ODI World Cup: ಬದಲಾಗುತ್ತಾ ಭಾರತದ ಸೆಮಿಫೈನಲ್ ಪಂದ್ಯದ ಸ್ಥಳ? ಪಾಕಿಸ್ತಾನದ ಮೇಲೆ ನಿಂತಿದೆ ಭವಿಷ್ಯ!
ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಆಡಿರುವ 8 ಪಂದ್ಯಗಳನ್ನು ಗೆದ್ದಿರುವ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡಿದೆ. ಭಾರತ ತಂಡ ಇನ್ನೂ ಒಂದು ಲೀಗ್ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಆಡಬೇಕಿದೆ.
ಮುಂಬೈ ಮತ್ತು ಕೋಲ್ಕತ್ತಾದಲ್ಲಿ ಸೆಮಿಫೈನಲ್ ಪಂದ್ಯಗಳು ನಡೆಯುವುದು ನಿಗದಿಯಾಗಿದೆ. ಈಗಾಗಲೇ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ಸೆಮಿಫೈನಲ್‌ನಲ್ಲಿ ಮುಖಾಮುಖಿಯಾಗುವುದು ಖಚಿತವಾಗಿದೆ. ಭಾರತದ ಎದುರಾಳಿ ಎನ್ನುವುದು ಇನ್ನೂ ತೀರ್ಮಾನವಾಗಿಲ್ಲ.

ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಸೆಮಿಫೈನಲ್‌ಗೆ ಅರ್ಹತೆ ಪಡೆಯುವ ತಂಡದ ವಿರುದ್ಧ ಭಾರತ ಸೆಮಿಫೈನಲ್‌ನಲ್ಲಿ ಆಡಲಿದೆ. ನ್ಯೂಜಿಲೆಂಡ್, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ತಂಡಗಳಿಗೆ ಸೆಮಿಫೈನಲ್ ಪ್ರವೇಶಿಸುವ ಅವಕಾಶವಿದ್ದು, ವಿಶ್ವಕಪ್ ಪಂದ್ಯಾವಳಿ ರೋಚಕತೆ ಪಡೆದುಕೊಂಡಿದೆ.
ಪಾಕಿಸ್ತಾನ ಬಂದರೆ ಬದಲಾಗುತ್ತೆ ಸ್ಥಳ
ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನ ಹೊಂದಿದ್ದರೂ ಭಾರತ ತಂಡ ಸೆಮಿಫೈನಲ್ ಪಂದ್ಯವನ್ನು ಎಲ್ಲಿ ಆಡುತ್ತದೆ ಎಂಬುದರ ಕುರಿತು ಇನ್ನೂ ಸ್ಪಷ್ಟವಾಗಿ ನಿರ್ಧಾರವಾಗಿಲ್ಲ. ಪಾಕಿಸ್ತಾನ ಕ್ರಿಕೆಟ್ ಮಂಡಳಿಯ (ಪಿಸಿಬಿ) ಕೋರಿಕೆಯ ಮೇರೆಗೆ ಪಂದ್ಯಾವಳಿಯ ಮೊದಲು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮತ್ತು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವಿಶಿಷ್ಟ ವ್ಯವಸ್ಥೆಯಿಂದ ಈ ಪರಿಸ್ಥಿತಿ ಎದುರಾಗಿದೆ.
ಪಾಯಿಂಟ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿರುವ ತಂಡವು ಮೊದಲ ಸೆಮಿಫೈನಲ್‌ನಲ್ಲಿ ನಾಲ್ಕನೇ ಸ್ಥಾನ ಪಡೆಯುವ ತಂಡದ ವಿರುದ್ಧ ಸೆಣಸುತ್ತದೆ ಮತ್ತು ಈ ಪಂದ್ಯವನ್ನು ಮುಂಬೈನಲ್ಲಿ ಆಯೋಜಿಸಲಾಗುತ್ತದೆ. ಎರಡನೇ ಮತ್ತು ಮೂರನೇ ಸ್ಥಾನದಲ್ಲಿರುವ ತಂಡಗಳು ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ಆಡಬೇಕಾಗುತ್ತದೆ.
ಆದರೆ, ಪಾಕಿಸ್ತಾನ ಸೆಮಿಫೈನಲ್ ಪ್ರವೇಶಿಸಿದರೆ ಪಂದ್ಯದ ಸ್ಥಳ ಬದಲಾವಣೆ ಆಗುವ ಸಾಧ್ಯತೆ ಇದೆ. ಭದ್ರತಾ ಕಾರಣಗಳಿಗಾಗಿ ಮುಂಬೈ ನಗರದಲ್ಲಿ ಪಾಕಿಸ್ತಾನದ ಯಾವುದೇ ಪಂದ್ಯಗಳನ್ನು ನಡೆಸಬಾರದು ಎಂದು ಪಿಸಿಬಿ ಮನವಿ ಮಾಡಿತ್ತು. ಈ ವಿನಂತಿಗೆ ಬಿಸಿಸಿಐ ಕೂಡ ಒಪ್ಪಿಕೊಂಡಿತ್ತು.
ಪಾಕಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡರೆ, ಮೊದಲ ಸೆಮಿಫೈನಲ್ ಪಂದ್ಯ ನವೆಂಬರ್ 15 ರಂದು ಕೋಲ್ಕತ್ತಾಗೆ ಸ್ಥಳಾಂತರಗೊಳ್ಳುತ್ತದೆ. ಪರಿಣಾಮವಾಗಿ, ಎರಡನೇ ಸೆಮಿಫೈನಲ್ ಅನ್ನು ಮರುದಿನ ಮುಂಬೈನ ವಾಂಖೆಡೆ ಸ್ಟೇಡಿಯಂಗೆ ಸ್ಥಳಾಂತರಿಸಲಾಗುತ್ತದೆ.
ಒಂದು ವೇಳೆ ನ್ಯೂಜಿಲೆಂಡ್ ಅಥವಾ ಅಫ್ಘಾನಿಸ್ತಾನ ಸೆಮಿಫೈನಲ್‌ಗೆ ಅರ್ಹತೆ ಪಡೆದುಕೊಂಡರೆ ಮೊದಲೇ ನಿರ್ಧರಿಸಿದಂತೆ ಸೆಮಿಫೈನಲ್ ಪಂದ್ಯಗಳು ನಡೆಯಲಿದ್ದು, ಭಾರತ ಮುಂಬೈನಲ್ಲಿ ಆಡಲಿದೆ. ಆದರೆ ಇದು ಪಾಕಿಸ್ತಾನದ ಸೆಮಿಫೈನಲ್ ಅರ್ಹತೆ ಮೇಲೆ ನಿಂತಿದೆ.












Click it and Unblock the Notifications