IPL Playoff: RCB ಸೇರಿದಂತೆ ಮೂರು ತಂಡಗಳಿಂದ ಎರಡು ಸ್ಥಾನಕ್ಕಾಗಿ ಫೈಟ್
ಐಪಿಎಲ್ 2024 ಪ್ಲೇ ಆಫ್ ಸಮೀಕರವು ಪಂದ್ಯದಿಂದ ಪಂದ್ಯಕ್ಕೆ ಚೇಂಜ್ ಆಗುತ್ತಿದೆ. ಮಂಗಳವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಲಖ್ನೋ ಸೂಪರ್ ಜೈಂಟ್ಸ್ ನಡುವಿನ ಪಂದ್ಯದಲ್ಲಿ, ಪಂತ್ ಪಡೆ ಜಯ ಸಾಧಿಸುತ್ತಿದ್ದಂತೆ, ಎಲ್‌ಎಸ್‌ಜಿ ಕನಸು ಕಮರಿದೆ. ಡೆಲ್ಲಿ ಸಹ ಪ್ಲೇ ಆಫ್ ರೇಸ್‌ನಿಂದ ಆಲ್ ಮೋಸ್ಟ್ ಹೊರಕ್ಕೆ ಹೋಗಿದೆ.
ಮಂಗಳವಾರ ನಡೆದ ಐಪಿಎಲ್ ಪಂದ್ಯದ ಬಳಿಕ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್‌ಗೆ ಪ್ರವೇಶ ಪಡೆದ ಎರಡನೇ ತಂಡ ಎಂಬ ಹೆಗ್ಗಳಿಕೆಯನ್ನು ತನ್ನದಾಗಿಸಿಕೊಂಡಿದೆ. ಆರ್‌ಆರ್ ಆಡಿದ 12 ಪಂದ್ಯಗಳಲ್ಲಿ 8 ಜಯ, 4 ಸೋಲು ಕಂಡಿದ್ದು 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದು, ಪ್ಲೇ ಆಫ್‌ಗೆ ಕ್ವಾಲಿಫೈ ಆಗಿದೆ. ಇನ್ನು ಉಳಿದ ಎರಡು ಸ್ಲಾಟ್‌ಗೆ ಮೂರು ತಂಡಗಳು ಫೈಟ್ ನಡೆಸುತ್ತಿವೆ.

ಯಾವ ತಂಡಕ್ಕೆ ಎಷ್ಟನೇ ಸ್ಥಾನ?
ಚೆನ್ನೈ ಸೂಪರ್ ಕಿಂಗ್ಸ್ ಆಡಿದ 13 ಪಂದ್ಯಗಳಲ್ಲಿ 7 ಜಯ, 6 ಸೋಲು ಕಂಡಿದ್ದು 14 ಅಂಕಗಳನ್ನು ಕಲೆ ಹಾಕಿದೆ. ಈ ವೇಳೆ ಈ ತಂಡದ ರನ್ ರೇಟ್ +528 ಆಗಿದೆ. ಇನ್ನು ನಾಲ್ಕನೇ ಸ್ಥಾನದಲ್ಲಿ ಎಸ್‌ಆರ್‌ಎಚ್ ತಂಡವಿದ್ದು, ಈ ತಂಡ ಆಡಿದ 12 ಪಂದ್ಯಗಳಲ್ಲಿ 7 ಜಯ, 5 ಸೋಲು ಕಂಡಿದ್ದು, 14 ಅಂಕಗಳನ್ನು ಸೇರಿಸಿದ್ದು, ಈ ತಂಡದ ರನ್ ರೇಟ್ ಸಹ +0.406 ಆಗಿದೆ. ಡೆಲ್ಲಿ ಸದ್ಯ ಅಂಕ ಪಟ್ಟಿಯಲ್ಲಿ 14 ಪಾಯಿಂಟ್ಸ್‌ಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಆದರೆ ನೆಟ್ ರನ್ ರೇಟ್ ಕಳಪೆ ಆಗಿದೆ. ಇನ್ನು ಆರನೇ ಸ್ಥಾನದಲ್ಲಿರುವ ಆರ್‌ಸಿಬಿ ಆಡಿರುವ 13 ಪಂದ್ಯಗಳಲ್ಲಿ ಆರು ಜಯ, 7 ಸೋಲು ಕಂಡಿದ್ದು, 13 ಅಂಕವನ್ನು ಕಲೆ ಹಾಕಿದೆ. ಈ ತಂಡದ ನೆಟ್ ರನ್ ರೇಟ್ +0.387 ಆಗಿದೆ.
ಯಾವ ತಂಡದ ಬಾಗಿಲು ಕ್ಲೋಸ್
ಡೆಲ್ಲಿ ಕ್ಯಾಪಿಟಲ್ಸ್ ತಂಡದ ಬಾಗಿಲು ಆಲ್ ಮೋಸ್ಟ್ ಕ್ಲೋಸ್ ಆಗಿದೆ. ಈ ತಂಡದ ನೆಟ್ ರನ್ ರೇಟ್ -0.377 ಆಗಿದ್ದು, ಬೇರೆ ಯಾವ ತಂಡಗಳು ಸೋತರೂ, ಗೆದ್ದರೂ ಈ ತಂಡ ಪ್ಲೇ ಆಫ್‌ಗೆ ಕ್ವಾಲಿಫಿಕೇಷನ್ ಮಾಡುವುದು ಕಷ್ಟ.
ಯಾವ ತಂಡಕ್ಕಿದೆ ಹೆಚ್ಚಿನ ಅವಕಾಶ?
ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಐಪಿಎಲ್ ಪ್ಲೇ ಆಫ್ ಪ್ರವೇಶಿಸುವ ಹೆಚ್ಚಿನ ಅವಕಾಶಗಳು ಇವೆ. ಈ ತಂಡ ಇನ್ನು ಎರಡೂ ಪಂದ್ಯಗಳನ್ನು ಆಡಬೇಕಿದೆ. ಈ ಎರಡೂ ಪಂದ್ಯಗಳನ್ನು ಎಸ್‌ಆರ್‌ಎಚ್ ಗೆದ್ದುಕೊಂಡಿದ್ದೇ ಆದರೆ ಮೂರನೇ ಸ್ಥಾನಕ್ಕೆ ಬಡ್ತಿ ಪಡೆಯುತ್ತದೆ. ಎಸ್‌ಆರ್‌ಎಚ್ ಗುರುವಾರ ಗುಜರಾತ್ ಟೈಟನ್ಸ್ ವಿರುದ್ಧ ಹಾಗೂ ಭಾನುವಾರದಂದು ಪಂಜಾಬ್ ಕಿಂಗ್ಸ್ ವಿರುದ್ಧ ಆಡಬೇಕಿದೆ. ಈ ಎರಡೂ ಪಂದ್ಯ ಗೆದ್ದರೆ ಸುಲಭವಾಗಿ ಪ್ಲೇ ಆಫ್‌ಗೆ ಪ್ರವೇಶ ಪಡೆಯುತ್ತದೆ. ಒಂದು ವೇಳೆ ಒಂದರಲ್ಲಿ ಸೋತರೂ ಹೆಚ್ಚಿನ ರನ್‌ರೇಟ್‌ನಿಂದ ಗೆಲ್ಲುವುದು ಅವಶ್ಯಕ.

ಚೆನ್ನೈ ಸೂಪರ್ ಕಿಂಗ್ಸ್‌ಗೆ ಅವಕಾಶ ಎಷ್ಟಿದೆ?
ಚೆನ್ನೈ ಕೂಡ 13 ಪಂದ್ಯಗಳಲ್ಲಿ 14 ಅಂಕ ಹೊಂದಿದೆ. ಅವರ ನಿವ್ವಳ ರನ್ ರೇಟ್ 0.528 ಆಗಿದೆ. ಮತ್ತು ಅವರಿಗೆ ಕೇವಲ ಒಂದು ಪಂದ್ಯ ಮಾತ್ರ ಉಳಿದಿದೆ. ಬೆಂಗಳೂರು ವಿರುದ್ಧ ಚೆನ್ನೈ ತಂಡ ಶನಿವಾರ ಗೆದ್ದರೆ ಅರ್ಹತೆ ಪಡೆಯಲಿದೆ. ಒಂದು ವೇಳೆ ಸೋತರೆ, 18 ರನ್‌ಗಳಿಗಿಂತ ಕಡಿಮೆ ಅಂತರದಲ್ಲಿ ಸೋಲಬೇಕು. ಅಂದಾಗ, ಆರ್‌ಸಿಬಿ ನೆಟ್ ರನ್ ರೇಟ್ ಗಿಂತಲೂ ಸಿಎಸ್‌ಕೆ ನೆಟ್ ರನ್ ರೇಟ್ ಬಲಿಷ್ಠವಾಗುತ್ತದೆ.
ಆರ್‌ಸಿಬಿ ವಿರುದ್ಧ ಸೋತರೂ ಪ್ಲೇ ಆಫ್‌ಗೆ ಅವಕಾಶ ಇದೆಯಾ?
ಚೆನ್ನೈ ಸೂಪರ್ ಕಿಂಗ್ಸ್ ಬೆಂಗಳೂರು ವಿರುದ್ಧ ಸೋತರೆ, ರುತುರಾಜ್ ಗಾಯಕ್ವಾಡ್ ಪಡೆ ಎಸ್‌ಆರ್‌ಎಚ್ ತಂಡದ ಫಲಿತಾಂಶದತ್ತ ಚಿತ್ತ ನೀಡಬೇಕು. ಎಸ್‌ಆರ್‌ಎಚ್ ಎರಡೂ ಪಂದ್ಯಗಳಲ್ಲಿ ಸೋತಿದ್ದೇ ಆದರೆ, ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಅವಕಾಶ ಹೆಚ್ಚಿದೆ.
ಆರ್‌ಸಿಬಿ ಪ್ಲೇ ಆಫ್ ಪ್ರವೇಶಿಸುವ ಚಾನ್ಸ್ ಎಷ್ಟಿದೆ?
ಆರ್‌ಸಿಬಿ ತಂಡಕ್ಕೆ ಕೇವಲ ಒಂದು ಪಂದ್ಯ ಮಾತ್ರ ಉಳಿದಿದೆ. ಅವರು ತಮ್ಮ ತವರು ನೆಲದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಪಂದ್ಯವನ್ನು ಮೇ 18 ರಂದು ಆಡಲಿದ್ದಾರೆ. ಸದ್ಯ ಆರ್‌ಸಿಬಿ 12 ಅಂಕ ಹಾಗೂ +0.387 ನೆಟ್ ರನ್ ರೇಟ್ ಹೊಂದಿದೆ. ಒಂದು ವೇಳೆ ಹೈದರಾಬಾದ್ ಮುಂದಿನ ಎರಡೂ ಪಂದ್ಯಗಳಲ್ಲಿ ಒಂದೇ ಒಂದು ಅಂಕ ಗಳಿಸಿದರೂ, ಆರ್‌ಸಿಬಿ ತಂಡಕ್ಕೆ ಜಯ ಸಾಧಿಸುವುದು ಒಂದೇ ಟಾರ್ಗೆಟ್ ಆಗಿರಲಿದೆ.

ಆರ್‌ಸಿಬಿ ಎಷ್ಟು ರನ್‌ಗಳಿಂದ ಚೆನ್ನೈ ತಂಡವನ್ನು ಸೋಲಿಸಬೇಕು?
ಆರ್‌ಸಿಬಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ದ ಕನಿಷ್ಠ 18 ರನ್‌ಗಳಿಂದ ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ. ಒಂದು ವೇಳೆ ಚೆನ್ನೈ ನೀಡಿದ್ದ ಗುರಿಯನ್ನು ಬೆನ್ನು ಹತ್ತುವುದಾದರೆ ಆರ್‌ಸಿಬಿ, 18.1 ಓವರ್‌ಗಳಲ್ಲಿ ಗುರಿಯನ್ನು ಮುಟ್ಟಬೇಕು.
ಆರ್‌ಸಿಬಿ, ಚೆನ್ನೈ ಪಂದ್ಯದ ದಿನ ಮಳೆ ಬಂದರೆ
ಆರ್‌ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವಣ ಪಂದ್ಯ ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ನಡೆಯಲಿದೆ. ಶನಿವಾರ ನಡೆಯಲಿರುವ ಪಂದ್ಯಕ್ಕೆ ಮಳೆ ಕಾಟ ನೀಡಿದರೆ, ಆರ್‌ಸಿಬಿ ಪ್ಲೇ ಆಫ್ ಆಸೆ ಕಮರಿ ಹೋಗುತ್ತದೆ. ಏಕಂದರೆ ಚೆನ್ನೈ, ಎಸ್ಆರ್‌ಎಚ್ ತಂಡಗಳ ಬಳಿ ಈಗಾಗಲೇ 14 ಅಂಕ ಇದೆ. ಬೆಂಗಳೂರು ತಂಡಕ್ಕೆ ಇಷ್ಟು ಅಂಕ ಕಲೆ ಹಾಕಲು ಗೆಲುವು ಒಂದೇ ಮಾನದಂಡವಾಗಿದೆ.












Click it and Unblock the Notifications