IPL 2023: ಕನ್ನಡ ಸೇರಿದಂತೆ ಇತರ ಭಾಷೆಗಳ ಕಾಮೆಂಟೇಟರ್ಸ್ ಪಟ್ಟಿ ಬಿಡುಗಡೆ ಮಾಡಿದ Jio Cinema
2023ರ 16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಆರಂಭಕ್ಕೆ ಎರಡೇ ದಿನಗಳು ಬಾಕಿ ಇದ್ದು, ಮೂರು ವರ್ಷಗಳ ಬಳಿಕ ತವರಿನ ಮೈದಾನದಲ್ಲಿ ಟಿ20 ಲೀಗ್ ಕಣ್ತುಂಬಿಕೊಳ್ಳಲು ಎಲ್ಲಾ ಹತ್ತು ತಂಡಗಳ ಅಭಿಮಾನಿಗಳು ಕಾತರರಾಗಿದ್ದಾರೆ.
ಇದೇ ಮಾರ್ಚ್ 31ರಂದು ಐಪಿಎಲ್ ಹೊಸ ಸೀಸನ್‌ಗೆ ಅದ್ಧೂರಿ ಚಾಲನೆ ಸಿಗಲಿದ್ದು, ದೇಶದ ಮತ್ತು ವಿಶ್ವದ ಅತ್ಯುತ್ತಮ ಕ್ರಿಕೆಟಿಗರ ಪ್ರದರ್ಶನವನ್ನು ವೀಕ್ಷಿಸಲು ಪ್ರೇಕ್ಷಕರು ಮೈದಾನಕ್ಕೆ ಹರಿದು ಬರುವ ನಿರೀಕ್ಷೆ ಇದೆ. ವಿಶ್ವದ ದೈತ್ಯ ಪ್ರತಿಭೆಗಳು ಪರಸ್ಪರ ಮುಖಾಮುಖಿಯಾದಾಗ ಅಭಿಮಾನಿಗಳ ಉತ್ಸಾಹ ಇಮ್ಮಡಿಯಾಗುವುದಂತೂ ಸತ್ಯ.

2023ರ ಐಪಿಎಲ್ ಋತು ಆರಂಭದೊಂದಿಗೆ, ಪಂದ್ಯಾವಳಿಯ ಟಿವಿ ಮತ್ತು ಡಿಜಿಟಲ್ ಸ್ಟ್ರೀಮಿಂಗ್ ಹಕ್ಕುಗಳನ್ನು ಹೊಂದಿರುವ ಪ್ರಸಾರಕ ಮಾಧ್ಯಮ ಸಂಸ್ಥೆಗಳು ಸ್ಪರ್ಧೆಗೆ ಬೀಳಲಿವೆ.
Jio Cinema ಮತ್ತು Star Sports ಎರಡೂ ತಮ್ಮ ತಮ್ಮ ಪ್ಲಾಟ್‌ಫಾರ್ಮ್‌ಗಳು ಮತ್ತು ಚಾನೆಲ್‌ಗಳಲ್ಲಿ 2023ರ ಐಪಿಎಲ್ ಪಂದ್ಯಾವಳಿಯನ್ನು ನೇರಪ್ರಸಾರ ಮಾಡಲಿವೆ. ಇದೇ ವೇಳೆ ಟಿ20 ಲೀಗ್ ಪ್ರಾರಂಭವಾಗುತ್ತಿದ್ದಂತೆ ಎರಡೂ ಮಾಧ್ಯಮಗಳು ವಿಭಿನ್ನ ವೀಕ್ಷಕ ವಿವರಣೆಗಾರರನ್ನು ನೇಮಿಸಿವೆ.
Commentators for JioCinema in IPL 2023. pic.twitter.com/0G1tXc7TVo
— Johns. (@CricCrazyJohns) March 29, 2023
ಈ ವರ್ಷದ ಐಪಿಎಲ್ ಪಂದ್ಯಾವಳಿಯ ಡಿಜಿಟಲ್ ಹಕ್ಕುಗಳನ್ನು ಖರೀದಿಸಿರುವ ಜಿಯೋ ಸಿನಿಮಾ, ಮುಂಬರುವ ಐಪಿಎಲ್ ಆವೃತ್ತಿಗೆ ತನ್ನ ಕಾಮೆಂಟೇಟರ್ಸ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಕನ್ನಡ ಸೇರಿದಂತೆ ಇಂಗ್ಲಿಷ್, ಹಿಂದಿ, ಮರಾಠಿ, ಗುಜರಾತಿ, ಭೋಜ್‌ಪುರಿ, ಬೆಂಗಾಲಿ, ಒರಿಯಾ, ಮಲಯಾಳಂ, ತಮಿಳು, ತೆಲುಗು ಮತ್ತು ಪಂಜಾಬಿ ಭಾಷೆಗಳಲ್ಲಿ ವೀಕ್ಷಕ ವಿವರಣೆಗಾರರನ್ನು ಹೆಸರಿಸಿದೆ.
ಕ್ರಿಕೆಟ್ ಜಗತ್ತಿನ ಅನೇಕ ದೊಡ್ಡ ಹೆಸರುಗಳು ಅವರ ವಿವಿಧ ಭಾಷೆಗಳಲ್ಲಿ ಕಾಮೆಂಟೇಟರಿ ತಂಡಗಳ ಭಾಗವಾಗಿರುತ್ತಾರೆ. ಕ್ರಿಸ್ ಗೇಲ್ ಮತ್ತು ಎಬಿ ಡಿವಿಲಿಯರ್ಸ್ ಅವರಂತಹ ಮಾಜಿ ಆಟಗಾರರು ಇಂಗ್ಲಿಷ್ ಕಾಮೆಂಟರಿ ತಂಡದ ಭಾಗವಾಗಿದ್ದಾರೆ. ಇನ್ನು ಜಹೀರ್ ಖಾನ್, ಸುರೇಶ್ ರೈನಾ ಮತ್ತು ಅನಿಲ್ ಕುಂಬ್ಳೆ ಅವರಂತಹವರು ಹಿಂದಿ ಕಾಮೆಂಟರಿ ತಂಡದ ಭಾಗವಾಗಿದ್ದಾರೆ.

ಕೇದಾರ್ ಜಾಧವ್ ಮತ್ತು ಧವನ್ ಕುಲಕರ್ಣಿ ಮರಾಠಿ ತಂಡದ ಭಾಗವಾಗಲಿದ್ದರೆ, ಹನುಮ ವಿಹಾರಿ ಜಿಯೋ ಸಿನಿಮಾದ ತೆಲುಗು ಕಾಮೆಂಟೇಟರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಕನ್ನಡ ವೀಕ್ಷಕ ವಿವರಣೆಗಾರರ ಪಟ್ಟಿ
ಕನ್ನಡ ಭಾಷೆಯ ವೀಕ್ಷಕ ವಿವರಣೆಗಾರರ ಪಟ್ಟಿಯಲ್ಲಿ ವೆಂಕಟೇಶ್ ಪ್ರಸಾದ್, ಎಸ್ ಅರವಿಂದ್, ಅಮಿತ್ ವರ್ಮಾ, ವೇದಾ ಕೃಷ್ಣಮೂರ್ತಿ, ಹೆಚ್ ಶರತ್, ಸುಜಯ್ ಶಾಸ್ತ್ರಿ, ದೀಪಕ್ ಚೌಗಲೆ, ರಾಘವೇಂದ್ರ ರಾಜ್, ಸುಮಂತ್ ಭಟ್, ರೀನಾ ಡಿಸೋಜಾ, ಹಿತಾ ಚಂದ್ರಶೇಖರ್ ಮತ್ತು ಅಂಕಿತಾ ಅಮರ್ ಇದ್ದಾರೆ.
ಉದ್ಘಾಟನಾ ಪಂದ್ಯದಲ್ಲಿ ಹಾಲಿ ಮತ್ತು ಮಾಜಿ ಚಾಂಪಿಯನ್‌ಗಳ ಸೆಣಸಾಟ
2023ರ ಐಪಿಎಲ್‌ನ 16ನೇ ಆವೃತ್ತಿಗೆ ಚಾಲನೆ ಸಿಗುತ್ತಿದ್ದಂತೆಯೇ, ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದ ಹಾಲಿ ಚಾಂಪಿಯನ್ ಗುಜರಾತ್ ಟೈಟನ್ಸ್ ಮತ್ತು ಎಂಎಸ್ ಧೋನಿ ನಾಯಕತ್ವದ ಮಾಜಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಶುಕ್ರವಾರ, ಮಾರ್ಚ್ 31ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸೆಣಸಾಡಲಿವೆ.
ಹಾರ್ದಿಕ್ ಪಾಂಡ್ಯ ಪಡೆ 2022ರ ಐಪಿಎಲ್ ಋತುವಿನ ತಮ್ಮ ಪ್ರದರ್ಶನವನ್ನು ಈ ಬಾರಿಯೂ ಪುನರಾವರ್ತಿಸಲು ಎದುರು ನೋಡುತ್ತಿದೆ. ಕಳೆದ ವರ್ಷ ಗುಜರಾತ್ ಟೈಟನ್ಸ್ ತನ್ನ ಮೊದಲ ಪ್ರವೇಶದಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು.
ಮತ್ತೊಂದೆಡೆ ಚೆನ್ನೈ ಸೂಪರ್ ಕಿಂಗ್ಸ್ ತಂಡ 2021ರಲ್ಲಿ ಚಾಂಪಿಯನ್ ಆಗಿದ್ದರೆ, 2022ರ ಐಪಿಎಲ್‌ನಲ್ಲಿ14 ಪಂದ್ಯಗಳಲ್ಲಿ ಎಂಟು ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ 9ನೇ ಸ್ಥಾನ ಗಳಿಸಿ ಕಳಪೆ ಸಾಧನೆ ಮಾಡಿತು.












Click it and Unblock the Notifications