IPL 2023: ಐಪಿಎಲ್ ಆರಂಭಕ್ಕೆ ಮುನ್ನವೇ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟರ್ !
ವಿಶಾಖಪಟ್ಟಣದಲ್ಲಿ ನಡೆದ ಭಾರತದ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. 118 ರನ್‌ಗಳ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಕೇವಲ 11 ಓವರ್ ಗಳಲ್ಲಿ ವಿಕೆಟ್ ಕಳೆದುಕೊಳ್ಳದೆ 121 ರನ್ ಗಳಿಸುವ ಮೂಲಕ 10 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು.
ಡೇವಿಡ್ ವಾರ್ನರ್ ಬದಲಾಗಿ ಆರಂಭಿಕರಾಗಿ ಕಣಕ್ಕಿಳಿದ ಮಿಚೆಲ್ ಮಾರ್ಷ್ ಟ್ರಾವಿಸ್ ಹೆಡ್ ಜೊತೆಗೂಡಿ ಸ್ಫೋಟಕ ಇನ್ನಿಂಗ್ಸ್ ಆಡಿದರು. ಮಿಚೆಲ್ ಮಾರ್ಷ್ 36 ಎಸೆತಗಳಲ್ಲಿ 6 ಬೌಂಡರಿ 6 ಭರ್ಜರಿ ಸಿಕ್ಸರ್ ಸಹಿತ 66 ರನ್ ಗಳಿಸುವ ಮೂಲಕ ಮಿಂಚಿದರು. ಸಂಪೂರ್ಣವಾಗಿ ಫಿಟ್ ಆಗಿಲ್ಲದಿದ್ದರೂ ಅವರು ಅಪಾಯಕಾರಿ ಬ್ಯಾಟರ್ ಆಗಿದ್ದಾರೆ.

ಮಿಚೆಲ್ ಮಾರ್ಷ್ ಇನ್ನಿಂಗ್ಸ್ ನೋಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಭಿಮಾನಿಗಳು ಖುಷಿಯಾಗಿದ್ದಾರೆ. ಮಿಚೆಲ್ ಮಾರ್ಷ್ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಕಣಕ್ಕಿಳಿಯಲಿದ್ದು, ಅವರಿಂದ ಸ್ಫೋಟಕ ಬ್ಯಾಟಿಂಗ್ ನಿರೀಕ್ಷೆ ಮಾಡಲಾಗಿದೆ. ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಆಡುತ್ತಿದ್ದು, ಮಾರ್ಷ್ ಉತ್ತಮ ಫಾರ್ಮ್‌ನಲ್ಲಿರುವುದು ತಂಡಕ್ಕೆ ವರದಾನವಾಗಿದೆ.
ಭಾರತದ ವಿರುದ್ಧ ಸ್ಫೋಟಕ ಅರ್ಧಶತಕ ಗಳಿಸುವ ಮೂಲಕ ಎದುರಾಳಿ ತಂಡಗಳಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಈ ಬಾರಿ ಐಪಿಎಲ್‌ನಲ್ಲಿ ನನ್ನನ್ನು ಲಘುವಾಗಿ ಪರಿಗಣಿಸಬೇಡಿ ಎನ್ನುವ ಸೂಚನೆಯನ್ನು ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಡೇವಿಡ್ ವಾರ್ನರ್ ನಾಯಕರಾಗಿರುವುದರಿಂದ ಮಿಚೆಲ್ ಮಾರ್ಷ್‌ಗೆ ಹೆಚ್ಚಿನ ಬೆಂಬಲ ಕೂಡ ಸಿಗಲಿದೆ.
ಅತ್ಯುತ್ತಮ ಫಾರ್ಮ್‌ನಲ್ಲಿರುವ ಮಾರ್ಷ್
ಗಾಯಕ್ಕೆ ತುತ್ತಾಗಿದ್ದ ಮಿಚೆಲ್ ಮಾರ್ಷ್ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ, ಆದರೂ ಭಾರತದ ವಿರುದ್ಧ ಏಕದಿನ ಸರಣಿಯಲ್ಲಿ ಆಡುತ್ತಿದ್ದಾರೆ. ಸರಣಿಯ ಮೊದಲ ಪಂದ್ಯದಲ್ಲೇ ಅವರು 65 ಎಸೆತಗಳಲ್ಲಿ 81 ರನ್ ಗಳಿಸಿ ಮಿಂಚಿದ್ದರು. ತಂಡದ ಎಲ್ಲಾ ಆಟಗಾರರು ರನ್ ಗಳಿಸುವಲ್ಲಿ ವಿಫಲವಾದರೂ ಮಾರ್ಷ್ ಮಾತ್ರ ಸ್ಫೋಟಕ ಇನ್ನಿಂಗ್ಸ್ ಆಡಿದ್ದರು.

ಎರಡನೇ ಪಂದ್ಯದಲ್ಲಿ ಕೂಡ ಅದ್ಭುತ ಬ್ಯಾಟಿಂಗ್ ಮುಂದುವರೆಸುವ ಮೂಲಕ ತಾನೆಂತಹ ಅಪಾಯಕಾರಿ ಬ್ಯಾಟರ್ ಎನ್ನುವ ಮುನ್ಸೂಚನೆ ನೀಡಿದ್ದಾರೆ. ಎರಡನೇ ಏಕದಿನ ಪಂದ್ಯದಲ್ಲಿ 36 ಎಸೆತಗಳಲ್ಲಿ 6 ಬೌಂಡರಿ 6 ಸಿಕ್ಸರ್ ಸಹಿತ 183.33 ಸ್ಟ್ರೈಕ್‌ರೇಟ್‌ನಲ್ಲಿ ಅಜೇಯ 66 ರನ್ ಗಳಿಸುವ ಮೂಲಕ ಮಿಂಚಿದ್ದಾರೆ. ಎರಡೂ ಪಂದ್ಯಗಳಲ್ಲಿ ಒಟ್ಟು 147 ರನ್ ಗಳಿಸಿ, ಸರಣಿಯಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿಕೊಂಡಿದ್ದಾರೆ.
ಡೇವಿಡ್ ವಾರ್ನರ್ ನಾಯಕ
ರಿಷಬ್ ಪಂತ್ ಕಾರು ಅಪಘಾತದಲ್ಲಿ ಗಾಯಗೊಂಡ ಬಳಿಕ ಐಪಿಎಲ್‌ನಿಂದ ಹೊರಗುಳಿದರು. ಪಂತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಮುನ್ನಡೆಸುವ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕಾಗಿ 2016ರಲ್ಲಿ ಕಪ್ ಗೆದ್ದುಕೊಟ್ಟಿರುವ ವಾರ್ನರ್ ಐಪಿಎಲ್‌ನ ಯಶಸ್ವಿ ನಾಯಕರಲ್ಲಿ ಒಬ್ಬರು.
ಸಾಕಷ್ಟು ಅನುಭವ ಹೊಂದಿರುವ ವಾರ್ನರ್ ಯಶಸ್ವಿಯಾಗಿ ಡೆಲ್ಲಿ ತಂಡವನ್ನು ಮುನ್ನಡೆಸುತ್ತಾರೆ ಎಂದು ನಂಬಲಾಗಿದೆ. ಉಪನಾಯಕನಾಗಿ ಯಶಸ್ವೀ ಆಲ್‌ರೌಂಡರ್ ಅಕ್ಷರ್ ಪಟೇಲ್ ಆಯ್ಕೆಯಾಗಿದ್ದಾರೆ. ಬಲಿಷ್ಠ ತಂಡವನ್ನೇ ಹೊಂದಿರುವ ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲನೇ ಪಂದ್ಯದಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಏಪ್ರಿಲ್ 1ರಂದು ಶನಿವಾರ ಸಂಜೆ 7.30ಕ್ಕೆ ಪಂದ್ಯ ಆರಂಭವಾಗಲಿದೆ.












Click it and Unblock the Notifications