಕೆ 24 ಗಂಟೆಗಳ ಮುನ್ನ ಫಿಸಿಯೋಗಳಿಂದ ಅಪ್‌ಡೇಟ್ ಪಡೆದುಕೊಳ್ಳುತ್ತೇವೆ" ಎಂದು ಹೇಳಿದ್ದಾರೆ.
ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಶಿಖರ್ ಧವನ್ ಅಲಭ್ಯರಾದ ಬಳಿಕ, ಅಥರ್ವ ಟೈಡೆ ಅವರು ಮೊದಲನೇ ಪಂದ್ಯವನ್ನಾಡಲು ಅವಕಾಶ ಪಡೆದುಕೊಂಡರು. 10 ವರ್ಷಗಳ ಬಳಿಕ ಹರ್‌ಪ್ರೀತ್ ಭಾಟಿಯಾ ಐಪಿಎಲ್ ಪಂದ್ಯದಲ್ಲಿ ಆಡಲು ಅವಕಾಶ ಪಡೆದುಕೊಂಡರು.

ಲಿಯಾಮ್ ಲಿವಿಂಗ್‌ಸ್ಟೋನ್ ಫಿಟ್‌ನೆಸ್
ತಂಡದ ಪ್ರಮುಖ ಸ್ಫೋಟಕ ಆಲ್‌ರೌಂಡರ್ ಲಿಯಾಮ್ ಲಿವಿಂಗ್‌ಸ್ಟೋನ್ ಫಿಟ್‌ನೆಸ್ ತಂಡಕ್ಕೆ ದೊಡ್ಡ ಚಿಂತೆಯಾಗಿದೆ, ಇಂಗ್ಲೆಂಡ್ ಆಲ್‌ರೌಂಡರ್ ಐಪಿಎಲ್‌ನ ಆರಂಭದ ಕೆಲವು ಪಂದ್ಯಗಳನ್ನು ಕಳೆದುಕೊಂಡ ನಂತರ, ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯಕ್ಕೆ ಮುನ್ನ ಅವರು ತಂಡವನ್ನು ಸೇರಿಕೊಂಡರೂ, ಪಂದ್ಯವನ್ನು ಆಡಲಿಲ್ಲ. ನಂತರ ನಡೆದ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯಕ್ಕೂ ಅವರು ಫಿಟ್ ಆಗಿರಲಿಲ್ಲ.
ಲಿವಿಂಗ್‌ಸ್ಟೋನ್ ಫಿಟ್ ಆದರೆ ತಂಡದ ಬ್ಯಾಟಿಂಗ್ ಮತ್ತು ಬೌಲಿಂಗ್ ವಿಭಾಗಕ್ಕೆ ಹೆಚ್ಚಿನ ಬಲ ಬರಲಿದೆ. ಲಿವಿಂಗ್‌ಸ್ಟೋನ್ ಕಳೆದ ವರ್ಷ ಡಿಸೆಂಬರ್ ನಲ್ಲಿ ಗಾಯಕ್ಕೆ ತುತ್ತಾಗಿದ್ದರು. ಮೊಣಕಾಲಿನ ನೋವಿನಿಂದ ಬಳಲುತ್ತಿರುವ ಅವರು ಸಂಪೂರ್ಣವಾಗಿ ಫಿಟ್ ಆದ ಬಳಿಕ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ಇವರಿಬ್ಬರೂ ಪಾಸಾದರೆ ಆರ್ ಸಿಬಿ ವಿರುದ್ಧ ಬಲಿಷ್ಠ ತಂಡ ಕಣಕ್ಕಿಳಿಯಲಿದೆ.
ಪಂಜಾಬ್ ಕಿಂಗ್ಸ್ ತಂಡ
ಶಿಖರ್ ಧವನ್ (ನಾಯಕ), ಅಥರ್ವ ಟೈಡೆ, ಮ್ಯಾಥ್ಯೂ ಶಾರ್ಟ್, ಹರ್‌ಪ್ರೀತ್ ಸಿಂಗ್ ಭಾಟಿಯಾ, ಸಿಕಂದರ್ ರಜಾ, ಸ್ಯಾಮ್ ಕರನ್, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಾರುಖ್ ಖಾನ್, ಹರ್‌ಪ್ರೀತ್ ಬ್ರಾರ್, ಕಗಿಸೊ ರಬಾಡ, ರಾಹುಲ್ ಚಾಹರ್, ಅರ್ಶ್‌ದೀಪ್ ಸಿಂಗ್, ಪ್ರಭ್‌ಸಿಮ್ರಾನ್ ಸಿಂಗ್, ನಾಥನ್ ಎಲ್ಲಿಸ್, ಮೋಹಿತ್ ರಾಥೀ, ರಿಷಿ ಧವನ್, , ಭಾನುಕಾ ರಾಜಪಕ್ಸೆ, ಗುರ್ನೂರ್ ಬ್ರಾರ್, ಬಲ್ತೇಜ್ ಸಿಂಗ್, ಲಿಯಾಮ್ ಲಿವಿಂಗ್‌ಸ್ಟೋನ್, ವಿಧ್ವತ್ ಕಾವೇರಪ್ಪ, ಶಿವಂ ಸಿಂಗ್.












Click it and Unblock the Notifications