IPL 2023: ಈ ತಂಡ ಪ್ಲೇ ಆಫ್ ಸನಿಹಕ್ಕೂ ಬರಲ್ಲ ಎಂದ ಆಕಾಶ್ ಚೋಪ್ರಾ
ಬಹು ನಿರೀಕ್ಷಿತ ಐಪಿಎಲ್ 16ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದೆ. ಎಲ್ಲಾ 10 ತಂಡಗಳು ಈಗಾಗಲೆ ಪ್ರಶಸ್ತಿಗಾಗಿ ಸೆಣೆಸಲು ಸಿದ್ಧವಾಗಿವೆ. 2023ರ ಐಪಿಎಲ್ ಮಿನಿ ಹರಾಜಿನಲ್ಲಿ ಎಲ್ಲಾ ತಂಡಗಳು ಪ್ರಮುಖ ಆಟಗಾರರನ್ನು ಖರೀದಿ ಮಾಡಿವೆ. ಸದ್ಯ ಎಲ್ಲಾ ತಂಡಗಳು ಮೇಲ್ನೋಟಕ್ಕೆ ಬಲಿಷ್ಠವಾಗಿ ಕಾಣಿಸುತ್ತಿವೆ.
ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಈ ಬಾರಿ ರಿಷಭ್ ಪಂತ್ ಅನುಪಸ್ಥಿತಿ ದೊಡ್ಡ ಹಿನ್ನಡೆಯಾಗಿದೆ. ಪಂತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾದ ಸ್ಫೋಟಕ ಬ್ಯಾಟರ್ ಡೇವಿಡ್ ವಾರ್ನರ್ ಅವರನ್ನು 2023ರ ಐಪಿಎಲ್‌ನಲ್ಲಿ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಅತ್ಯುತ್ತಮ ಫಾರ್ಮ್‌ನಲ್ಲಿ ಇರುವ ಆಲ್ ರೌಂಡರ್ ಅಕ್ಷರ್ ಪಟೇಲ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಉಪನಾಯಕನಾಗಿ ನೇಮಕವಾಗಿದ್ದಾರೆ. ಮಿಚೆಲ್ ಮಾರ್ಷ್, ಅನ್ರಿಚ್ ನೊಕಿಯಾ, ರೋವ್ಮೆನ್ ಪೊವೆಲ್, ಪೃಥ್ವಿ ಶಾ ರಂತಹ ಆಟಗಾರರು ತಂಡದಲ್ಲಿದ್ದಾರೆ.
ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ಮಾತ್ರ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ಈ ಬಾರಿಯ ಐಪಿಎಲ್ ನಲ್ಲಿ ಪ್ಲೇ ಆಫ್ ಸನಿಹಕ್ಕೆ ಕೂಡ ಬರುವುದಿಲ್ಲ ಎಂದು ಹೇಳಿದ್ದಾರೆ. ಮೇಲ್ನೋಟಕ್ಕೆ ತಂಡ ಬಲಿಷ್ಠವಾಗಿದ್ದರೂ ತಂಡದಲ್ಲಿ ಸಮತೋಲನದ ಕೊರತೆ ಇದೆ ಎಂದು ಆಕಾಶ್ ಚೋಪ್ರಾ ಹೇಳಿದರು.

ಕಳೆದ ಬಾರಿ ಕೂಡ ಪ್ಲೇ ಆಫ್ ತಲುಪಲು ವಿಫಲ
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿರುವ ಆಟಗಾರರಿಗೆ ತಮ್ಮ ಜವಾಬ್ದಾರಿಯ ಬಗ್ಗೆ ಸ್ಪಷ್ಟತೆ ಇಲ್ಲದಿರುವ ಕಾರಣ ಅವರ ಟ್ರೋಫಿ ಗೆಲ್ಲುವ ಕನಸು ಈ ಬಾರಿ ಕೂಡ ಈಡೇರುವುದಿಲ್ಲ ಎಂದು ಆಕಾರ್ಶ ಚೋಪ್ರಾ ಹೇಳಿದ್ದಾರೆ. ಕಳೆದ ಬಾರಿ 10 ತಂಡಗಳ ಹಣಾಹಣಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್‌ಗೆ ಅರ್ಹತೆ ಪಡೆಯುವಲ್ಲಿ ವಿಫಲವಾಗಿತ್ತು. 7 ಗೆಲುವು 7 ಸೋಲುಗಳ ಮೂಲಕ ಪಾಯಿಂಟ್ ಪಟ್ಟಿಯಲ್ಲಿ 7 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು.
"ನಾಲ್ಕನೇ ಕ್ರಮಾಂಕದಲ್ಲಿ ಮನೀಶ್ ಪಾಂಡೆರವರನ್ನು ಹೊಂದಿರಬೇಕು. ತಂಡದಲ್ಲಿ ಕೀಪರ್ ಯಾರು ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ. ರಿಲೀ ರೋಸ್ಸೋವ್, ರೋವ್ಮನ್ ಪೊವೆಲ್ 5 ಅಥವಾ 6ನೇ ಕ್ರಮಾಂಕದಲ್ಲಿ ಆಡುತ್ತಾರೆಯೇ ನೋಡಬೇಕು. ಸರ್ಫರಾಜ್ ಖಾನ್ ವಿಕೆಟ್ ಕೀಪಿಂಗ್ ಮಾಡ್ತಾರ ನೋಡಬೇಕಿದೆ." ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ ಗೊಂದಲಗಳಿದೆ
ಡೆಲ್ಲಿ ಕ್ಯಾಪಿಟಲ್ಸ್ ತಂಡದಲ್ಲಿ ಬೌಲಿಂಗ್ ವಿಭಾಗದಲ್ಲಿ ಕೂಡ ಹಲವು ಗೊಂದಲಗಳಿಗೆ ಎಂದು ಹೇಳಿದ್ದಾರೆ. 7ನೇ ಕ್ರಮಾಂಕದಲ್ಲಿ ಅಕ್ಷರ್ ಪಟೇಲ್ ಇರುತ್ತಾರೆ. ನಂತರ ಕುಲದೀಪ್ ಯಾದವ್ ತಂಡದಲ್ಲಿ ಅವಕಾಶ ಪಡೆಯಬಹುದು. ಮಿಚೆಲ್ ಮಾರ್ಷ್ ಬೌಲಿಂಗ್ ಮಾಡುವುದು ಅನುಮಾನವಾಗಿದೆ. ತಂಡಕ್ಕೆ ಮೂವರು ವೇಗಿಗಳು ಬೇಕಾಗಿದೆ. ಅನ್ರಿಚ್ ನೊಕಿಯಾ, ಚೇತನ್ ಸಕಾರಿಯಾ, ಮುಖೇಶ್ ಕುಮಾರ್ ಅಥವಾ ಇಶಾಂತ್ ಶರ್ಮಾರನ್ನು ಆಯ್ಕೆಗೆ ಪರಿಗಣಿಸಬಹುದು" ಎಂದು ಹೇಳಿದ್ದಾರೆ.
"ಕೇವಲ ನಾಲ್ಕು ತಂಡಗಳು ಮಾತ್ರ ಇದುವರೆಗೆ ಟ್ರೋಫಿಯನ್ನು ಗೆದ್ದಿಲ್ಲ. ಪಂಜಾಬ್, ದೆಹಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್. ದೆಹಲಿ ಕ್ಯಾಪಿಟಲ್ಸ್ ಫೈನಲ್‌ವರೆಗೆ ತಲುಪಿದೆ ಆದರೆ ಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಆದರೆ ಈ ಆವೃತ್ತಿಯಲ್ಲಿ ಅವರು ಪ್ಲೇ ಆಫ್ ಸನಿಹ ಕೂಡ ಬರುತ್ತಾರೆ ಎನಿಸುವುದಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.












Click it and Unblock the Notifications