Saina Nehwal Divorce: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ವಿಚ್ಛೇದನ ಘೋಷಣೆ
Saina Nehwal Divorce: ಇತ್ತೀಚಿನ ದಿನಗಳಲ್ಲಿ ವಿವಾಹವಾದ ಕೆಲವೇ ವರ್ಷಗಳಲ್ಲಿ ದಾಂಪತ್ಯ ಜೀವನ ಮುರಿದುಬೀಳುತ್ತಿವೆ. ಅದರಲ್ಲೂ ಹೆಚ್ಛಾಗಿ ಸೆಲೆಬ್ರೆಟಿಗಳು, ಕ್ರೀಡಾಪಟುಗಳೇ ಈ ನಿರ್ಧಾರ ತೆಗೆದುಕೊಳ್ಳುತ್ತಿರುವುದು ಆಶ್ಚರ್ಯಕರ ಸಂಗತಿಯಾಗಿದೆ. ಇದೀಗ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಡಿವೋರ್ಸ್ ನಿರ್ಧಾರವನ್ನು ಘೋಷಿಸಿ ಅಚ್ಚರಿ ಮೂಡಿಸಿದ್ದಾರೆ.
ಭಾರತದ ಸ್ಟಾರ್ ಬ್ಯಾಡ್ಮಿಂಟನ್ ತಾರೆಯರಾದ ಸೈನಾ ನೆಹ್ವಾಲ್ ತಮ್ಮ ದೀರ್ಘಕಾಲದ ಸಂಗಾತಿ ಪರುಪಳ್ಳಿ ಕಶ್ಯಪ್ ಅವರಿಂದ ವಿಚ್ಛೇದನ ಪಡೆಯುವ ನಿರ್ಧಾರ ಮಾಡಿದ್ದಾರೆ. ಈ ಬಗ್ಗೆ ಅವರು ತಮ್ಮ ಇನ್ಸ್ಟಾದಲ್ಲಿ ಬರೆದುಕೊಂಡಿದ್ದು, ಈ ಪೋಸ್ಟರ್ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ಸೈನಾ ನೇಹ್ವಾಲ್ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ನಿರ್ಧಾರವನ್ನು ಸಂಕ್ಷಿಪ್ತ ಹೇಳಿಕೆಯ ಮೂಲಕ ಪ್ರಕಟಿಸಿದ್ದಾರೆ. ಸುಮಾರು 7 ವರ್ಷಗಳ ದಾಂಪತ್ಯದ ನಂತರ ಸೈನಾ ಮತ್ತು ಪರುಪಳ್ಳಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ. ಸೈನಾ ಮತ್ತು ಪರುಪಳ್ಳಿ ಹೈದರಾಬಾದ್‌ನ ಪುಲ್ಲೇಲ ಗೋಪಿಚಂದ್ ಅಕಾಡೆಮಿಯಲ್ಲಿ ಭಾರತೀಯ ಬ್ಯಾಡ್ಮಿಂಟನ್ ಶ್ರೇಯಾಂಕಗಳ ಮೂಲಕ ಒಟ್ಟಿಗೆ ಬೆಳೆದವರಾಗಿದ್ದಾರೆ.
ಸೈನಾ ತಮ್ಮ ಒಲಿಂಪಿಕ್ ಕಂಚು ಮತ್ತು ವಿಶ್ವದ ನಂ. 1 ಶ್ರೇಯಾಂಕದೊಂದಿಗೆ ಜಾಗತಿಕ ಐಕಾನ್ ಆದರು. ಕಶ್ಯಪ್ ಕಾಮನ್ವೆಲ್ತ್ ಕ್ರೀಡಾಕೂಟದ ಚಿನ್ನ ಮತ್ತು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಮ್ಮದೇ ಆದ ದಾಖಲೆಯೊಂದನ್ನು ನಿರ್ಮಾಣ ಮಾಡಿದ್ದರು.
ಜೀವನವು ಕೆಲವೊಮ್ಮೆ ನಮ್ಮನ್ನು ವಿಭಿನ್ನ ದಿಕ್ಕುಗಳಲ್ಲಿ ಕರೆದೊಯ್ಯುತ್ತದೆ. ತುಂಬಾ ಯೋಚನೆ ಮಾಡಿ ಕಶ್ಯಪ್ ಪರುಪಳ್ಳಿ ಮತ್ತು ನಾನು ಬೇರ್ಪಡಲು ನಿರ್ಧರಿಸಿದ್ದೇವೆ. ನಾವು ನಮಗಾಗಿ ಮತ್ತು ಪರಸ್ಪರ ಶಾಂತಿ, ಬೆಳವಣಿಗೆಗಾಗಿ ಈ ಆಯ್ಕೆ ಮಾಡಿದ್ದೇವೆ. ಇಲ್ಲಿಯವರೆಗಿನ ಉತ್ತಮ ನೆನಪುಗಳಿಗೆ ನಾನು ಕೃತಜ್ಞಳಾಗಿದ್ದೇನೆ ಮತ್ತು ಮುಂದುವರಿಯಲು ಉತ್ತಮವಾದದ್ದನ್ನು ಮಾತ್ರ ಬಯಸುತ್ತೇನೆ. ಈ ಸಮಯದಲ್ಲಿ ನಮ್ಮ ಗೌಪ್ಯತೆಯನ್ನು ಅರ್ಥಮಾಡಿಕೊಂಡಿದ್ದಕ್ಕಾಗಿ ಮತ್ತು ಗೌರವಿಸಿದ್ದಕ್ಕಾಗಿ ಧನ್ಯವಾದಗಳು ಎಂದು ಸೈನಾ ನೆಹ್ವಾಲ್ ಭಾನುವಾರ (ಜುಲೈ 13) ರಾತ್ರಿ ಹೇಳಿಕೆಯನ್ನು ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.
ವಿವಾಹ ಆಗಿದ್ದು ಯಾವಾಗ?: ಇದೀಗ ವಿಚ್ಛೇದನಕ್ಕೆ ನಿರ್ಧರಿಸಿರುವ ಬ್ಯಾಡ್ಮಿಂಟನ್ ತಾರೆಗಳಾದ ಸೈನಾ ನೆಹ್ವಾಲ್ ಮತ್ತು ಪರುಪಳ್ಳಿ ಕಶ್ಯಪ್ ಅವರು ಮುಂಬೈನಲ್ಲಿ 14 ಡಿಸೆಂಬರ್ 2018ರಂದು ಸಪ್ತಪದಿ ತುಳಿಯುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ವಿವಾಹದ ಅದ್ಧೂರಿ ಫೋಟೋ ಶೂಟ್ ಮಾಡಿಸಿದ ಫೋಟೋಗಳನ್ನು ಸಹ ಸೈನಾ ನೆಹ್ವಾಲ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲದೆ, ನನ್ನ ಜೀವನದ ಅತ್ಯುತ್ತಮ ಜೋಡಿ.. #justmarried ಅಂತಲೂ ಬರೆದುಕೊಂಡಿದ್ದರು. ಇದಕ್ಕೂ ಮುಂಚೆ ಕಶ್ಯಪ್ ಜೊತೆಗಿನ ಪ್ರೇಮದ ವಿಚಾರವನ್ನು ಸೈನಾ ಸಾರ್ವಜನಿಕವಾಗಿ ಬಹಿರಂಗಪಡಿಸಿ ಗಮನ ಸೆಳೆದಿದ್ದರು.
ಇನ್ನು ಪರುಪಳ್ಳಿ ಕಶ್ಯಪ್ ಅವರು ಬ್ಯಾಡ್ಮಿಂಟನ್‌ನಿಂದ ನಿವೃತ್ತರಾದ ಬಳಿಕ ಕೋಚಿಂಗ್‌ಗೆ ಇಳಿದರು. ವೃತ್ತಿಜೀವನದ ಕೊನೆಯ ವರ್ಷಗಳಲ್ಲಿ ಸೈನಾಗೆ ತರಬೇತಿ ನೀಡಿದರು. 2019ರ ರಾಷ್ಟ್ರೀಯ ಚಾಂಪಿಯನ್‌ಶಿಪ್‌ನಲ್ಲಿ ನೆಹ್ವಾಲ್, ಪಿವಿ ಸಿಂಧು ಅವರನ್ನು ಸೋಲಿಸಿದಾಗ ಕಶ್ಯಪ್ ಕೋಚ್ ಆಗಿದ್ದರು. 2016ರ ಬಳಿಕ ಸೈನಾ ಎದುರಿಸಿದ ಗಾಯಗಳಿಂದ ಚೇತರಿಕೆ ಕಂಡುಕೊಳ್ಳಲು ಕಶ್ಯಪ್ ಸಹಾಯ ಮಾಡಿದ್ದರು. ಹೀಗೆ ಮೈದಾನ ಹಾಗೂ ಪಂದ್ಯಾವಳಿಗಳಲ್ಲಿ ಸೈನಾ ನೆಹ್ವಾಲ್ ಅವರಿಗೆ ಗೇಮ್ ಸ್ಕಿಲ್‌ಗಳನ್ನು ಹೇಳಿಕೊಡುತ್ತಿದ್ದರು. ನೆಹ್ವಾಲ್ ಕೊನೆಯ ಬಾರಿಗೆ ಜೂನ್ 2023ರಲ್ಲಿ ವೃತ್ತಿಪರ ಸರ್ಕ್ಯೂಟ್‌ನಲ್ಲಿ ಆಡಿದ್ದಾರೆ. ಆದರೆ, ಇನ್ನೂ ಬ್ಯಾಡ್ಮಿಂಟನ್ಗೆ ಅವರು ನಿವೃತ್ತಿ ಘೋಷಣೆ ಮಾಡಿಲ್ಲ












Click it and Unblock the Notifications