DC vs SRH: ಮುಖಾಮುಖಿ ಪಂದ್ಯಗಳಲ್ಲಿ ಹೆಚ್ಚು ಪಂದ್ಯ ಗೆದ್ದಿರುವ ಬಲಿಷ್ಠ ತಂಡ ಯಾವುದು?

ಇಂದು ( ಏಪ್ರಿಲ್ 29 ) ಪ್ರಸ್ತುತ ನಡೆಯುತ್ತಿರುವ ಹದಿನಾರನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಎರಡು ಪಂದ್ಯಗಳು ಜರುಗಲಿವೆ. ಮೊದಲ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಗುಜರಾತ್ ಟೈಟನ್ಸ್ ತಂಡಗಳು ಮುಖಾಮುಖಿಯಾದರೆ, ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ.
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವಿನ ಪಂದ್ಯ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಲೀಗ್ ಹಂತದ 40ನೇ ಪಂದ್ಯವಾಗಿದ್ದು, ದೆಹಲಿಯ ಅರುಣ್ ಜೇಟ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಇನ್ನು ಟೂರ್ನಿಯಲ್ಲಿ ಇಲ್ಲಿಯವರೆಗೂ ತಲಾ 7 ಪಂದ್ಯಗಳಲ್ಲಿ ಕಣಕ್ಕಿಳಿದಿರುವ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಲಾ 2 ಪಂದ್ಯಗಳಲ್ಲಿ ಗೆದ್ದಿವೆ ಹಾಗೂ ಉಳಿದ 5 ಪಂದ್ಯಗಳನ್ನು ಎರಡೂ ತಂಡಗಳು ಸೋತಿವೆ. ಹೀಗೆ ಈ ಎರಡೂ ತಂಡಗಳೂ ಸಹ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹೆಚ್ಚು ಪಂದ್ಯಗಳನ್ನು ಸೋತು ಕಳಪೆ ತಂಡಗಳು ಎನಿಸಿಕೊಂಡಿವೆ.
ಹೆಚ್ಚು ನೆಟ್ ರನ್ ರೇಟ್ ಇರುವ ಕಾರಣ ಸನ್ ರೈಸರ್ಸ್ ಹೈದರಾಬಾದ್ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನದಲ್ಲಿದ್ದು, ಡೆಲ್ಲಿ ಕ್ಯಾಪಿಟಲ್ಸ್ ಹತ್ತನೇ ಸ್ಥಾನದಲ್ಲಿದೆ. ಒಟ್ಟಿನಲ್ಲಿ ಇತ್ತಂಡಗಳ ನಡುವಿನ ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನವನ್ನು ಪಡೆದುಕೊಳ್ಳಲಿದೆ.
ಹೀಗೆ ಸೋತು ಸುಣ್ಣವಾಗಿರುವ ತಂಡಗಳ ಕಾಳಗ ಎನಿಸಿಕೊಂಡಿರುವ ಈ ಪಂದ್ಯದಲ್ಲಿ ಯಾವ ತಂಡ ಗೆಲ್ಲಬಹುದು ಎಂಬ ಚರ್ಚೆ ಶುರುವಾಗಿದ್ದು, ಇತ್ತಂಡಗಳ ನಡುವೆ ಇಲ್ಲಿಯರೆಗೂ ಎಷ್ಟು ಪಂದ್ಯಗಳು ನಡೆದಿವೆ ಹಾಗೂ ಯಾವ ತಂಡ ಹೆಚ್ಚು ಪಂದ್ಯಗಳನ್ನು ಗೆದ್ದು ಬಲಿಷ್ಠವಾಗಿದೆ ಎಂಬ ಮಾಹಿತಿ ಈ ಕೆಳಕಂಡಂತಿದೆ..
ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ಇಲ್ಲಿಯವರೆಗೂ ಒಟ್ಟು 22 ಮುಖಾಮುಖಿ ಪಂದ್ಯಗಳು ಜರುಗಿವೆ. ಈ ಪೈಕಿ ಸನ್ ರೈಸರ್ಸ್ ಹೈದರಾಬಾದ್ 11 ಪಂದ್ಯಗಳಲ್ಲಿ ಗೆದ್ದಿದ್ದು, ಡೆಲ್ಲಿ ಕ್ಯಾಪಿಟಲ್ಸ್ 11 ಪಂದ್ಯಗಳಲ್ಲಿ ಗೆದ್ದಿದೆ. ಈ ಮೂಲಕ ಇತ್ತಂಡಗಳ ಮುಖಾಮುಖಿಯಲ್ಲಿ ಎರಡೂ ತಂಡಗಳು ಸಹ ಸಮಬಲ ಸಾಧಿಸಿವೆ.
ಇನ್ನು ಈ ಪಂದ್ಯ ಇತ್ತಂಡಗಳ ನಡುವೆ ಈ ಬಾರಿಯ ಆವೃತ್ತಿಯಲ್ಲಿ ನಡೆಯಲಿರುವ ಎರಡನೇ ಮುಖಾಮುಖಿ ಪಂದ್ಯವಾಗಿದ್ದು, ಮೊದಲ ಪಂದ್ಯ ಏಪ್ರಿಲ್ 24ರಂದು ಜರುಗಿತ್ತು. ಈ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ 7 ರನ್‌ಗಳ ಗೆಲುವನ್ನು ಕಂಡಿತ್ತು.
ಅಲ್ಲದೇ ಕಳೆದ ವರ್ಷದ ಇಂಡಿಯನ್ ಪ್ರೀಮಿಯರ್ ಲೀಗ್ ಮುಖಾಮುಖಿಯಾಗಿದ್ದಾಗಲೂ ಸಹ ಸನ್ ರೈಸರ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ 21 ರನ್‌ಗಳ ಗೆಲುವು ಕಂಡಿತ್ತು. 2021ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ನಡೆದಿದ್ದ ಎರಡೂ ಪಂದ್ಯಗಳಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ಗೆಲುವು ಕಂಡಿತ್ತು. ಮೊದಲ ಪಂದ್ಯದಲ್ಲಿ ಸೂಪರ್ ಓವರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಗೆದ್ದಿತ್ತು. ಎರಡನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್‌ಗಳ ಗೆಲುವನ್ನು ಕಂಡಿತ್ತು. ಈ ಮೂಲಕ ಕಳೆದ ನಾಲ್ಕು ಪಂದ್ಯಗಳಲ್ಲಿಯೂ ಡೆಲ್ಲಿ ಕ್ಯಾಪಿಟಲ್ಸ್ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಗೆಲ್ಲುವ ಅವಕಾಶ ನೀಡದೇ ಮೇಲುಗೈ ಸಾಧಿಸಿದೆ.












Click it and Unblock the Notifications