India vs Sri Lanka: ವೆಲ್ಲಲಾಗೆ-ಅಸಲಂಕಾ ಸ್ಪಿನ್ ಮೋಡಿ: 213 ರನ್‌ಗಳಿಗೆ ಭಾರತ ಆಲೌಟ್
ಸೋಮವಾರ ನಡೆದ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕೇವಲ 2 ವಿಕೆಟ್ ಕಳೆದುಕೊಂಡು 356 ರನ್ ಗಳಿಸಿದ್ದ ಭಾರತ ತಂಡ, ಮಂಗಳವಾರ ಲಂಕಾ ಸ್ಪಿನ್ ದಾಳಿಗೆ ಸಿಕ್ಕು ನಲುಗಿತು. ಅತ್ಯುತ್ತಮ ಆರಂಭ ಪಡೆದರೂ ನಂತರ ಎಡವಿದ ಭಾರತ ತಂಡ 213 ರನ್‌ಗಳಿಗೆ ಆಲೌಟ್ ಆಗಿದ್ದು, ಶ್ರೀಲಂಕಾ ತಂಡಕ್ಕೆ ಸಾಧಾರಣ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಅತ್ಯುತ್ತಮ ಆರಂಭ ಪಡೆಯಿತು. ರೋಹಿತ್ ಶರ್ಮಾ ಆರಂಭಿಕ ಓವರ್ ಗಳಲ್ಲಿ ಅಬ್ಬರಿಸಿದರು. 48 ಎಸೆತಗಳಲ್ಲಿ 7 ಬೌಂಡರಿ 2 ಭರ್ಜರಿ ಸಿಕ್ಸರ್ ಸಹಿತ 53 ರನ್ ಗಳಿಸಿದ ಅವರು, ತಮ್ಮ 51ನೇ ಅರ್ಧಶತಕ ಪೂರೈಸಿದರು. ಈ ಮೂಲಕ ಅವರು ಏಕದಿನ ಕ್ರಿಕೆಟ್‌ನಲ್ಲಿ 10 ಸಾವಿರ ರನ್ ಪೂರೈಸಿದ ಸಾಧನೆ ಮಾಡಿದರು.

11.1 ಓವರ್ ಗಳಲ್ಲಿ ಗಿಲ್-ರೋಹಿತ್ ಜೋಡಿ 80 ರನ್ ಗಳಿಸುವ ಮೂಲಕ ಮತ್ತೊಂದು ಬೃಹತ್ ಮೊತ್ತ ಕಲೆಹಾಕುವ ಸೂಚನೆ ನೀಡಿದರು. ಆದರೆ ಈ ಸಂದರ್ಭದಲ್ಲಿ ದಾಳಿಗಿಳಿದ ಸ್ಪಿನ್ ಬೌಲರ್ ದುನಿತ್ ವೆಲ್ಲಲಾಗೆ ಭಾರತಕ್ಕೆ ಆಘಾತ ನೀಡಿದರು.
ತಮ್ಮ ಮೊದಲನೇ ಎಸೆತದಲ್ಲೇ ಗಿಲ್ ಅವರನ್ನು ಬೌಲ್ಡ್ ಮಾಡಿದ ಅವರು, ನಂತರದ ಓವರ್ ನಲ್ಲಿ ವಿರಾಟ್ ಕೊಹ್ಲಿ ಅವರ ವಿಕೆಟ್ ಪಡೆದು ಮಿಂಚಿದರು. ತಮ್ಮ ಮೂರನೇ ಓವರ್ ನಲ್ಲೇ ರೋಹಿತ್ ಶರ್ಮಾ ಅವರ ವಿಕೆಟ್ ಪಡೆಯುವ ಮೂಲಕ ಮತ್ತೊಂದು ಆಘಾತ ನೀಡಿದರು.
ಎಲ್ಲಾ 10 ವಿಕೆಟ್‌ಗಳು ಸ್ಪಿನ್ನರ್ ಗೆ
ನಂತರ ಸ್ಪಿನ್ ಬೌಲಿಂಗ್ ದಾಳಿ ಮುಂದುವರೆಸಿದ ಶ್ರೀಲಂಕಾ ಭಾರತದ ಬ್ಯಾಟರ್ ಗಳನ್ನು ಕಟ್ಟಿಹಾಕಿದರು. ಕೆಎಲ್ ರಾಹುಲ್ 39 ರನ್ ಗಳಿಸಿದರೆ, ಇಶಾನ್ ಕಿಶನ್ 33 ರನ್ ಗಳಿಸಿದರು, ಹಾರ್ದಿಕ್ ಪಾಂಡ್ಯ 5, ರವೀಂದ್ರ ಜಡೇಜಾ 4, ಬುಮ್ರಾ 5, ಕುಲದೀಪ್ ಯಾದವ್ 0 ರನ್ ಗಳಿಸಿದರೆ, ಅಕ್ಷರ್ ಪಟೇಲ್ 26 ರನ್ ಗಳಿಸಿದರು.
ಭಾರತ ಅಂತಿಮವಾಗಿ 49.1 ಓವರ್ ಗಳಲ್ಲಿ 213 ರನ್ ಗಳಿಸಿ ಆಲೌಟ್ ಆಯಿತು. ಶ್ರೀಲಂಕಾ ಪರ ದುನಿತ್ ವೆಲ್ಲಲಾಗೆ 5 ವಿಕೆಟ್ ಪಡೆದರೆ, ಚರಿತ್ ಅಸಲಂಕ 4 ವಿಕೆಟ್ ಪಡೆದರು, ಮಹೀಶ್ ತೀಕ್ಷಾಣ 1 ವಿಕೆಟ್ ಪಡೆದುಕೊಂಡರು. ಇದೇ ಮೊದಲ ಬಾರಿಗೆ ತಂಡವೊಂದು ಎಲ್ಲಾ ವಿಕೆಟ್‌ಗಳನ್ನು ಸ್ಪಿನ್ ಬೌಲರ್ ಗಳಿಗೆ ಒಪ್ಪಿಸಿದ ದಾಖಲೆ ಬರೆದಿದೆ. ಶ್ರೀಲಂಕಾ ತಂಡದ ಸ್ಪಿನ್ನರ್ ಗಳು ಮೊದಲ ಬಾರಿಗೆ ಎದುರಾಳಿ ತಂಡದ ಎಲ್ಲಾ ವಿಕೆಟ್ ಪಡೆದ ಸಾಧನೆ ಮಾಡಿದರು.












Click it and Unblock the Notifications