India vs Pakistan: ಭಾರತದ ವಿರುದ್ಧ ಪಂದ್ಯಕ್ಕೆ ಮುನ್ನ ಪಾಕಿಸ್ತಾನಕ್ಕೆ ಡಬಲ್ ಶಾಕ್!
ಚಾಂಪಿಯನ್ಸ್ ಟ್ರೋಫಿ 2025ರ ಪಂದ್ಯಾವಳಿ ಆಯೋಜನೆ ಮಾಡಿರುವ ಪಾಕಿಸ್ತಾನ ಉದ್ಘಾಟನಾ ಪಂದ್ಯದಲ್ಲೇ ನ್ಯೂಜಿಲೆಂಡ್ ವಿರುದ್ಧ ಸೋತು ಆಘಾತ ಅನುಭವಿಸಿದೆ. ಫೆಬ್ರವರಿ 23 ರಂದು ಭಾರತದ ವಿರುದ್ಧ ನಿರ್ಣಾಯಕ ಪಂದ್ಯವನ್ನಾಡಲಿದೆ. ಈ ಪಂದ್ಯದಲ್ಲಿ ಸೋತರೆ ಪಾಕಿಸ್ತಾನ ಟೂರ್ನಿಯಿಂದಲೇ ಹೊರಬೀಳುವುದು ಬಹುತೇಕ ಖಚಿತವಾಗಲಿದೆ. ಭಾರತದ ವಿರುದ್ಧದ ಪಂದ್ಯಕ್ಕೆ ಮುನ್ನವೇ ಪಾಕಿಸ್ತಾನಕ್ಕೆ ಭಾರಿ ಆಘಾತ ಎದುರಾಗಿದೆ.
ನ್ಯೂಜಿಲೆಂಡ್ ವಿರುದ್ಧದ ಪಂದ್ಯದ ವೇಳೆ ಗಾಯಗೊಂಡಿದ್ದ ತಂಡದ ಆರಂಭಿಕ ಬ್ಯಾಟರ್ ಫಖಾರ್ ಜಮಾನ್ ಇದೀಗ ಚಾಂಪಿಯನ್ಸ್ ಟ್ರೋಫಿಯಿಂದಲೇ ಹೊರಬಿದ್ದಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ವಿಚಾರವನ್ನು ಖಚಿತಪಡಿಸಿದ್ದು ಇಮಾಮ್-ಉಲ್-ಹಕ್‌ರನ್ನು ಬದಲೀ ಆಟಗಾರನಾಗಿ ತಂಡಕ್ಕೆ ಸೇರ್ಪಡೆ ಮಾಡಿದೆ.

2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತದ ವಿರುದ್ಧ ಅಮೋಘ ಶತಕ ಸಿಡಿಸಿದ್ದ ಫಖಾರ್ ಜಮಾನ್ ಪಾಕಿಸ್ತಾನ ಪ್ರಶಸ್ತಿ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಈ ಬಾರಿ ಕೂಡ ಭಾರತದ ವಿರುದ್ಧ ಮಿಂಚುವ ವಿಶ್ವಾಸದಲ್ಲಿದ್ದ ಫಖಾರ್ ಜಮಾನ್ ಪಂದ್ಯಕ್ಕೆ ಮುನ್ನವೇ ಟೂರ್ನಿಯಿಂದಲೇ ಹೊರಬಿದ್ದಿದ್ದಾರೆ.
ಫೆಬ್ರವರಿ 23ರಂದು ದುಬೈನ ನ್ಯಾಷನಲ್ ಸ್ಟೇಡಿಯಂನಲ್ಲಿ ಪಂದ್ಯ ನಡೆಯಲಿದೆ. ಈಗಾಗಲೇ ಮೊದಲ ಪಂದ್ಯ ಸೋತಿರುವ ಪಾಕಿಸ್ತಾನಕ್ಕೆ ಭಾರತದ ವಿರುದ್ಧದ ಪಂದ್ಯ ನಿರ್ಣಾಯಕವಾಗಿದೆ. ಸೆಮಿಫೈನಲ್ ಆಸೆ ಜೀವಂತವಾಗಿರಿಸಿಕೊಳ್ಳಲು ಪಾಕಿಸ್ತಾನ ಈ ಪಂದ್ಯವನ್ನು ಗೆಲ್ಲಲೇಬೇಕಾಗಿದೆ. ಆದರೆ ಬಲಿಷ್ಠವಾಗಿರುವ ಭಾರತ ಪಾಕಿಸ್ತಾನವನ್ನು ಸೋಲಿಸುವ ವಿಶ್ವಾಸದಲ್ಲಿದೆ.
ಪಾಕಿಸ್ತಾನ ತಂಡಕ್ಕೆ ದಂಡ
ಕರಾಚಿನ ನ್ಯಾಷನಲ್ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್‌ಗಾಗಿ ಪಾಕಿಸ್ತಾನದ ವಿರುದ್ಧ ಐಸಿಸಿ ಕ್ರಮ ಕೈಗೊಂಡಿದ್ದು ಪಂದ್ಯ ಶುಲ್ಕದ 5% ದಂಡ ವಿಧಿಸಿದೆ. ಟಾಸ್ ಗೆದ್ದ ಪಾಕಿಸ್ತಾನ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು, ಆದರೆ ನಿಗದಿತ ಸಮಯಕ್ಕೆ 50 ಓವರ್ ಗಳನ್ನು ಮುಗಿಸಲು ಸಾಧ್ಯವಾಗಲಿಲ್ಲ. ನಿಗದಿತ ಸಮಯಕ್ಕೆ ಮುಂಚೆ ಒಂದು ಓವರ್ ಕಡಿಮೆ ಮಾಡಿದ್ದರಿಂದ ಪಾಕಿಸ್ತಾನ ಈಗ ದಂಡ ಕಟ್ಟಬೇಕಾಗಿದೆ.
ಐಸಿಸಿ ಪತ್ರಿಕಾ ಪ್ರಕಟಣೆ ಹೊರಡಿಸಿ, ಪಾಕಿಸ್ತಾನಕ್ಕೆ ತಮ್ಮ ಪಂದ್ಯ ಶುಲ್ಕದ 5% ದಂಡ ವಿಧಿಸುವುದಾಗಿ ಘೋಷಿಸಿದೆ. "ಆಟಗಾರರು ಮತ್ತು ಆಟಗಾರರ ಬೆಂಬಲ ಸಿಬ್ಬಂದಿಗಾಗಿ ಐಸಿಸಿ ನೀತಿ ಸಂಹಿತೆಯ ಆರ್ಟಿಕಲ್ 2.22 ರ ಪ್ರಕಾರ, ಕನಿಷ್ಠ ಓವರ್ ದರದ ಅಪರಾಧಗಳಿಗೆ ಸಂಬಂಧಿಸಿದಂತೆ, ಆಟಗಾರರು ತಮ್ಮ ತಂಡವು ನಿಗದಿಪಡಿಸಿದ ಸಮಯದಲ್ಲಿ ಬೌಲ್ ಮಾಡಲು ವಿಫಲವಾದ ಪ್ರತಿ ಓವರ್‌ಗೆ ಅವರ ಪಂದ್ಯ ಶುಲ್ಕದ ಐದು ಪ್ರತಿಶತದಷ್ಟು ದಂಡ ವಿಧಿಸಲಾಗುತ್ತದೆ" ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಗೆಲುವು ಸಾಧಿಸಿದ್ದು ಪಾಕಿಸ್ತಾನದ ಸಂಕಷ್ಟ ಹೆಚ್ಚಿಸಿದೆ. ಭಾರತದ ವಿರುದ್ಧ ಸೋತರೆ ಪಾಕಿಸ್ತಾನ ಟೂರ್ನಿಯಿಂದ ಹೊರಬೀಳುವುದು ಬಹುತೇಕ ಖಚಿತವಾಗಲಿದೆ. ಪಾಕಿಸ್ತಾನದ ಬೌಲಿಂಗ್ ಇದೀಗ ನಾಯಕನಿಗೆ ದೊಡ್ಡ ಚಿಂತೆಯಾಗಿದೆ.












Click it and Unblock the Notifications