India Vs Sri Lanka: ಶ್ರೀಲಂಕಾ ವಿರುದ್ಧ 10 ವಿಕೆಟ್‌ಗಳ ಭರ್ಜರಿ ಗೆಲುವು: 8ನೇ ಬಾರಿ ಏಷ್ಯಾಕಪ್‌ಗೆ ಮುತ್ತಿಟ್ಟ ಭಾರತ
ಶ್ರೀಲಂಕಾದ ಕೊಲಂಬೋದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತ ತಂಡ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಭರ್ಜರಿ ಗೆಲುವಿನ ಮೂಲಕ ಭಾರತ 8ನೇ ಬಾರಿಗೆ ಏಷ್ಯಾಕಪ್ ಗೆದ್ದ ಸಾಧನೆ ಮಾಡಿದೆ.
ಕಳೆದ ಬಾರಿಯ ಏಷ್ಯಾಕಪ್‌ನಲ್ಲಿ ಫೈನಲ್ ಪ್ರವೇಶಿಸುವಲ್ಲಿ ವಿಫಲವಾಗಿದ್ದ ಭಾರತ ತಂಡ ಈ ಬಾರಿ ಅದ್ಭುತ ಪ್ರದರ್ಶನ ನೀಡುವ ಮೂಲಕ ಟ್ರೋಫಿ ಗೆದ್ದುಕೊಂಡಿದೆ. ಕಳೆದ ವರ್ಷ ಚಾಂಪಿಯನ್ ಆಗಿದ್ದ ಶ್ರೀಲಂಕಾ ಈ ಬಾರಿ ಫೈನಲ್‌ನಲ್ಲಿ ಯಾವ ಹಂತದಲ್ಲೂ ಭಾರತಕ್ಕೆ ಸವಾಲು ಎನಿಸಲೇ ಇಲ್ಲ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ 15.2 ಓವರ್ ಗಳಲ್ಲಿ 50 ರನ್ ಗಳಿಸುವಷ್ಟರಲ್ಲಿ ಆಲೌಟ್ ಆಯಿತು. ಈ ಸುಲಭ ಗುರಿಯನ್ನು ಬೆನ್ನತ್ತಿದ ಭಾರತ 6.1 ಓವರ್ ಗಳಲ್ಲಿ ಯಾವುದೇ ವಿಕೆಟ್ ಕಳೆದುಕೊಳ್ಳದೆ ಈ ರನ್ ಗಳಿಸುವ ಮೂಲಕ 10 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿತು. ಇಶಾನ್ ಕಿಶನ್ ಅಜೇಯ 23 ರನ್ ಗಳಿಸಿದರೆ, ಶುಭಮನ್ ಗಿಲ್ ಅಜೇಯ 27 ರನ್ ಗಳಿಸಿದರು.
ಸಿರಾಜ್ ಅಬ್ಬರಕ್ಕೆ ನಲುಗಿದ ಶ್ರೀಲಂಕಾ
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಶ್ರೀಲಂಕಾ ಭಾರತದ ವೇಗಿಗಳ ದಾಳಿಗೆ ತತ್ತರಿಸಿತು. ಬಾಂಗ್ಲಾದೇಶದ ವಿರುದ್ಧದ ಸೂಪರ್ 4 ಪಂದ್ಯದಲ್ಲಿ ವಿಶ್ರಾಂತಿ ಪಡೆದ ಬಳಿಕ ಮೈದಾನಕ್ಕಿಳಿದ ಬುಮ್ರಾ, ಸಿರಾಜ್, ಪಾಂಡ್ಯ ಅಬ್ಬರಿಸಿದರು.
ಮೊದಲನೇ ಓವರ್ ನಲ್ಲೇ ಬುಮ್ರಾ ವಿಕೆಟ್ ಪಡೆಯುವ ಮೂಲಕ ಶುಭಾರಂಭ ಮಾಡಿದರೆ, ಸಿರಾಜ್ ಲಂಕನ್ನರನ್ನು ಎಡಬಿಡದೆ ಕಾಡಿದರು. ತಮ್ಮ ಎರಡನೇ ಓವರ್ ನಲ್ಲೇ 4 ವಿಕೆಟ್ ಪಡೆದ ಅವರು ಲಂಕಾ ತಂಡಕ್ಕೆ ಭಾರಿ ಆಘಾತ ನೀಡಿದರು. ಈ ಆಘಾತದಿಂದ ಶ್ರೀಲಂಕಾ ನಂತರ ಸುಧಾರಿಸಿಕೊಳ್ಳಲೇ ಇಲ್ಲ.
ಒಟ್ಟು ವಿಕೆಟ್ ಪಡೆಯುವ ಮೂಲಕ ಲಂಕಾ ತಂಡದ ಪ್ರಮುಖ ಬ್ಯಾಟರ್ ಗಳನ್ನು ವಾಪಸ್ ಪೆವಿಲಿಯನ್‌ಗೆ ಕಳುಹಿಸಿದರು. 12 ರನ್‌ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ ನಂತರ 50 ರನ್‌ಗಳಿಸುವಷ್ಟರಲ್ಲಿ ಸರ್ವಪತನ ಕಂಡಿತು. ಬುಮ್ರಾ 1 ವಿಕೆಟ್ ಪಡೆದರೆ, ಸಿರಾಜ್ 6 ವಿಕೆಟ್ ಪಡೆದರು, ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರು.
ಫೈನಲ್ ಪಂದ್ಯದಲ್ಲಿ ಹಲವು ದಾಖಲೆಗಳು
ಫೈನಲ್ ಪಂದ್ಯದಲ್ಲಿ 10 ವಿಕೆಟ್‌ಗಳ ಗೆಲುವು ಪಡೆದ ಭಾರತ ಹಲವು ದಾಖಲೆ ನಿರ್ಮಿಸಿತು. ಪಂದ್ಯಾವಳಿಯಲ್ಲಿ 10 ವಿಕೆಟ್ ಗೆಲುವು ಸಾಧಿಸಿರುವುದು ಇದು ಮೂರನೇ ಬಾರಿ. 2003ರಲ್ಲಿ ತ್ರಿಕೋನ ಸರಣಿಯಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಈ ಸಾಧನೆ ಮಾಡಿತ್ತು, 20 ವರ್ಷಗಳ ಬಳಿಕ ಭಾರತ ಮತ್ತೆ ಆ ಸಾಧನೆ ಮಾಡಿದೆ.
ಏಕದಿನ ಕ್ರಿಕೆಟ್‌ನಲ್ಲಿ ಇದು ಭಾರತ ತಂಡಕ್ಕೆ ಸಿಕ್ಕ ಅತ್ಯಂತ ದೊಡ್ಡ ಗೆಲುವಾಗಿದೆ. ಇನ್ನೂ 263 ಎಸೆತಗಳು ಬಾಕಿ ಇರುವಂತೆ ಭಾರತ ತಂಡ ಗೆಲುವು ಸಾಧಿಸಿದೆ. 2001ರಲ್ಲಿ ಕೀನ್ಯಾ ವಿರುದ್ಧ 231 ಎಸೆತಗಳು ಇರುವಂತೆ ಭಾರತ ಗೆಲುವು ಸಾಧಿಸಿದ್ದು ಈವರೆಗಿನ ದಾಖಲೆಯಾಗಿತ್ತು.












Click it and Unblock the Notifications