IPL 2023: ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆದ ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್ ಯಶಸ್ವಿಯಾಗಿ 15 ಆವೃತ್ತಿಗಳನ್ನು ಮುಗಿಸಿದೆ. ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಐಪಿಎಲ್‌ನ 16ನೇ ಆವೃತ್ತಿಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ವಿಶ್ವದ ಅನೇಕ ಆಟಗಾರರು ಐಪಿಎಲ್‌ನಲ್ಲಿ ಆಡಲು ಕಾಯುತ್ತಿದ್ದಾರೆ.
ಆದರೆ, ಕೆಲವೇ ಆಟಗಾರರಿಗೆ ಮಾತ್ರ ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಗುತ್ತದೆ. 15 ಆವೃತ್ತಿಯಲ್ಲಿ ಹಲವು ವಿಶೇಷ ದಾಖಲೆಗಳಿಗೆ ಐಪಿಎಲ್ ಸಾಕ್ಷಿಯಾಗಿದೆ. ಟಿ20 ಪಂದ್ಯದಲ್ಲಿ ತಂಡವೊಂದು ಅತಿ ಹೆಚ್ಚು ರನ್ ಗಳಿಸಿರುವುದು ಐಪಿಎಲ್‌ನಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗಳಿಸಿದ 275 ರನ್‌ಗಳ ದಾಖಲೆಯನ್ನು ಇನ್ನೂ ಯಾವ ತಂಡಕ್ಕೂ ಮುರಿಯಲು ಸಾಧ್ಯವಾಗಿಲ್ಲ.
ಕ್ರಿಸ್ ಗೇಲ್ ಆ ಪಂದ್ಯದಲ್ಲಿ 175 ರನ್ ಗಳಿಸಿದ್ದರು. ಇದು ಟಿ20 ಮಾದರಿಯಲ್ಲಿ ಬ್ಯಾಟರ್ ಗಳಿಸಿದ ಅತ್ಯಧಿಕ ವೈಯಕ್ತಿಕ ಸ್ಕೋರ್ ಆಗಿದೆ. ಇನ್ನು ಆಸಕ್ತಿದಾಯಕವಾಗಿ ಅತಿ ಹೆಚ್ಚು ಬಾರಿ ಡಕೌಟ್ ಆದವರ ಪಟ್ಟಿ ಇದೆ. ಯಾವುದೇ ಬ್ಯಾಟರ್ ಗೆ ಮೊದಲ ಎಸೆತ ಎದುರಿಸುವುದು ಸುಲಭವಲ್ಲ. ಡಕೌಟ್ ಆಗುವುದು ಬ್ಯಾಟರ್ ಗಳಿಗೆ ಉತ್ತಮ ವಿಚಾರವಂತೂ ಅಲ್ಲ, ಆದರೂ ಕೆಲವೊಮ್ಮೆ ಮೊದಲ ಎಸೆತದಲ್ಲೇ ಔಟ್ ಆಗುವ ಮೂಲಕ ಕೆಟ್ಟ ದಾಖಲೆ ಬರೆಯುತ್ತಾರೆ.

ರೋಹಿತ್ ಶರ್ಮಾ ಕೂಡ ಪಟ್ಟಿಯಲ್ಲಿ
ಅಚ್ಚರಿ ಎನ್ನುವಂತೆ ಪ್ರಮುಖ ಬ್ಯಾಟರ್ ಗಳು ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಮುಂಬೈ ಇಂಡಿಯನ್ಸ್ ತಂಡದ ಯಶಸ್ವಿ ನಾಯಕ, 5 ಬಾರಿ ಕಪ್ ಗೆದ್ದ ರೋಹಿತ್ ಶರ್ಮಾ ಕೂಡ ಈ ಪಟ್ಟಿಯಲ್ಲಿದ್ದಾರೆ. ಮಂದೀಪ್ ಸಿಂಗ್ ಐಪಿಎಲ್ ಇತಿಹಾಸದಲ್ಲಿ ಅತಿ ಹೆಚ್ಚು ಬಾರಿ ಡಕೌಟ್ ಆದ ಆಟಗಾರ ಆಗಿದ್ದಾರೆ.
ಮಂದೀಪ್ ಸಿಂಗ್ 95 ಇನ್ನಿಂಗ್ಸ್‌ಗಳಲ್ಲಿ 14 ಬಾರಿ ಡಕೌಟ್ ಆಗಿದ್ದರೆ, ರೋಹಿತ್ ಶರ್ಮಾ ಕೂಡ 222 ಇನ್ನಿಂಗ್ಸ್‌ಗಳಲ್ಲಿ 14 ಬಾರಿ ಡಕೌಟ್ ಆಗುವ ಮೂಲಕ ಜಂಟಿಯಾಗಿ ಮೊದಲನೇ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಆರು ಆಟಗಾರರು 13 ಬಾರಿ ಡಕೌಟ್ ಆಗುವ ಮೂಲಕ ಜಂಟಿಯಾಗಿ ಎರಡನೇ ಸ್ಥಾನದಲ್ಲಿದ್ದಾರೆ. ಪಿಯೂಷ್ ಚಾವ್ಲಾ, ಹರ್ಭಜನ್ ಸಿಂಗ್, ಪಾರ್ಥಿವ್ ಪಟೇಲ್, ಅಜಿಂಕ್ಯ ರಹಾನೆ, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್ ಐಪಿಎಲ್ ಇತಿಹಾಸದಲ್ಲಿ 13 ಬಾರಿ ಡಕೌಟ್ ಆಗುವ ಮೂಲಕ ಕೆಟ್ಟ ದಾಖಲೆ ಮಾಡಿದ್ದಾರೆ. ರಶೀದ್ ಖಾನ್ ಮತ್ತು ಸುನಿಲ್ ನರೈನ್ 12 ಬಾರಿ ಡಕೌಟ್ ಆಗುವ ಮೂಲಕ ಜಂಟಿಯಾಗಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

16ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ
ಇಂಡಿಯನ್ ಪ್ರೀಮಿಯರ್ ಲೀಗ್ 16ನೇ ಆವೃತ್ತಿಯ ಆರಂಭಕ್ಕೆ ದಿನಗಣನೆ ಆರಂಭವಾಗಿದೆ. ಮಾರ್ಚ್ 31ರಂದು ಐಪಿಎಲ್‌ನ ಉದ್ಘಾಟನಾ ಪಂದ್ಯ ನಡೆಯಲಿದೆ. ಆರಂಭಿಕ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಗುಜರಾತ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಮುಖಾಮುಖಿಯಾಗಲಿವೆ.
ಒಟ್ಟು 10 ತಂಡಗಳು ದೇಶಾದ್ಯಂತ 12 ಕ್ರೀಡಾಂಗಣದಲ್ಲಿ ಸೆಣೆಸಲಿವೆ. ಐಪಿಎಲ್ ಮಿನಿ ಹರಾಜಿನಲ್ಲಿ ಪ್ರಮುಖ ಆಟಗಾರರನ್ನು ಖರೀದಿ ಮಾಡಿದ್ದು ಎಲ್ಲಾ ತಂಡಗಳು ಬಲಿಷ್ಠವಾಗಿ ಕಾಣಿಸುತ್ತಿವೆ. ಈ ಬಾರಿಯ ಐಪಿಎಲ್‌ನಲ್ಲಿ ಹಲವು ಹೊಸ ನಿಯಮಗಳನ್ನು ಪರಿಚಯಿಸಲಾಗಿದೆ. ಮುಖ್ಯವಾಗಿ ಇಂಪ್ಯಾಕ್ಟ್ ಪ್ಲೇಯರ್ ಎನ್ನುವ ನಿಯಮ ಜಾರಿಯಾಗುತ್ತದೆ. ಆಟಗಾರರು ವೈಡ್ ಮತ್ತು ನೋಬಾಲ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಕೂಡ ಅವಕಾಶ ಕಲ್ಪಿಸಲಾಗಿದೆ.












Click it and Unblock the Notifications