Paris Olympics 2024: ಕೊನೆಯ ಕ್ಷಣದಲ್ಲಿ ಅಬ್ಬರಿಸಿದ ಭಾರತ; ಹರ್ಮನ್‌ಪ್ರೀತ್ ಮ್ಯಾಜಿಕ್
ಪ್ಯಾರೀಸ್ ಒಲಿಂಪಿಕ್ಸ್‌ನಲ್ಲಿ ಭಾರತ ಸ್ಥಿರ ಪ್ರದರ್ಶನ ನೀಡಿದೆ. ಪೂಲ್ ಬಿ ಪಂದ್ಯದಲ್ಲಿ ಭಾರತ ಕೊನೆಯ ಕ್ಷಣದಲ್ಲಿ ಆರ್ಭಟ ನಡೆಸಿ, ಅರ್ಜೆಂಟಿನಾ ವಿರುದ್ಧ ಅಂಕಗಳನ್ನು ಹಂಚಿಕೊಳ್ಳುವಲ್ಲಿ ಸಫಲವಾಯಿತು. ಈ ಮೂಲಕ ಭಾರತ ಎರಡು ಪಂದ್ಯಗಳಲ್ಲಿ ಒಂದು ಸೋಲು, ಒಂದು ಗೆಲುವು ಸಾಧಿಸಿದ್ದು, ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
ಭಾರತದ ಪರ ಹರ್ಮನ್ ಪ್ರೀತ್ ಸಿಂಗ್ ಕೊನೆಯ ಕ್ಷಣದಲ್ಲಿ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಬಳಸಿಕೊಂಡು ತಂಡಕ್ಕೆ ಆಧಾರವಾದರು. ಅರ್ಜೆಂಟಿನಾ ತಂಡದ ಪರ ಮಾರ್ಟಿನೆಜ್ ಲ್ಯೂಕಾಸ್ 22ನೇ ನಿಮಿಷದಲ್ಲಿ ಗೋಲು ಬಾರಿಸಿ ತಂಡಕ್ಕೆ ಆಧಾರವಾದರು.

ಅರ್ಜಿಂಟಿನಾ ಮುನ್ನಡೆ
ಮೊದಲಾವಧಿಯಲ್ಲಿ ಉಭಯ ತಂಡಗಳು ಅಮೋಘ ಪ್ರದರ್ಶನ ನೀಡಿದ ಫಲವಾಗಿ, ಈ ವೇಳೆ ಯಾವುದೇ ತಂಡ ಅಂಕಗಳಿಸಲು ಸಾಧ್ಯವೇ ಆಗಲಿಲ್ಲ. ಆದರೆ ಆಟಗಾರರು ಚೆಂಡನ್ನು ಗಾಳಿಯಲ್ಲಿ ತೂರುತ್ತಲೇ ಆಟವನ್ನು ಮುಂದುವರಿಸಿದರು. ಅರ್ಜೆಂಟಿನಾ ಈ ವೇಳೆ ರಕ್ಷಣಾ ವಿಭಾಗದಲ್ಲಿ ಸೊಗಸಾದ ಆಟದ ಪ್ರದರ್ಶನ ನೀಡಿತು. ಈ ವೇಳೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಗೋಲು ಬಾರಿಸುವಲ್ಲಿ ಭಾರತ ವಿಫಲವಾಯಿತು.
ಎರಡನೇ ಅವಧಿಯ ಆಟದಲ್ಲಿ ಅರ್ಜೆಂಟಿನಾ ಕೊಂಚ ಅಟ್ಯಾಕಿಂಗ್ ಆಟಕ್ಕೆ ಮಣೆ ಹಾಕಿತು. ಅಲ್ಲದೆ ಚೆಂಡನ್ನು ಹೆಚ್ಚು ಹೊತ್ತು ತನ್ನ ಹತ್ತಿರವೇ ಇಟ್ಟುಕೊಂಡಿತು. ಪರಿಣಾಮ ಈ ಅವಧಿಯ ಕೊನೆಯ ಕ್ಷಣದಲ್ಲಿ ಅರ್ಜಿಂಟಿನಾ ಆಟಗಾರ ಮಾರ್ಟಿನೆಜ್ ಲ್ಯೂಕಾಸ್ ಭಾರತದ ಗೋಲಿ ಶ್ರೀಜೇಶ್ ಅವರನ್ನು ವಂಚಿಸುವಲ್ಲಿ ಸಫಲರಾದರು. ಪರಿಣಾಮ ಅರ್ಜೆಂಟಿನಾ ಮುನ್ನಡೆ ಸಾಧಿಸಿತು.
ಕೊನೆಯ ಕ್ಷಣದಲ್ಲಿ ಹರ್ಮನ್ ಮಿಂಚು
ಮೂರನೇ ಅವಧಿಯಲ್ಲೂ ಗೋಲು ಬಾರಿಸುವ ಭಾರತದ ಆಸೆ ಫಲಿಸಲಿಲ್ಲ. ಹೀಗಾಗಿ ಪಂದ್ಉ ಕೊನೆಯ ಅವಧಿಗೆ ಶಿಫ್ಟ್ ಆಯಿತು. ಈ ಅವಧಿಯಲ್ಲಿ ಭಾರತ ಹಲವು ಬಾರಿ ಗೋಲು ಬಾರಿಸಲು ಇಲ್ಲದ ಸಾಹಸ ಮಾಡಿತು. ಆದರೆ ಫಲ ಲಭಿಸಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಸಿಕ್ಕ ಅವಕಾಶವನ್ನು ತಂಡ ಸಮರ್ಥವಾಗಿ ಬಳಸಿಕೊಂಡಿತು. ಈ ಮೂಲಕ ಅರ್ಜೆಂಟಿನಾ ವಿರುದ್ಧ ಅಂಕವನ್ನು ಹಂಚಿಕೊಂಡಿತು.
ಈ ಪಂದ್ಯದಲ್ಲಿ ಭಾರತ ಒಟ್ಟು 10 ಪೆನಾಲ್ಟಿ ಕಾರ್ನರ್‌ಗಳನ್ನು ಕೈ ಚೆಲ್ಲಿತು. ಮಹತ್ವದ ಪಂದ್ಯದಲ್ಲಿ ಚಾಣಕ್ಷತನ ಮೆರೆದ ಅನುಭವಿ ಹರ್ಮನ್ ಪ್ರಿತ್ ಸಿಂಗ್, ತಂಡದ ಮುಖದಲ್ಲಿ ಮಂದಹಾಸ ಮೂಡಿಸುವಂತೆ ಮಾಡಿದರು. ಇವರು ಬಾರಿಸಿದ ಚೆಂಡನ್ನು ತಡೆಯುವಲ್ಲಿ ಅರ್ಜೆಂಟಿನಾ ಗೋಲಿ ವಿಫಲರಾದರು. ಪರಿಣಾಮ ಪಂದ್ಯ ಡ್ರಾದಲ್ಲಿ ಅಂತ್ಯವಾಯಿತು.












Click it and Unblock the Notifications