Asia Cup 2023: ಭಾರತ ತಂಡದ ಜೆರ್ಸಿ ಮೇಲೆ ಮೊದಲಬಾರಿಗೆ ಪಾಕಿಸ್ತಾನದ ಹೆಸರು!
ಆಗಸ್ಟ್ 30ರಂದು ಏಷ್ಯಾಕಪ್ 2023ರ ಪಂದ್ಯಾವಳಿ ಆರಂಭವಾಗಲಿದೆ. ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿ ಆಯೋಜನೆ ಮಾಡಲಾಗಿದ್ದು, ಪಾಕಿಸ್ತಾನ ಮತ್ತು ಶ್ರೀಲಂಕಾದಲ್ಲಿ ಪಂದ್ಯಗಳು ನಡೆಯಲಿವೆ. ಭಾರತದ ಎಲ್ಲಾ ಪಂದ್ಯಗಳು ಶ್ರೀಲಂಕಾದಲ್ಲಿ ನಡೆಯಲಿವೆ.
ಏಷ್ಯಾ ಕಪ್ 2023 ರ ಈವೆಂಟ್‌ನಲ್ಲಿ ಮೊದಲ ಬಾರಿಗೆ ಟೀಂ ಇಂಡಿಯಾ ತನ್ನ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರನ್ನು ಧರಿಸಲಿದೆ. ಶ್ರೀಲಂಕಾ ಜೊತೆಗೆ ಏಷ್ಯಾಕಪ್ ಸಹ-ಆತಿಥ್ಯ ವಹಿಸಿರುವ ಪಾಕಿಸ್ತಾನವು ಆಗಸ್ಟ್ 30 ರಂದು ನೇಪಾಳ ವಿರುದ್ಧ ಆಡುವ ಮೂಲಕ ಏಷ್ಯಾ ಕಪ್ 2023 ಪಂದ್ಯಾವಳಿಗೆ ಚಾಲನೆ ಸಿಗಲಿದೆ.

ಪಾಕಿಸ್ತಾನಕ್ಕೆ ಪ್ರಯಾಣಿಸಲು ಆಗಲ್ಲ ಎಂದು ತಿಳಿಸಿದ್ದ ಭಾರತವು ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಪಾಕಿಸ್ತಾನವು ಏಷ್ಯಾಕಪ್ ಪಂದ್ಯಾವಳಿ ಆಯೋಜನೆ ಮಾಡುತ್ತಿರುವ ಕಾರಣ ಭಾರತದ ಜೆರ್ಸಿಯಲ್ಲಿ ಪಾಕಿಸ್ತಾನದ ಹೆಸರು ಇರಲಿದೆ.
ಏಷ್ಯಾ ಕಪ್ 2023ರ ಲೋಗೋದ ಮೇಲೆ ಪಾಕಿಸ್ತಾನದ ಹೆಸರು ಕಾಣಿಸುತ್ತದೆ. ಭಾರತ ತನ್ನ ಮೊದಲ ಪಂದ್ಯವನ್ನು ಸೆಪ್ಟೆಂಬರ್ 2 ರಂದು ಪಾಕಿಸ್ತಾನದ ವಿರುದ್ಧ ಆಡಲಿದೆ. ಈ ಪಂದ್ಯ ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿದೆ. ಏಷ್ಯಾಕಪ್‌ನಲ್ಲಿ ಭಾರತ-ಪಾಕಿಸ್ತಾನ ಮೂರು ಬಾರಿ ಮುಖಾಮುಖಿಯಾಗುವ ಸಾಧ್ಯತೆ ಇದೆ. ಸೂಪರ್ 4 ಮತ್ತು ಫೈನಲ್ ಪ್ರವೇಶಿಸಲು ಎರಡೂ ತಂಡಗಳು ಯಶಸ್ವಿಯಾದರೆ ಅಭಿಮಾನಿಗಳು 15 ದಿನಗಳಲ್ಲಿ ಮೂರು ಬಾರಿ ಭಾರತ-ಪಾಕ್ ನಡುವಿನ ಪಂದ್ಯ ನೋಡಬಹುದು.
ಏಷ್ಯಾಕಪ್ ಗೆಲ್ಲುವ ಉತ್ಸಾಹದಲ್ಲಿ ಭಾರತ
ಕಳೆದ ಬಾರಿ ನಡೆದ ಏಷ್ಯಾಕಪ್ ಪಂದ್ಯಾವಳಿಯಲ್ಲಿ ಫೈನಲ್ ತಲುಪಲು ವಿಫಲವಾಗಿದ್ದ ಭಾರತ ತಂಡ ಈ ಬಾರಿ ಕಪ್ ಗೆಲ್ಲುವ ಉತ್ಸಾಹದಲ್ಲಿದೆ. ಏಕದಿನ ವಿಶ್ವಕಪ್‌ಗೆ ಮುಂಚಿತವಾಗಿ ಈ ಪಂದ್ಯಾವಳಿ ನಡೆಯುತ್ತಿರುವ ಕಾರಣ, ಭಾರತಕ್ಕೆ ಇದು ಮಹತ್ವದ ಪಂದ್ಯಾವಳಿಯಾಗಿದೆ.
ಜಸ್ಪ್ರೀತ್ ಬುಮ್ರಾ ಮತ್ತು ಕೆಎಲ್ ರಾಹುಲ್ ಏಷ್ಯಾಕಪ್‌ಗೆ ಮರಳುವ ಸಾಧ್ಯತೆ ಇರುವುದರಿಂದ, ವಿಶ್ವಕಪ್‌ಗೆ ಮುಂಚಿತವಾಗಿ ಟೀಮ್ ಇಂಡಿಯಾ ಬಲವಾದ ಪ್ಲೇಯಿಂಗ್ 11 ಅಂತಿಮಗೊಳಿಸುವ ಉತ್ಸಾಹದಲ್ಲಿದೆ. ಭಾರತ ಇದುವರೆಗೂ 6 ಬಾರಿ ಏಷ್ಯಾಕಪ್ ಪ್ರಶಸ್ತಿ ಗೆದ್ದಿದ್ದು 7ನೇ ಬಾರಿ ಕಪ್ ಗೆಲ್ಲುವ ನಿರೀಕ್ಷೆಯಲ್ಲಿದೆ.
ಆಗಸ್ಟ್ 16 ಅಥವಾ 17ರಂದು ಬಿಸಿಸಿಐ ಏಷ್ಯಾಕಪ್‌ಗಾಗಿ ಭಾರತ ತಂಡವನ್ನು ಪ್ರಕಟಿಸಲಿದೆ ಎಂದು ಹೇಳಲಾಗಿದೆ. ಕೆಎಲ್ ರಾಹುಲ್ ತಂಡಕ್ಕೆ ಮರಳುವುದು ಬಹುತೇಕ ಖಚಿತವಾಗಿದೆ, ಶ್ರೇಯಸ್ ಅಯ್ಯರ್ ಫಿಟ್‌ನೆಸ್ ಬಗ್ಗೆ ಇನ್ನೂ ಅನುಮಾನ ಇರುವುದರಿಂದ ಅವರು ಏಷ್ಯಾಕಪ್ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಅನುಮಾನವಾಗಿದೆ.
ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಕೊನೆಯ ಎರಡೂ ಪಂದ್ಯಗಳಲ್ಲಿ ಕಣಕ್ಕಿಳಿಯಲಿಲ್ಲ, ಒಬ್ಬರು ಪ್ರಮುಖ ಆಟಗಾರರು ಸದ್ಯ ವಿಶ್ರಾಂತಿಯಲ್ಲಿದ್ದು, ಏಷ್ಯಾಕಪ್‌ನಲ್ಲಿ ಆಡಲಿದ್ದಾರೆ. ಅನುಭವಿ ಆಟಗಾರರ ಜೊತೆ ಹಲವು ಹೊಸ ಆಟಗಾರರು ಕೂಡ ತಂಡದಲ್ಲಿ ಅವಕಾಶ ಪಡೆದುಕೊಳ್ಳುವ ಸಾಧ್ಯತೆ ಇದೆ.












Click it and Unblock the Notifications