GT vs MI: ಗಿಲ್, ಮಿಲ್ಲರ್, ಅಭಿನವ್ ಅಬ್ಬರ; ಮುಂಬೈ ಇಂಡಿಯನ್ಸ್‌ಗೆ ಕಠಿಣ ರನ್ ಗುರಿ

ಪ್ರಸ್ತುತ ಜರುಗುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ 35ನೇ ಪಂದ್ಯ ಇಂದು ( ಏಪ್ರಿಲ್ 25 ) ನಡೆಯುತ್ತಿದ್ದು, ಹಾಲಿ ಚಾಂಪಿಯನ್ಸ್ ಗುಜರಾತ್ ಟೈಟನ್ಸ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿವೆ.
ಅಹ್ಮದಾಬಾದ್‌ನ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಟಾಸ್ ಗೆದ್ದ ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಫೀಲ್ಡಿಂಗ್ ಆರಿಸಿಕೊಂಡು ಎದುರಾಳಿ ಗುಜರಾತ್ ಟೈಟನ್ಸ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.
ಅದರಂತೆ ಮೊದಲು ಬ್ಯಾಟಿಂಗ್ ಮಾಡಿರುವ ಗುಜರಾತ್ ಟೈಟನ್ಸ್ ಶುಭ್‌ಮನ್ ಗಿಲ್, ಅಭಿನವ್ ಮನೋಹರ್ ಹಾಗೂ ಡೇವಿಡ್ ಮಿಲ್ಲರ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 207 ರನ್ ಕಲೆಹಾಕಿದ್ದು ಮುಂಬೈ ಇಂಡಿಯನ್ಸ್ ತಂಡಕ್ಕೆ ಗೆಲ್ಲಲು 208 ರನ್‌ಗಳ ಕಠಿಣ ಗುರಿಯನ್ನು ನೀಡಿದೆ.
ಗುಜರಾತ್ ಟೈಟನ್ಸ್ ತಂಡದ ಪರ ಆರಂಭಿಕ ಆಟಗಾರರಾಗಿ ವೃದ್ಧಿಮಾನ್ ಸಹಾ ಹಾಗೂ ಶುಭ್‌ಮನ್ ಕಣಕ್ಕಿಳಿದರು. ಸಹಾ 4 ರನ್ ಗಳಿಸಿ ಔಟ್ ಆದರೆ ಶುಭ್‌ಮನ್ ಗಿಲ್ 34 ಎಸೆತಗಳಲ್ಲಿ 56 ರನ್ ಬಾರಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ 14 ಎಸೆತಗಳಲ್ಲಿ 13 ಹಾಗೂ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಜಯ್ ಶಂಕರ್ 16 ಎಸೆತಗಳಲ್ಲಿ 19 ರನ್ ಕಲೆಹಾಕಿದರು. ಹೀಗೆ ಮಧ್ಯದಲ್ಲಿ ರನ್ ವೇಗದಲ್ಲಿ ಕುಸಿತ ಕಂಡಿದ್ದ ಗುಜರಾತ್ ಟೈಟನ್ಸ್ ತಂಡಕ್ಕೆ ಡೇವಿಡ್ ಮಿಲ್ಲರ್ ಹಾಗೂ ಅಭಿನವ್ ಮನೋಹರ್ ಆಸರೆಯಾದರು.
ಮಿಲ್ಲರ್ 22 ಎಸೆತಗಳಲ್ಲಿ 46 ರನ್ ಬಾರಿಸಿದರೆ, ಅಭಿನವ್ ಮನೋಹರ್ 21 ಎಸೆತಗಳಲ್ಲಿ 42 ರನ್ ಬಾರಿಸಿದರು. ಅಂತಿಮ ಹಂತದಲ್ಲಿ ಅಬ್ಬರಿಸಿದ ರಾಹುಲ್ ತೆವಾಟಿಯಾ 5 ಎಸೆತಗಳಲ್ಲಿ ಅಜೇಯ 20 ರನ್ ಹಾಗೂ ರಶೀದ್ ಖಾನ್ 1 ಎಸೆತದಲ್ಲಿ ಅಜೇಯ 2 ರನ್ ಬಾರಿಸಿದರು.
ಇನ್ನು ಮೊದಲ 13 ಓವರ್‌ಗಳಲ್ಲಿ 4 ವಿಕೆಟ್ 103 ರನ್ ಕಲೆಹಾಕಿದ್ದ ಗುಜರಾತ್ ಟೈಟನ್ಸ್ ಕೊನೆಯ 7 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 104 ರನ್ ಚಚ್ಚಿಹಾಕಿತು. ಡೇವಿಡ್ ಮಿಲ್ಲರ್, ಅಭಿವನ್ ಮನೋಹರ್ ಹಾಗೂ ರಾಹುಲ್ ತೆವಾಟಿಯಾ ಅಬ್ಬರದ ಬ್ಯಾಟಿಂಗ್ ಈ ಮಟ್ಟದ ರನ್ ಗಳಿಕೆಗೆ ಕಾರಣವಾಯಿತು.
ಮುಂಬೈ ಇಂಡಿಯನ್ಸ್ ಪರ ಅರ್ಜುನ್ ತೆಂಡೂಲ್ಕರ್, ಜೇಸನ್ ಬೆಹ್ರೆಂಡ್ರಾಫ್, ರಿಲೆ ಮೆರೆಡಿತ್ ಹಾಗೂ ಕುಮಾರ್ ಕಾರ್ತಿಕೇಯ ತಲಾ ಒಂದೊಂದು ವಿಕೆಟ್ ಪಡೆದರೆ, ಪಿಯೂಷ್ ಚಾವ್ಲಾ ಎರಡು ವಿಕೆಟ್ ಪಡೆದರು.
ತಂಡಗಳ ಆಡುವ ಬಳಗಗಳು:
ಮುಂಬೈ ಇಂಡಿಯನ್ಸ್ ಆಡುವ ಬಳಗ: ರೋಹಿತ್ ಶರ್ಮಾ(ನಾಯಕ), ಇಶಾನ್ ಕಿಶನ್ (ವಿಕೆಟ್ ಕೀಪರ್), ಕ್ಯಾಮೆರಾನ್ ಗ್ರೀನ್, ಸೂರ್ಯಕುಮಾರ್ ಯಾದವ್, ಟಿಮ್ ಡೇವಿಡ್, ನೆಹಾಲ್ ವಧೇರಾ, ಕುಮಾರ್ ಕಾರ್ತಿಕೇಯ, ಅರ್ಜುನ್ ತೆಂಡೂಲ್ಕರ್, ರಿಲೆ ಮೆರೆಡಿತ್, ಪಿಯೂಷ್ ಚಾವ್ಲಾ, ಜೇಸನ್ ಬೆಹ್ರೆಂಡಾರ್ಫ್
ಗುಜರಾತ್ ಟೈಟನ್ಸ್ ಆಡುವ ಬಳಗ: ವೃದ್ಧಿಮಾನ್ ಸಹಾ(ವಿಕೆಟ್ ಕೀಪರ್), ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ(ನಾಯಕ), ವಿಜಯ್ ಶಂಕರ್, ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ನೂರ್ ಅಹ್ಮದ್, ಮೋಹಿತ್ ಶರ್ಮಾ












Click it and Unblock the Notifications