CSK vs MI: ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಗೆದ್ದಿರುವ ಬಲಿಷ್ಠ ತಂಡ ಯಾವುದು?

ಸದ್ಯ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಾಳೆ ( ಮೇ 6 ) ಲೀಗ್ ಹಂತದ 49 ಹಾಗೂ 50ನೇ ಪಂದ್ಯಗಳು ಜರುಗಲಿವೆ. 49ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಲಿದ್ದು, ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯ ಜರುಗಲಿದೆ.
ಚೆನ್ನೈ ಸೂಪರ್ ಕಿಂಗ್ಸ್ ಟೂರ್ನಿಯಲ್ಲಿ ಇಲ್ಲಿಯವರೆಗೂ 10 ಪಂದ್ಯಗಳನ್ನಾಡಿ 5 ಪಂದ್ಯಗಳಲ್ಲಿ ಗೆದ್ದು, 4 ಪಂದ್ಯಗಳಲ್ಲಿ ಸೋತು ಉಳಿದೊಂದು ಪಂದ್ಯದಲ್ಲಿ ಡ್ರಾ ಕಂಡಿದ್ದು, 11 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಮುಂಬೈ ಇಂಡಿಯನ್ಸ್ ತಂಡ ಇಲ್ಲಿಯವರೆಗೂ 9 ಪಂದ್ಯಗಳನ್ನಾಡಿದ್ದು, 5 ಪಂದ್ಯಗಳಲ್ಲಿ ಗೆದ್ದು 4 ಪಂದ್ಯಗಳಲ್ಲಿ ಸೋತು 10 ಅಂಕಗಳನ್ನು ಪಡೆದುಕೊಳ್ಳುವುದರ ಮೂಲಕ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು, ಹೀಗೆ ಹೆಚ್ಚೇನೂ ಅಂಕಗಳ ವ್ಯತ್ಯಾಸವಿಲ್ಲದೇ ಅಂಕಪಟ್ಟಿಯಲ್ಲಿ ಉತ್ತಮ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ಎರಡೂ ತಂಡಗಳಿಗೂ ಸಹ ಈ ಪಂದ್ಯ ಮುಖ್ಯವಾಗಿದ್ದು, ಗೆಲ್ಲುವತ್ತ ಕಣ್ಣಿಟ್ಟಿವೆ.
ಇನ್ನು ಇತ್ತಂಡಗಳು ಈ ಪಂದ್ಯದ ಮೂಲಕ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿದ್ದು, ಇಲ್ಲಿಯವರೆಗಿನ ಐಪಿಎಲ್ ಮುಖಾಮುಖಿಯಲ್ಲಿ ಎಷ್ಟು ಪಂದ್ಯಗಳು ನಡೆದಿವೆ, ಯಾವ ತಂಡ ಎಷ್ಟು ಪಂದ್ಯದಲ್ಲಿ ಗೆದ್ದಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಇಲ್ಲಿಯವರೆಗೂ ಒಟ್ಟು 35 ಪಂದ್ಯಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ. ಈ ಪೈಕಿ ಮುಂಬೈ ಇಂಡಿಯನ್ಸ್ 20 ಪಂದ್ಯಗಳಲ್ಲಿ ಗೆದ್ದಿದ್ದು, ಚೆನ್ನೈ ಸೂಪರ್ ಕಿಂಗ್ಸ್ 15 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇತ್ತಂಡಗಳ ಮುಖಾಮುಖಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಸ್ಪಷ್ಟ ಮೇಲುಗೈ ಸಾಧಿಸಿದೆ.
ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 12 ನೇ ಪಂದ್ಯದಲ್ಲಿ ಮೊದಲಿಗೆ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 157 ರನ್ ಕಲೆಹಾಕಿ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಗೆಲ್ಲಲು 158 ರನ್‌ಗಳ ಗುರಿಯನ್ನು ನೀಡಿತ್ತು.
ಈ ಗುರಿಯನ್ನು ಬೆನ್ನತ್ತಿದ ಚೆನ್ನೈ ಸೂಪರ್ ಕಿಂಗ್ಸ್ 18.1 ಓವರ್‌ಗಳಲ್ಲಿ 3 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿ 7 ವಿಕೆಟ್‌ಗಳ ಭರ್ಜರಿ ಗೆಲುವನ್ನು ಸಾಧಿಸಿತ್ತು. ಇನ್ನು ಕಳೆದ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಎರಡೂ ತಂಡಗಳು ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದವು. ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ 3 ವಿಕೆಟ್‌ಗಳ ಗೆಲುವನ್ನು ಕಂಡಿತ್ತು. ಎರಡನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ತಂಡ 5 ವಿಕೆಟ್‌ಗಳ ಗೆಲುವನ್ನು ಕಂಡಿತ್ತು.
ಸದ್ಯ ಈ ಬಾರಿಯ ಅಂಕಪಟ್ಟಿಯಲ್ಲಿ ಮುಂಬೈ ಇಂಡಿಯನ್ಸ್ ತಂಡಕ್ಕಿಂತ ಚೆನ್ನೈ ಸೂಪರ್ ಕಿಂಗ್ಸ್ ತಂಡ ಉತ್ತಮ ಸ್ಥಾನದಲ್ಲಿದ್ದು, ಜಯ ಸಾಧಿಸಲಿರುವ ತಂಡ ಅಂಕಪಟ್ಟಿಯ ಟಾಪ್ 4ನಲ್ಲಿ ಉಳಿದುಕೊಳ್ಳಲಿದೆ.












Click it and Unblock the Notifications